ಮಂಡ್ಯ ಹಾಲು ಒಕ್ಕೂಟದಿಂದ ರೈತರಿಗೆ ಬಿಗ್ ಶಾಕ್:ಖರೀದಿ ಹಾಲಿನ ದರ ಕಡಿತ
ಮಂಡ್ಯ, ಜೂನ್ 2: ರೈತರಿಂದ ಖರೀದಿಸುವ ಹಾಲಿಗೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ( ಮನ್ ಮುಲ್ ) ಲೀಟರ್ ಗೆ 1 ರೂ. ಕಡಿತ ಮಾಡಿ ಆದೇಶ ಹೊರಡಿಸಿದೆ.
ಮೇ.26ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದ್ದು, ಇಂದು ಜೂ.1 ರಿಂದ ಮುಂದಿನ ಆದೇಶದವರೆಗೆ ಈ ನೂತನ ದರ ಪರಿಷ್ಕರಣೆ ಮುಂದುವರಿಯುತ್ತದೆ ಎಂದು ಮನ್‌ಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ॥ ಪಿ.ಆರ್.ಮಂಜೇಶ್ ಸುತ್ತೋಲೆ ಹೊರಡಿಸಿದ್ದಾರೆ.

ಜಿಲ್ಲಾ ಹಾಲು ಒಕ್ಕೂಟವು ದಿನಂಪ್ರತಿ 9,38,035 ಕೆಜಿ ಹಾಲನ್ನು ಸಂಗ್ರಹಿಸುತ್ತಿದೆ. ಬೇಸಿಗೆ ಕಾಲದಲ್ಲಿ ಹಸಿರು ಮೇವಿನ ಕೊರತೆಯಿಂದ ಉತ್ಪಾದಕರ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ಪ್ರತಿ ಲೀಟರ್ ಹಾಲಿಗೆ 2 ರೂ. ಹೆಚ್ಚುವರಿಯಾಗಿ ಪ್ರೋತ್ಸಾಹ ಧನ ನೀಡಲಾಗುತ್ತಿತ್ತು.
ಸದ್ಯ ನೂತನ ದರದಂತೆ ಸಂಘಗಳಿಗೆ ಶೇ 4.0 ಜಿಡ್ಡು ಮತ್ತು ಶೇ 8.5 ಜಿಡ್ಡೇತರ ಘನಾಂಶಕ್ಕೆ 33.15 ರೂ. ಬದಲು 32.15 ರೂ ಹಾಗೂ ಉತ್ಪಾದಕರಿಗೆ 32.25 ರೂ ಬದಲು 31.25 ರೂ. ನಿಗಧಿಗೊಳಿಸಲಾಗಿದೆ.
ಒಕ್ಕೂಟದ ವ್ಯಾಪ್ತಿಯಲ್ಲಿ ಮುಂಗಾರು ಪೂರ್ವ ಮಳೆ ಅರಂಭವಾಗಿದ್ದು, ಹಸಿರು ಮೇವಿನ ಲಭ್ಯತೆ ಸುಧಾರಿಸಿದೆ. ಹೀಗಾಗಿ ದರ ಕಡಿತ ಮಾಡಲಾಗಿದೆ ಎಂದು ಮನ್‌ಮುಲ್ ಆಡಳಿತ ಮಂಡಳಿ ದರ ಇಳಿಕೆಗೆ ಸಮರ್ಥನೆ ನೀಡಿದ್ದಾರೆ.

ಕೆ.ಎಂ.ದೊಡ್ಡಿ: ಚಾಂಷುಗರ್ ಕಾರ್ಖಾನೆ ಆರಂಭ
ಮಂಡ್ಯ: ಕಳೆದ ಬಾರಿ 10,35 ಲಕ್ಷ ಟನ್ ಕಬ್ಬು ಅರೆದು ದಾಖಲೆ ನಿರ್ಮಿಸಿದ್ದ ಕೆ.ಎಂ.ದೊಡ್ಡಿ ಚಾಂಷುಗರ್ ಕಾರ್ಖಾನೆ ಜೂನ್ 1ರಿಂದ ಪುನರಾರಂಭಗೊಂಡಿದೆ. ಅಂತೆಯೇ ಈ ಬಾರಿ ಹಲವು ಕಾರಣದಿಂದ ಕಬ್ಬಿನ ಅಭಾವ ಎದುರಾಗುವ ಸಾಧ್ಯತೆ ಇದ್ದು, ಈ ನಡುವೆಯೂ 10 ಲಕ್ಷ ಟನ್ ಅರೆಯುವ ಗುರಿ ಹೊಂದಿದೆ ಎಂದು ವರದಿಯಾಗಿದೆ.
ಹಿಂದಿನ ವರ್ಷದಲ್ಲಿ ಕಾರ್ಖಾನೆ ಪ್ರತಿದಿನ 3500 ಟನ್ ಅರೆಯುವ ಸಾಮರ್ಥ್ಯ ಹೊಂದಿತ್ತು. ಆದರೆ 2018ರಂದು ನೂತನ ತಂತ್ರಜ್ಞಾನದ ಯಂತ್ರೋಪಕರಣಗಳನ್ನು ಅಳವಡಿಸಿರುವ ಹಿನ್ನಲೆಯಲ್ಲಿ 5500 ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಲಾಗಿದೆ. ಕಳೆದ ಸಾಲಿನಲ್ಲಿ ಕಬ್ಬು ನುರಿಸಿದ್ದ ಹಣವನ್ನು ರೈತರಿಗೆ ಸ್ವಲ್ಪ ವಿಳಂಬವಾದರೂ ಸಹ ಪೂರ್ಣ ಪ್ರಮಾಣದಲ್ಲಿ ನೀಡುವುದರ ಜೊತೆಗೆ ಬಾಕಿ ರಹಿತವಾಗಿ ಕಾರ್ಖಾನೆ ಆರಂಭಿಸಲು ಆಡಳಿತ ಮಂಡಳಿ ಸಿದ್ಧತೆ ನಡೆಸಿದೆ. ಅವಧಿಗೂ ಮುನ್ನ ಕಬ್ಬು ಅರಿಯುವ ಕಾರ್ಯಕ್ಕೆ ಸಿದ್ಧತೆ ಮಾಡಿಕೊಂಡಿದೆ. ಆಗಸ್ಟ್‌ನಲ್ಲಿ ಪ್ರಾರಂಭವಾಗುತ್ತಿದ್ದ ಕಾರ್ಖಾನೆ ಈ ಬಾರಿ ಎರಡು ತಿಂಗಳ ಮುಂಚಿತವಾಗಿ ಆರಂಭಗೊಂಡಿದೆ.












Click it and Unblock the Notifications