ಘಮ್ಮೆನ್ನುತ್ತಿದ್ದ ಹೂವಿನ ತೋಟಗಳಲ್ಲೀಗ ಗಂವ್ವೆನ್ನುವ ಮೌನ

By: ಮಂಡ್ಯ ಪ್ರತಿನಿಧಿ
Subscribe to Oneindia Kannada

ಮಂಡ್ಯ, ನವೆಂಬರ್ 5: ಈ ಹಿಂದೆಲ್ಲ ನವೆಂಬರ್-ಡಿಸೆಂಬರ್ ಹೊತ್ತಿಗೆ ಮಂಡ್ಯದತ್ತ ತೆರಳಿದವರಿಗೆ ಹಸಿರಿನಿಂದ ಕಂಗೊಳಿಸುತ್ತಿದ್ದ ಕಬ್ಬು, ಭತ್ತದ ಗದ್ದೆಗಳು, ಘಮ್ಮೆನ್ನುತ್ತಿದ್ದ ಸೇವಂತಿಗೆ, ಚೆಂಡು ಹೂ, ತರಕಾರಿಗಳು ಕಣ್ಸೆಳೆಯುತ್ತಿದ್ದವು. ರೈತರ ಮುಖದಲ್ಲಿ ಮಂದಹಾಸ ಮಿನುಗುತ್ತಿತ್ತು.

ಆದರೆ, ಈಗ ಬರಡಾದ ಭೂಮಿ, ನೀರಿಲ್ಲದೆ ಒಣಗುತ್ತಿರುವ ಕೃಷಿ ಬೆಳೆ, ಅದನ್ನು ಉಳಿಸಿಕೊಳ್ಳುವ ಸಲುವಾಗಿ ಎಲ್ಲಿಂದಲೋ ನೀರು ತಂದು ಹಾಕುತ್ತಿರುವ ರೈತರು ಕಾಣಿಸುತ್ತಾರೆ. ಇಂಥ ದೃಶ್ಯವನ್ನು ನೋಡಿದರೆ ಅನ್ನದಾತನಿಗೆ ಬಂದ ಸಂಕಷ್ಟ ಎಂಥದ್ದು ಎಂಬುವುದು ಅರಿವಾಗುತ್ತದೆ.

ಬೆಳೆ ಬೆಳೆಯಲು ಸಾಧ್ಯವಾಗದೆ, ಮನೆಯಲ್ಲಿ ಸಾಕಿ ಬೆಳೆಸಿದ ಜಾನುವಾರುಗಳಿಗೆ ಮೇವು ಒದಗಿಸಲಾಗದೆ ಅವುಗಳನ್ನೇ ಮಾರಿ, ತಿನ್ನುವ ದಯನೀಯ ಸ್ಥಿತಿಗೆ ರೈತರು ಬಂದು ನಿಂತಿದ್ದಾರೆ. ಸಾಲ ಮಾಡಿ ಹೊಟ್ಟೆ ಹೊರೆಯುವಂತಾಗಿದೆ. ಇದು ಕೇವಲ ಮಂಡ್ಯದ ಪರಿಸ್ಥಿತಿಯಲ್ಲ ಹಳೇ ಮೈಸೂರು ವ್ಯಾಪ್ತಿಯಲ್ಲಿ ಎಲ್ಲೆಡೆ ಇಂತಹದ್ದೇ ಪರಿಸ್ಥಿತಿ ಕಂಡು ಬರುತ್ತಿದೆ.[ಬರ ಪರಿಹಾರಕ್ಕೆ ಮಾನದಂಡ ಬದಲಾವಣೆ ಅವಶ್ಯ: ಎಸ್.ಎಂ.ಕೃಷ್ಣ]

Water tank

ಕೇಂದ್ರದ ಬರ ಅಧ್ಯಯನ ತಂಡ ಭೇಟಿ ನೀಡಿ, ಸ್ಥಳೀಯ ಜನರ ಪರಿಸ್ಥಿತಿಯನ್ನು ಅವಲೋಕಿಸಿ ವಿಷಾದ ವ್ಯಕ್ತಪಡಿಸಿದೆ. ಮಂಡ್ಯದಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಎಂ ತವರಲ್ಲೂ ರೈತರ ಆತ್ಮಹತ್ಯೆ ಪ್ರಕರಣ ನಿಂತಿಲ್ಲ. ಚುನಾವಣೆ ಸಂದರ್ಭ ಜನಪ್ರತಿನಿಧಿಗಳೆಲ್ಲ ತಾವು ರೈತರ ಮಕ್ಕಳು ಎನ್ನುತ್ತಾ ಅನುಕಂಪ ಗಿಟ್ಟಿಸಿಕೊಂಡು ಮತ ಪಡೆದುಕೊಳ್ಳುತ್ತಾರೆ. ಆ ನಂತರ ಯಾದರೂ ಈ ಕಡೆ ತಲೆ ಹಾಕುತ್ತಿಲ್ಲ.[ಬರ ಅಧ್ಯಯನ ತಂಡದೆದುರು ಕಣ್ಣೀರಾದ ಅನ್ನದಾತ!]

ಇವತ್ತು ಎಷ್ಟು ಜನಪ್ರತಿನಿಧಿಗಳು ಹಳ್ಳಿಗಳಿಗೆ ಭೇಟಿ ನೀಡಿ, ರೈತರ ಸಮಸ್ಯೆಯನ್ನು ಆಲಿಸಿದ್ದಾರೆ? ಹಲವು ಗ್ರಾಮಗಳಲ್ಲಿ ಕೃಷಿಗೆ ಹೋಗಲಿ ಕುಡಿಯಲು ಕೂಡ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ರಾಜಕೀಯ ಬದಿಗೊತ್ತಿ ರೈತರನ್ನು ರಕ್ಷಿಸುವ ಕಾರ್ಯ ಸರಕಾರ ಮಾಡಬೇಕಾಗಿದೆ.

ಆದರೆ, ಅದೆಲ್ಲ ಬಿಟ್ಟು ರಾಜಕೀಯವಾಗಿ ಬೇಳೆ ಬೇಯಿಸಿಕೊಳ್ಳುವುದರಲ್ಲಿ ನಿರತರಾಗಿರುವುದು ಅಸಹ್ಯ ಹುಟ್ಟಿಸುತ್ತಿದೆ. ಈಗಾಗಲೇ ಕೇಂದ್ರ ಬರ ಅಧ್ಯಯನ ತಂಡ ಬಂದು, ಪರಿಶೀಲಿಸಿ ಮಾಹಿತಿ ಪಡೆದು ತೆರಳಿದೆ. ಅಷ್ಟಕ್ಕೆ ಎಲ್ಲವೂ ಮುಗಿದು ಹೋಗಿಲ್ಲ. ಮುಂದಿನ ಮುಂಗಾರಿನ ತನಕ ಬದುಕು ಹೇಗೆ ಎಂಬ ಭಯ ರೈತರು ಸೇರಿದಂತೆ ಎಲ್ಲರನ್ನು ಕಾಡತೊಡಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mandya farmers face severe drought this year. Central drought study team visited Mandya district. But, still farmers are not confident about compensation.
Please Wait while comments are loading...