ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಕಾವೇರಿ ಕಣ್ಣೀರಿ'ಗೆ ಸಾಕ್ಷಿಯಾದ ಮಂಡ್ಯ ದಸರಾ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಅಕ್ಟೋಬರ್ 12: ನಾಡದೇವಿ ಚಾಮುಂಡೇಶ್ವರಿಯನ್ನು ಹೊತ್ತ ಅದ್ಧೂರಿ ರಥ, ಕಾವೇರಿ ವಿವಾದ ಬಿಂಬಿಸುವ ಕಾವೇರಿ ಕಣ್ಣೀರು', ಆಕರ್ಷಕವಾಗಿ ಅರಳಿ ನಿಂತ ಕಮಲ', ರಾಮಾಯಣ ನೆನಪಿಸುವ ವೈಭವದ ದೃಶ್ಯಾವಳಿ, ಭಕ್ತಿ-ಭಾವ ಮೂಡಿಸುವ ಶಿವಲಿಂಗ, ಮಂಡ್ಯ ಜಿಲ್ಲೆಯನ್ನು ಹಸಿರು ಜಿಲ್ಲೆಯನ್ನಾಗಿಸಿದ ಸರ್ ಎಂ.ವಿಶ್ವೇಶ್ವರಯ್ಯ, ಮಹಿಷಾಸುರನ ವೈಭವ.

-ಮಂಡ್ಯ ಯೂತ್ ಗ್ರೂಪ್ ನಿಂದ ಸರಳ ಮತ್ತು ಸಾಂಪ್ರದಾಯಿಕವಾಗಿ ನಡೆದ ಮಂಡ್ಯ ದಸರಾ' ಮೆರವಣಿಗೆಯ ಆಕರ್ಷಕ ಸ್ತಬ್ಧಚಿತ್ರಗಳು ಜನ-ಮನ ಸೂರೆಗೊಂಡವು ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಮಂಡ್ಯ ದಸರಾ'ವನ್ನು ಸರಳವಾಗಿ ಆಚರಿಸಿದರೂ ಆಕರ್ಷಣೀಯವಾಗಿತ್ತು.[ಜಂಬೂಸವಾರಿಗೆ ಕಳೆಗಟ್ಟಿದ ಸ್ತಬ್ಧ ಚಿತ್ರ, ಕಲಾತಂಡಗಳು]

Mandya dasara

ನಗರದ ಕಾಳಿಕಾಂಬ ದೇವಸ್ಥಾನದ ಸಮೀಪವಿರುವ ಗಜೇಂದ್ರ ಮೋಕ್ಷ ಕೊಳದ ಆವರಣದಲ್ಲಿರುವ ಬನ್ನಿಮರಕ್ಕೆ ಸಂಸದ ಸಿ.ಎಸ್.ಪುಟ್ಟರಾಜು ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು. ಮಂಡ್ಯ ಯೂತ್ ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ ಬನ್ನಿ ಮರದ ಎಲೆಯನ್ನು ಕತ್ತರಿಸಿ ದೇವರಿಗೆ ಅರ್ಪಿಸಿದರು.

ನಂತರ ನಾಡದೇವಿ ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ಸಂಸದ ಸಿ.ಎಸ್.ಪುಟ್ಟರಾಜು ಅವರು ನಂತರ ಜಾನಪದ ಕಲಾತಂಡಗಳ ಮೆರವಣಿಗೆಗೆ ಚಾಲನೆ ನೀಡಿದರು. ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮಾ, ಯೂತ್ ಗ್ರೂಪ್ ಉಪಾಧ್ಯಕ್ಷ ಎಚ್.ಎಸ್.ಮಂಜು, ದಿನಗೂಲಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಅಪ್ಪಾಜಪ್ಪ ಇತರರು ಹಾಜರಿದ್ದರು.

ಶಾಂತಿಯ ಸಂಕೇತವನ್ನು ಪ್ರತಿಬಿಂಬಿಸುವಂತಿದ್ದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ಮಹಾ ವಿದ್ಯಾಲಯದ ಕಮಲದ ಕಲಾಕೃತಿ ಮತ್ತು ಅದರೊಳಗಿನ ರಾಜಯೋಗಿ ಸ್ತಬ್ಧಚಿತ್ರ ನೋಡಲು ಚಿತ್ತಾಕರ್ಷಕವಾಗಿತ್ತು. ಇಸ್ಕಾನ್ ಸಂಸ್ಥೆಯವರು ರಾಮಾಯಣವನ್ನು ನೆನಪಿಸುವ ವೈಭವವನ್ನು ಪಾತ್ರಧಾರಿಗಳ ಸಹಿತ ಮೂಡಿಸಿದ್ದರು. ಆಲಕೆರೆ ಗ್ರಾಮಸ್ಥರು ಮೂಡಿಸಿದ್ದ ಶಿವಲಿಂಗ ಕಲಾಕೃತಿ ನೆರೆದಿದ್ದ ಜನರಲ್ಲಿ ಭಕ್ತಿಭಾವ ಮೂಡಿಸುವಂತಿತ್ತು.[ಮಳೆ ಸಿಂಚನದ ನಡುವೆ ಸಂಚಲನ ಮೂಡಿಸಿದ ವಿಶ್ವವಿಖ್ಯಾತ ಜಂಬೂ ಸವಾರಿ]

Mandya dasara

ಕಡಿಲುವಾಗಿಲು ಗ್ರಾಮದವರಿಂದ ರೂಪುಗೊಂಡಿದ್ದ ಕೃಷ್ಣರಾಜಸಾಗರ ಅಣೆಕಟ್ಟು ನಿರ್ಮಿಸಿ ಮಂಡ್ಯ ಜಿಲ್ಲೆಗೆ ಹಸಿರ ಸಿರಿಯನ್ನು ತುಂಬಿಸಿದ ಸರ್.ಎಂ.ವಿಶ್ವೇಶ್ವರಯ್ಯ ಕಲಾಕೃತಿ ಹಾಗೂ ಗುಡಿಗೇನಹಳ್ಳಿ ಆರಾಧ್ಯರ ತಂಡ ಅರಳಿಸಿದ್ದ ಮಹಿಷಾಸುರ ಸ್ತಬ್ಧಚಿತ್ರಗಳು ನೋಡುಗರ ಮನಸೂರೆಗೊಂಡವು.

ಕೃಷ್ಣೇಗೌಡರ ತಂಡದ ಚಿಲಿಪಿಲಿ ಗೊಂಬೆ, ಚೀರನಹಳ್ಳಿ ಜವರಾಯಿ ತಂಡದವರು ಪ್ರಸ್ತುತಪಡಿಸಿದ ಗಾರುಡಿಗೊಂಬೆಗಳ ಕುಣಿತ ನೋಡುಗರನ್ನು ರಂಜಿಸಿದವು. ಹರೀಶ್ ತಂಡದ ಎಂ.ನಗಾರಿ, ಕೆಂಪಣ್ಣ ತಂಡದವರಿಂದ ಮೂಡಿಬಂದ ನಾಸಿಕ್ ಡೊಳ್ಳು, ಡೊಳ್ಳು ಕುಣಿತ, ಉಮ್ಮಡಹಳ್ಳಿ ಬೋರಯ್ಯ ತಂಡದ ತಮಟೆ ಸದ್ದು ಎಲ್ಲರನ್ನು ಮಂಡ್ಯ ದಸರಾ ಮೆರವಣಿಗೆಯತ್ತ ಆಕರ್ಷಿಸುವಂತೆ ಮಾಡಿದ್ದವು.

ದೇವರಾಜು ತಂಡದವರ ಪೂಜಾ ಕುಣಿತ, ಭೂತನಹೊಸೂರು ಸತೀಶ್ ತಂಡದ ನಂದಿಧ್ವಜ ಕುಣಿತ, ವೀರಭದ್ರ ಕುಣಿತ, ಮರಗಾಲು ಕುಣಿತ, ವೀರಭದ್ರ ಕುಣಿತ, ಜಡೆ ಕೋಲಾಟ, ಮರಗಾಲು ಕುಣಿತ, ದೊಣ್ಣೆ ವರಸೆಗಳೆಲ್ಲವೂ ಮೆರುಗು ನೀಡಿದ್ದವು. ಬೆಂಕಿ ಭರಾಟೆಯಂತೂ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿತ್ತು.[ಮಳೆಗಾಗಿ ಸಿದ್ದು ಪ್ರಾರ್ಥನೆ.. ಮೈಸೂರಿನಲ್ಲಿ ವರುಣನ ಸಿಂಚನ]

Mandya dasara

ಮೆರವಣಿಗೆ ಸಾಗಿದ ಹಾದಿ
ಕಾಳಿಕಾಂಬ ದೇಗುಲದ ಮುಂಭಾಗದಿಂದ ಹೊರಟ ಮೆರವಣಿಗೆ ಬೆಂಗಳೂರು-ಮೈಸೂರು ಹೆದ್ದಾರಿ ತಲುಪಿ ನಂತರ ಮಹಾವೀರ ವೃತ್ತಕ್ಕೆ ಆಗಮಿಸಿತು. ಅಲ್ಲಿಂದ ವಿಶ್ವೇಶ್ವರಯ್ಯ ರಸ್ತೆ, ಹೊಸಹಳ್ಳಿ ವೃತ್ತ, ನೂರಡಿ ರಸ್ತೆ, ಬನ್ನೂರು ರಸ್ತೆ ಮಾರ್ಗವಾಗಿ ಚಾಮುಂಡೇಶ್ವರಿ ನಗರದ ಚಾಮುಂಡೇಶ್ವರಿ ದೇವಾಲಯದಲ್ಲಿ ಮೆರವಣಿಗೆ ಅಂತ್ಯಗೊಂಡಿತು.

ಜನಸಾಗರ
ಮಂಡ್ಯ ಯೂತ್ ಗ್ರೂಪ್ ವತಿಯಿಂದ ನಡೆದ ಮಂಡ್ಯ ದಸರಾ ಮೆರವಣಿಗೆ ವೀಕ್ಷಣೆಗೆ ರಸ್ತೆಯ ಇಕ್ಕೆಲಗಳಲ್ಲಿ ಜನರು ನಿಂತಿದ್ದರು. ದೇವಿ ರಥ ತಮ್ಮ ಆಗಮಿಸುತ್ತಿದ್ದಂತೆ ಭಕ್ತಿಯಿಂದ ಕೈಮುಗಿದರು. ಸ್ತಬ್ಧ ಚಿತ್ರಗಳು, ಜಾನಪದ ಕಲಾತಂಡಗಳ ಮೆರವಣಿಗೆಯನ್ನು ಕಣ್ತುಂಬಿಕೊಂಡರು.

ಯೂತ್ ಗ್ರೂಪ್ ಪದಾಧಿಕಾರಿಗಳಾದ ಡಾ.ಯಾಶಿಕಾ ಅನಿಲ್, ಪ್ರಮೋದ್, ಮಲ್ಲೇಶ್, ಮರಿಲಿಂಗೇಗೌಡ, ನಾಗೇಶ್, ವಿನಯ್, ಬಸವರಾಜು, ನರೇಂದ್ರ, ದರ್ಶನ್, ಅಕ್ಕಿ ರಾಜಣ್ಣ, ಸಂದೇಶ್‍ಬಾಬು, ಪ್ರತಾಪ್, ಮೈಸೂರು ಮಂಜು, ಸರ್ಕಾರಿ ಮಹಾ ವಿದ್ಯಾಲಯದ ಪ್ರಾಂಶುಪಾಲ ಎ.ಬಿ.ಶಂಕರ್ ಮತ್ತಿತರರಿದ್ದರು.[ಮೈಸೂರು ಅರಮನೆ ಆಯುಧ ಪೂಜೆಯ ವೈಖರಿ, ನಲಿದಾಡಿದ ಯದುವೀರ್ ಪತ್ನಿ ತ್ರಿಷಿಕಾ ಕುಮಾರಿ]

ಕಾವೇರಿ ವಿವಾದ ಪ್ರತಿಬಿಂಬಿಸಿದ ಕಾವೇರಿ ಕಣ್ಣೀರು'
ಮಂಡ್ಯ ಯೂತ್ ಗ್ರೂಪ್ ಮಂಡ್ಯ ದಸರಾ' ಸ್ತಬ್ಧ ಚಿತ್ರಗಳಲ್ಲಿ ರೂಪಿಸಿದ್ದ ಕಾವೇರಿ ಕಣ್ಣೀರು' ಸ್ತಬ್ಧ ಚಿತ್ರ ಕಾವೇರಿ ವಿವಾದವನ್ನು ಪ್ರತಿಬಿಂಬಿಸುವಂತಿತ್ತು. ಸುಪ್ರೀಂಕೋರ್ಟ್ ನ ದೊಡ್ಡ ಕಲಾಕೃತಿಯ ಕೆಳಭಾಗದಲ್ಲಿ ಕೃಷ್ಣರಾಜಸಾಗರ ಅಣೆಕಟ್ಟು ನಿರ್ಮಿಸಲಾಗಿದ್ದು, ಒಂದೆಡೆ ಕರ್ನಾಟಕ, ಮತ್ತೊಂದು ಕಡೆ ತಮಿಳುನಾಡಿನ ಚಿತ್ರಣವನ್ನು ಬಿಂಬಿಸುವಂತೆ ರೂಪಿಸಲಾಗಿತ್ತು.

ಕರ್ನಾಟಕದ ಭಾಗದಲ್ಲಿ ಒಣಭೂಮಿ, ಒಣ ಪ್ರದೇಶ, ಒಣಗಿದ ಬೆಳೆಗಳ ಚಿತ್ರಣವನ್ನು ಮೂಡಿಸಿದ್ದರೆ, ತಮಿಳುನಾಡು ಭಾಗದಲ್ಲಿ ಹಸಿರಿನಿಂದ ಕೂಡಿದ ಪ್ರದೇಶ, ಭೂಮಿಯ ಮೇಲೆ ನೆಲೆನಿಂತ ಹಸಿರು ಬೆಳೆಗಳ ಚಿತ್ರಣವನ್ನು ಬಹಳ ಸುಂದರವಾಗಿ ಮೂಡಿಸಲಾಗಿತ್ತು. ಅದು ಕಾವೇರಿ ಕಣಿವೆ ಪ್ರದೇಶದ ವಸ್ತುಸ್ಥಿತಿಯನ್ನು ಪ್ರತಿಬಿಂಬಿಸುವಂತಿತ್ತು.

English summary
Mandya dasara celebrated recently. 'Cauvery Kanneru' attracted in parade which was organised on the backdrop of dasara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X