ಮದ್ದೂರು: ಕಾಂಗ್ರೆಸ್‌ನಿಂದ ಶೀಘ್ರದಲ್ಲೇ ವಿಭಾಗ ಮಟ್ಟದ ರಥಯಾತ್ರೆ-ಚೆಲುವರಾಯಸ್ವಾಮಿ
ಮಂಡ್ಯ, ನವೆಂಬರ್, 01: ಮುಂದಿನ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಎಲ್ಲಾ ಪಕ್ಷಗಳಿಂದ ಭರ್ಜರಿ ಪೈಪೋಟಿಗಳು ನಡೆಯುತ್ತಿವೆ. ಹಾಗೆಯೇ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಸಂಘಟಿಸುವ ಉದ್ದೇಶದಿಂದ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ನೇತೃತ್ವದಲ್ಲಿ ಶೀಘ್ರದಲ್ಲೇ ವಿಭಾಗೀಯ ಮಟ್ಟದ ರಥಯಾತ್ರೆ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್. ಚೆಲುವರಾಯಸ್ವಾಮಿ ಮದ್ದೂರಿನಲ್ಲಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, "ವಿಭಾಗ ಮಟ್ಟದ ಯಾತ್ರೆ ಕುರಿತಂತೆ ಪಕ್ಷದ ಮುಖಂಡರು ಈಗಾಗಲೇ ಪೂರ್ವಭಾವಿ ಸಭೆ ನಡೆಸಿದ್ದಾರೆ. ಎಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆಂಗಳೂರಿನಲ್ಲಿ ನವೆಂಬರ್ 6ರಂದು ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ನಂತರ ರಥಯಾತ್ರೆ ಕುರಿತಂತೆ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ನಾಯಕರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ವಿಭಾಗ ಮಟ್ಟದಲ್ಲಿ ನಡೆಯುವ ಯಾತ್ರೆಯಲ್ಲಿ ಯಾವ ಜಿಲ್ಲೆಯನ್ನು ಪ್ರತಿನಿಧಿಸಬೇಕು, ವಿಧಾನ ಸಭಾಕ್ಷೇತ್ರಕ್ಕೆ ಭೇಟಿ ನೀಡುವ ಬಗ್ಗೆ ಆಯಾ ಕ್ಷೇತ್ರದ ಶಾಸಕ ಅಥವಾ ಚುನಾವಣಾ ಟಿಕೆಟ್ ಆಕಾಂಕ್ಷಿಗಳೊಂದಿಗೆ ಚರ್ಚೆ ನಡೆಸಿ ಅಂತಿಮವಾಗಿ ನಿರ್ಧರಿಸಲಾಗುವುದು," ಎಂದರು.
ಯಾತ್ರೆ ಬಗ್ಗೆ ಚೆಲುವರಾಯಸ್ವಾಮಿ ಹೇಳಿದ್ದೇನು?
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಥಯಾತ್ರೆಯಲ್ಲಿ ಪ್ರಧಾನವಾಗಿ ಸಂಚಾರ ಮಾಡಲಿದ್ದು, ಎಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಹಾಗೂ ಕಾರ್ಯಾಧ್ಯಕ್ಷರುಗಳು ರಥಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗುವುದು. ವಿಧಾನ ಸಭಾ ಚುನಾವಣೆ ಹಿನ್ನೆಲೆ ಎಲ್ಲಾ ರಾಜಕೀಯ ಪಕ್ಷದ ನಾಯಕರುಗಳು ಯಾತ್ರೆ ನೆಪದಲ್ಲಿ ಪಕ್ಷ ಸಂಘಟನೆ ನಡೆಸುವುದು ಸಹಜವಾಗಿದೆ. ಆದರೆ ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಧರ್ಮದ ಹೆಸರಿನಲ್ಲಿ ಅನೇಕ ವ್ಯತ್ಯಾಸಗಳು ಉಂಟಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಭಾರತ ದೇಶದ ಮಟ್ಟದಲ್ಲಿ ಐಕ್ಯತಾ ಯಾತ್ರೆ ನಡೆಸಿದೆ. ಪಕ್ಷದ ಮುಖಂಡ ರಾಹುಲ್‌ಗಾಂಧಿ ಐಕ್ಯತಾ ಯಾತ್ರೆ ನಡೆಸಿದ್ದಾರೇಯೇ ಹೊರತು ಚುನಾವಣೆ ದೃಷ್ಟಿಯಿಂದ ಅಲ್ಲ ಎಂದು ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.

ಐಕ್ಯತಾ ಯಾತ್ರೆಯಿಂದ ಬಿಜೆಪಿಗೆ ಭೀತಿ
ಕಾಂಗ್ರೆಸ್ ನಡೆಸಿರುವ ಐಕ್ಯತಾ ಯಾತ್ರೆಯಿಂದ ಭೀತಿಗೊಂಡಿರುವ ಬಿಜೆಪಿಯವರು ಮೈಸೂರು ಭಾಗದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ರಥಯಾತ್ರೆಯನ್ನು ನಡೆಸುತ್ತಿದ್ದಾರೆ. ಇದರಿಂದ ಪಕ್ಷಕ್ಕೆ ಯಾವುದೇ ರೀತಿಯ ಹಾನಿ ಇಲ್ಲ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧಮ್ ಇದ್ದರೆ ಯಾತ್ರೆ ತಡೆಯಿರಿ ಎಂದು ಸವಾಲು ಹಾಕಿರುವುದು ದುರಂಹಕಾರದ ಪರಮಾವಧಿಯಾಗಿದೆ ಎಂದು ಟೀಕಿಸಿದರು.
ಇನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪುತ್ರ ಮಂಡ್ಯದಿಂದ ಸ್ಪರ್ಧೆ ಮಾಡುವುದರ ಕುರಿತು ಪ್ರತಿಕ್ರಿಯೆ ನೀಡಿ, ಚುನಾವಣೆಯಲ್ಲಿ ಸ್ಪರ್ಧಿಸುವುದು ಅವರ ಪಕ್ಷದ ತೀರ್ಮಾನವಾಗಿದೆ. ಈ ಬಗ್ಗೆ ನಾವು ಪ್ರಸ್ತಾಪ ಮಾಡುವುದಿಲ್ಲ. ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುವುದು ನಮಗೆ ಮುಖ್ಯವಾಗಿದೆ. ಇದಕ್ಕೆ ಬೇಕಾದ ತಂತ್ರಗಾರಿಕೆಯನ್ನು ಮಾಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪರಿಶಿಷ್ಟ ಜಾತಿ, ಪಂಗಡದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುರೇಶ್ ಕಂಠಿ, ಮದ್ದೂರು ಬ್ಲಾಕ್ ಕಾಂಗ್ರೆಸ್ ವಕ್ತಾರ ಎಂ.ಪಿ. ಅಮರ್‌ಬಾಬು, ಟಿಎಪಿಸಿಎಂಎಸ್ ನಿರ್ದೇಶಕ ಶಂಕರಲಿಂಗಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications