KRS Reservoir water level: ಬರಿದಾಗುತ್ತಿದೆ ಕೆಆರ್‌ಎಸ್ ಒಡಲು, ಇಂದಿನ ನೀರಿನ ಮಟ್ಟ
ಮಂಡ್ಯ, ಜುಲೈ, 21: ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಜಲಾಶಯ 90 ಅಡಿಗೆ ತಲುಪಿದ್ದು, ಒಳ ಹರಿವು ಏರಿಕೆಯಾಗಿಲ್ಲ. ಇದು ಇಲ್ಲಿನ ರೈತರ ಆತಂಕಕ್ಕೆ ಕಾರಣವಾಗಿದೆ. ಕೇರಳದ ವೈನಾಡು ಹಾಗೂ ಕೊಡಗಿನಲ್ಲಿ ವ್ಯಾಪಕ ಮಳೆಯಾಗದ ಕಾರಣ ಈ ಬಾರಿ ಮುಂಗಾರಿನ ಹಂಗಾಮಿನಲ್ಲೇ ಕೃಷ್ಣರಾಜಸಾಗರ ಜಲಾಶಯ ಬಣಗುಡುವಂತಾಗಿತ್ತು. ಆದರೆ ಕೆಲ ದಿನಗಳ ಹಿಂದೆ ಸ್ವಲ್ಪ ಪ್ರಮಾಣದಲ್ಲಿ ಮಳೆ ಬಿದ್ದ ಪರಿಣಾಮ ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚಾಗಿತ್ತು.
ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಇದ್ದು, ಶುಕ್ರವಾರ 90.1 ಅಡಿ ನೀರಿನ ಸಂಗ್ರಹವಿದೆ. ಜಲಾಶಯಕ್ಕೆ ಕೇವಲ 1863 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಜಲಾಶಯದಿಂದ 401 ಕ್ಯೂಸೆಕ್ ನೀರನ್ನು ಹೊರಗೆ ಹರಿಯಬಿಡಲಾಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 124.80 ಅಡಿ ನೀರು ಸಂಗ್ರಹವಾಗಿದ್ದು, 59,675 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದುಬರುತ್ತಿದ್ದರೆ, 54,637 ಕ್ಯೂಸೆಕ್ ನೀರನ್ನು ಜಲಾಶಯದಿಂದ ನದಿ ಮತ್ತು ಕಾಲುವೆಗಳಿಗೆ ಹರಿಯಬಿಡಲಾಗುತ್ತಿತ್ತು.

ಆಗ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಜುಲೈ 21ರಂದು ಕೃಷ್ಣರಾಜಸಾಗರ ಜಲಾಶಯಕ್ಕೆ ಆಗಮಿಸಿ ಕಾವೇರಿಗೆ ಬಾಗೀನ ಅರ್ಪಿಸಿದ್ದರು. ಈ ಬಾರಿ ಇನ್ನೂ ಜಲಾಶಯದ ತುಂಬದ ಕಾರಣ ರೈತರು ಪರಿತಪಿಸುವಂತಾಗಿದೆ. ಈ ಮಧ್ಯೆ ಮುಂಗಾರು ಬೆಳೆಗೆ ಕಾಲುವೆಯಲ್ಲಿ ನೀರು ಹರಿಸುವಂತೆ ರೈತರು ನಿತ್ಯ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಜೊತೆಗೆ ತಮಿಳುನಾಡು ಸರ್ಕಾರ ಸಹ ಕಾವೇರಿ ನದಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ ಜೂನ್ ಮತ್ತು ಜುಲೈ ತಿಂಗಳ ತನ್ನ ಪಾಲಿನ ನೀರನ್ನು ಹರಿಸುವಂತೆ ಒತ್ತಾಯ ಮಾಡಿದೆ.
ಕಾವೇರಿ ಕಣಿವೆ ಪ್ರದೇಶದಲ್ಲಿ ಹೆಚ್ಚಿನ ಮಳೆಯಾದಲ್ಲಿ ಮಾತ್ರ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರೆಯಲಿದೆ. ಒಂದು ವೇಳೆ ಮಳೆ ಬಾರದಿದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಅಂತಿದ್ದಾರೆ ಇಲ್ಲಿನ ಸ್ಥಳೀಯರು.












Click it and Unblock the Notifications