'ಜನರ ಮೇಲೆ ₹70,000 ಕೋಟಿ ತೆರಿಗೆ ಹೇರಿಕೆ: ದೆಹಲಿಯಂತೆ ಕರ್ನಾಟಕದಲ್ಲೂ ಬೃಹತ್ ಅಬಕಾರಿ ಹಗರಣ'
ಮಂಡ್ಯ, ಏಪ್ರಿಲ್ 08: ಕರ್ನಾಟಕ ರಾಜ್ಯ ಸರ್ಕಾರ ಜನರ ಮೇಲೆ ಸಾವಿರಾರು ಕೋಟಿ ರೂಪಾಯಿ ತೆರಿಗೆ ಹೇರಿಕೆ ಮಾಡಿದೆ. ಈ ಮೂಲಕ ಹಣ ವಸೂಲಿಗೆ ಇಳಿದಿದ್ದು, ತನ್ನ ಪಂಚ ಗ್ಯಾರೆಂಟಿ ಯೋಜನೆಗಳಿಗೆ ಹಣ ಹೊಂದಿಸುತ್ತದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ದೂರಿದರು. ಈ ಹಿಂದೆ ಪರಿಶಿಷ್ಠರ ಕಲ್ಯಾಣಕ್ಕೆ ಮೀಸಲಿದ್ದ ಅನುದಾನವನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿತ್ತು.
ಮಂಡ್ಯದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಜನರ ಮೇಲೆ 60-70 ಸಾವಿರ ಕೋಟಿ ರೂ. ತೆರಿಗೆ ವಿಧಿಸಿದೆ. ಅಂದಮೇಲೆ ಜನರಿಗೆ ಇವರು ಕೊಟ್ಟಿದ್ದೇನು?. ಕಾಂಗ್ರೆಸ್ ಸರ್ಕಾರ ಚುನಾವಣೆಗೆ ಮುನ್ನ ಗ್ಯಾರಂಟಿಗಳ ಹಣ ಬಿಡುಗಡೆ ಮಾಡಿ ಜನರಿಗೆ ಆಮಿಷ ಒಡ್ಡುತ್ತಿದೆ.

ರಾಜ್ಯದಲ್ಲಿ ಹಾಲು, ಮದ್ಯ, ಆಸ್ಪತ್ರೆ ಶುಲ್ಕ, ಬಸ್ ಟಿಕೆಟ್ ದರ, ಮಾರ್ಗಸೂಚಿ ದರ ಎಲ್ಲ ಸೇರಿದರೆ ಜನರ ಮೇಲೆ 60-70 ಸಾವಿರ ಕೋಟಿ ರೂ. ತೆರಿಗೆಯನ್ನು ಹಾಕಲಾಗಿದೆ. ಗ್ಯಾರಂಟಿಗಳ 65 ಸಾವಿರ ಕೋಟಿ ರೂ. ಹೊಂದಿಸಲು ಹೀಗೆ ತೆರಿಗೆ ವಸೂಲಿ ಮಾಡಲಾಗುತ್ತಿದೆ. ಹಾಗಾದರೆ ಇವರು ಜನರಿಗೆ ಏನು ಕೊಟ್ಟಿದ್ದಾರೆ? ಎಂದು ಪ್ರಶ್ನೆ ಮಾಡಿದರು.
ಅಡುಗೆ ಅನಿಲಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅತಿ ಹೆಚ್ಚು ಸಹಾಯಧನ ನೀಡುತ್ತಿದೆ. ಅತೀ ಕನಿಷ್ಠ ಮಟ್ಟದಲ್ಲಿ ಕೇಂದ್ರ ಸರ್ಕಾರ ದರ ಏರಿಕೆ ಮಾಡಿದೆ. ಕಾಂಗ್ರೆಸ್‌ನವರು ಬೇಕಿದ್ದರೆ ದೆಹಲಿಯಲ್ಲಿ ಪ್ರತಿಭಟನೆ ಮಾಡಲಿ. ಇಡೀ ದೇಶದಲ್ಲಿ ಅಡುಗೆ ಅನಿಲ ಏರಿಕೆಯಾಗಿದೆಯೇ ಹೊರತು ಕರ್ನಾಟಕಕ್ಕೆ ಮಾತ್ರ ಆಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿದುಕೊಳ್ಳಬೇಕು. ರಾಜ್ಯ ಸರ್ಕಾರದಲ್ಲಿ ಸರ್ಕಾರಿ ನೌಕರರಿಗೂ ವೇತನ ಕೊಡಲು ಹಣವಿಲ್ಲ ಎಂದು ಅವರು ಆಕ್ರೋಶ ಹೊರ ಹಾಕಿದರು.

ದೆಹಲಿ ಎಎಪಿ ಹಗರಣದಂತೆ ರಾಜ್ಯದಲ್ಲಿ ಅಬಕಾರಿ ಹಗರಣ!
ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಸಂಬಳ ಕೊಡಲು ಹಣವಿಲ್ಲ ಎಂದಮೇಲೆ ಈ ಸರ್ಕಾರ ದಿವಾಳಿಯಾಗಿದೆ ಎಂದೇ ಹೇಳಬೇಕು. ಒಂದೇ ವರ್ಷದಲ್ಲಿ 1 ಲಕ್ಷ ಕೋಟಿ ರೂ. ಸಾಲ ಮಾಡಲಾಗಿದೆ. ಪಾಪರ್ ಆಗಿಲ್ಲವಾದರೆ ಸಾಲ ಏಕೆ ಮಾಡಬೇಕು? ದೆಹಲಿಯ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಅವರನ್ನು ಮೀರಿಸುವಂತೆ ಅಬಕಾರಿ ಹಗರಣ ರಾಜ್ಯದಲ್ಲಿ ನಡೆಯುತ್ತಿದೆ ಎಂದು ದೂರಿದರು.
ಎಚ್‌ಡಿಕೆ ವಿರುದ್ಧ ಕೈ ಸರ್ಕಾರ ಸೇಡಿನ ರಾಜಕಾರಣ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರ ವಿರುದ್ಧ ಸೇಡಿನ ರಾಜಕಾರಣ ಮಾಡಲಾಗುತ್ತಿದೆ. ಭೂ ಹಗರಣವನ್ನು ಪೊಲೀಸರು ತನಿಖೆ ಮಾಡುವುದನ್ನು ನೋಡಿದರೆ ಕಾಂಗ್ರೆಸ್ ದ್ವೇಷ ಸಾಧಿಸುತ್ತಿದೆ ಎಂದು ಗೊತ್ತಾಗುತ್ತದೆ. ಕುಮಾರಸ್ವಾಮಿ ಅವರ ಕಾನೂನು ಹೋರಾಟಕ್ಕೆ ನಾವೆಲ್ಲರೂ ಬೆಂಬಲ ನೀಡುತ್ತೇವೆ ಎಂದರು.
ಜೆಡಿಎಸ್-ಬಿಜೆಪಿ ಒಟ್ಟಾಗಿ ಹೋರಾಟ ಮಾಡುವುದರ ಬಗ್ಗೆ ಚರ್ಚೆಯಾಗಬೇಕಿದೆ. ಈ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಹಾಗೂ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ಹೇಳಿದರು.
ಮಂಡ್ಯದ ಚಕ್ರವರ್ತಿಗಳು ಕಾಂಗ್ರೆಸ್‌ಗೆ ಬುದ್ಧಿ ಕಲಿಸಬೇಕು
ಬಿಜೆಪಿ ಜನಾಕ್ರೋಶ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ 14 ಸೈಟು ಲೂಟಿ ಮಾಡಿ, ಬಿಜೆಪಿ ಹೋರಾಟ ಮಾಡುತ್ತಿದ್ದಂತೆ ವಾಪಾಸು ಮಾಡಿದರು. ವಾಲ್ಮೀಕಿ ನಿಗಮದ ಅಕ್ರಮದ ವಿರುದ್ಧದ ಹೋರಾಟದಿಂದ ಸಚಿವರು ರಾಜೀನಾಮೆ ನೀಡಿದರು. ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಮಂಡ್ಯದ ಜನರನ್ನು ಛತ್ರಿ ಎಂದು ಜರಿದಿದ್ದಾರೆ. ಅದೇ ಚುನಾವಣೆಯ ಸಮಯದಲ್ಲಿ ಮತಭಿಕ್ಷೆ ಬೇಡಿದ್ದರು. ಮಂಡ್ಯದ ಜನರು ಛತ್ರಿಗಳಲ್ಲ, ಚಕ್ರವರ್ತಿಗಳು. ಮುಂದಿನ ಚುನಾವಣೆಯಲ್ಲಿ ಮಂಡ್ಯದ ಜನರು ಕಾಂಗ್ರೆಸ್‌ಗೆ ಬುದ್ಧಿ ಕಲಿಸಬೇಕು ಎಂದು ಕರೆ ನೀಡಿದರು.
ಮೇಕೆದಾಟು ಯೋಜನೆ ಜಾರಿ ಬಗ್ಗೆ ಕಾಂಗ್ರೆಸ್ ನಾಯಕರು ಹೇಳಿದ್ದರು. ಆದರೆ ಅಧಿಕಾರ ಸಿಕ್ಕರೂ ಇನ್ನೂ ಜಾರಿಯಾಗಿಲ್ಲ. ತಮಿಳುನಾಡಿನ ಸ್ಟಾಲಿನ್ ಬ್ರದರ್ ಎಂಬ ಕಾರಣಕ್ಕೆ ಇವರು ಸುಮ್ಮನಾಗಿದ್ದಾರೆ. ಮಂಡ್ಯದಲ್ಲಿ ವಿಶ್ವವಿದ್ಯಾಲಯ ನಿರ್ಮಿಸಲು ಮೋದಿ ಸರ್ಕಾರ ಅನುದಾನ ನೀಡಿದ್ದರೆ, ಆ ಹಣವನ್ನು ತಿಂದು ವಿಶ್ವವಿದ್ಯಾಲಯಗಳ ರದ್ದು ಮಾಡಿದ್ದಾರೆ. ಇಲ್ಲಿ ಹನುಮ ಧ್ವಜವನ್ನು ಹಾರಿಸಲು ಹೊರಟರೆ ಅದಕ್ಕೂ ಅವಕಾಶ ನೀಡಲಿಲ್ಲ. ಆದರೂ ಡಿ.ಕೆ.ಶಿವಕುಮಾರ್ ಹಿಂದೂ ಎಂದು ಹೇಳಿಕೊಳ್ಳುತ್ತಾರೆ ಎಂದು ಅವರು ಟೀಕಿಸಿದರು.
ಮಂಡ್ಯದ ಜನರಿಗೆ ಕಾಂಗ್ರೆಸ್ ದೊಡ್ಡ ಮೋಸ ಮಾಡಿದೆ. ಮುಸ್ಲಿಮರಿಗೆ ಮದುವೆಯಾಗಲು ಕೂಡ ಕೂಡಲೇ ಹಣ ನೀಡುತ್ತಾರೆ. ಸರ್ಕಾರಿ ಗುತ್ತಿಗೆಯಲ್ಲೂ ಮೀಸಲು ನೀಡಿದ್ದಾರೆ. ಹಿಂದೂಗಳಿಗೆ ಮಾತ್ರ ಚೊಂಬು ಕೊಟ್ಟಿದ್ದಾರೆ. ಸಮಬಾಳು, ಸಮಪಾಲು ಎಂದು ಬಿಜೆಪಿ ಹೇಳಿದರೆ, ಕಾಂಗ್ರೆಸ್ ಎಲ್ಲವನ್ನೂ ಮುಸ್ಲಿಮರಿಗೆ ಮಾತ್ರ ನೀಡಿದೆ ಎಂದು ಸರ್ಕಾರದ ಆಡಳಿತ ವಿರುದ್ಧ ಕಿಡಿ ಕಾರಿದರು.
ಹೆಣದ ಮೇಲೂ ರಾಜ್ಯ ಸರ್ಕಾರ ಹಣ ಸಂಪಾದನೆ:
ಬಸ್, ಮೆಟ್ರೋ, ಹಾಲು, ವಿದ್ಯುತ್ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾಹೆಣದ ಮೇಲೂ ಹಣ ಸಂಪಾದನೆ ಮಾಡುತ್ತಿದೆ. ಹೆಣದ ಮೇಲೆ ಹಾಕಿದ ಹಣವನ್ನು ಎಂದೂ ತೆಗೆಯಬಾರದು. ಆದರೆ ಕಾಂಗ್ರೆಸ್ ಸರ್ಕಾರ ಹೆಣದ ಮೇಲೂ ಹಣ ಸಂಪಾದಿಸುತ್ತಿದೆ. ಬಿಯರ್ ಕುಡಿಯುವವರು ಹೆಚ್ಚುವರಿ 50 ರೂ. ಇಟ್ಟುಕೊಳ್ಳಬೇಕು. ಬೆಂಗಳೂರಿನ ಮನೆಗಳ ಕಸಕ್ಕೂ ತೆರಿಗೆ ಹಾಕಿದ್ದಾರೆ. ಇನ್ನು ಮುಂದೆ ಶೌಚಾಲಯಕ್ಕೂ ಶುಲ್ಕ ವಿಧಿಸಲಿದ್ದಾರೆ. ಸ್ವಲ್ಪ ದಿನಗಳಲ್ಲಿ ಕುಡಿಯುವ ನೀರಿನ ದರ ಏರಿಕೆಯಾಗಲಿದೆ ಎಂದು ಆರ್.ಅಶೋಕ್ ದೂರಿದರು.
ಇಂಧನ ಇಲಾಖೆಯಿಂದ ಮನೆಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಸಿ, ಅದರಲ್ಲಿ 15 ಸಾವಿರ ಕೋಟಿ ರೂ. ಹಗರಣ ಮಾಡಲಾಗುತ್ತಿದೆ. ಲೂಟಿ ಮಾಡುತ್ತಿರುವ ಈ ಸರ್ಕಾರಕ್ಕೆ ಯಾಕಾದರೂ ಓಟು ಹಾಕಿ ಪಾಪ ಮಾಡಿದ್ದೇವೆ ಎಂದು ಜನರು ಯೋಚಿಸುತ್ತಿದ್ದಾರೆ. ಡೀಸೆಲ್ ದರ ಏರಿಸಿದ್ದು ಕೇಂದ್ರ ಸರ್ಕಾರ ಎಂದು ಒಬ್ಬ ಸಚಿವರು ಹೇಳುತ್ತಾರೆ. ಮತ್ತೊಬ್ಬ ಸಚಿವರಿಗೆ ಕನ್ನಡ ಬರೆಯಲು ಕೂಡ ಬರುವುದಿಲ್ಲ. ಸಚಿವರೆಲ್ಲರೂ ಅಜ್ಞಾನಿಗಳಾಗಿದ್ದಾರೆ. ಇವರೆಲ್ಲರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜ್ಞಾನಿಯಾಗಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುವಾಗ ತೆರಿಗೆ ವಿಧಿಸಲಿಲ್ಲ. ಈಗ ಪ್ರತಿಯೊಂದಕ್ಕೂ ತೆರಿಗೆ ವಿಧಿಸಲಾಗುತ್ತಿದೆ. ಇವರು ಎಂತಹ ವಂಚಕರು ಎಂಬುದು ಇದರಿಂದಲೇ ಗೊತ್ತಾಗುತ್ತದೆ. ವಕ್ಫ್ ಮಂಡಳಿ ರೈತರ ಜಮೀನು ಲೂಟಿ ಮಾಡುವುದನ್ನು ತಪ್ಪಿಸಲು ಪ್ರಧಾನಿ ನರೇಂದ್ರ ಮೋದಿ ಹೊಸ ಮಸೂದೆ ತಂದಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದ ಸಲ್ಲಿಸಬೇಕು. ಹಾಗೆಯೇ ಈ ಜನಾಕ್ರೋಶ ಯಾತ್ರೆಯ ಪ್ರತಿಭಟನೆಯನ್ನು ಇನ್ನಷ್ಟು ಮುಂದುವರಿಸಿ ತಾರ್ಕಿಕ ಅಂತ್ಯಕ್ಕೆ ಒಯ್ಯಬೇಕು ಎಂದು ಕರೆ ನೀಡಿದರು.












Click it and Unblock the Notifications