ಹಗ್ಗ-ಜಗ್ಗಾಟ ಅಂತ್ಯ : ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಅಂತಿಮ!
ಮಂಡ್ಯ, ಏಪ್ರಿಲ್ 24 : 2018ರ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೆಲವು ಗಂಟೆಗಳು ಬಾಕಿ ಇರುವಾಗ ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂತಿಮವಾಗಿದೆ. ನಟ, ಹಾಲಿ ಶಾಸಕ ಅಂಬರೀಶ್ ಅವರು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡ್ಯ ಕ್ಷೇತ್ರಕ್ಕೆ ಅಭ್ಯರ್ಥಿ ಅಂತಿಮಗೊಳಿಸಿದ್ದಾರೆ. ಗಣಿಗ ರವಿ (ರವಿಕುಮಾರ್) ಅವರು ಮಂಡ್ಯ ಕ್ಷೇತ್ರದಿಂದ 2018ರ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
ಡಾ.ಪರಮೇಶ್ವರ ಅವರು ಸೋಮವಾರ ರಾತ್ರಿ ಅಂಬರೀಶ್ ಅವರಿಗೆ ಕರೆ ಮಾಡಿ ಮಾತುಕತೆ ನಡೆಸಿದರು. ಮಂಗಳವಾರ ಬೆಳಗ್ಗೆ ಗಣಿಗ ರವಿ ಅವರನ್ನು ಅಭ್ಯರ್ಥಿ ಎಂದು ತೀರ್ಮಾನವನ್ನು ಕೈಗೊಂಡಿದ್ದು, ಮಂಡ್ಯ ಕ್ಷೇತ್ರದ ಬಿ-ಫಾರಂ ಅವರನ್ನು ಕಳುಹಿಸಿಕೊಟ್ಟಿದ್ದಾರೆ.
ಈ ಮೂಲಕ ಮಂಡ್ಯದ ಕಾಂಗ್ರೆಸ್ ಅಭ್ಯರ್ಥಿ ಯಾರು? ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಅಂಬರೀಶ್ ಆಪ್ತರಾದ ಅಮರಾವತಿ ಚಂದ್ರಶೇಖರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಆತ್ಮಾನಂದ ಅವರ ಹೆಸರು ಸಹ ಕೇಳಿಬರುತ್ತಿತ್ತು. ಅಂತಿಮವಾಗಿ ಗಣಿಗ ರವಿ ಅವರು ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ...

ಅಂಬರೀಶ್‌ಗೆ ದೂರವಾಣಿ ಕರೆ
ಮಂಡ್ಯ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಕುರಿತು ಅಂಬರೀಶ್ ಯಾವುದೇ ನಿರ್ಧಾರ ಪ್ರಕಟಿಸಿರಲಿಲ್ಲ. ಸೋಮವಾರ ರಾತ್ರಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವ ಅವರು ಅಂಬರೀಶ್ ಅವರ ಜೊತೆ ಮಾತುಕತೆ ನಡೆಸಿದರು.
ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಅಂಬರೀಶ್ ಅವರು ಖಚಿತ ಪಡಿಸಿದರು. ಮಂಗಳವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಾತುಕತೆ ನಡೆಸಿದ ಪರಮೇಶ್ವರ ಅವರು ಗಣಿಗ ರವಿ ಅವರನ್ನು ಅಭ್ಯರ್ಥಿ ಎಂದು ಅಂತಿಮಗೊಳಿಸಿದರು. ಮಂಡ್ಯ ಕ್ಷೇತ್ರದ ಬಿಫಾರಂ ಅನ್ನು ಕಳುಹಿಸಿಕೊಟ್ಟರು.

ಅಂಬರೀಶ್ ಅವರನ್ನು ಕಡೆಗಣಿಸಲ್ಲ
ಮಂಡ್ಯ ಕ್ಷೇತ್ರದಿಂದ ಮಾಜಿ ಸಚಿವ, ಹಾಲಿ ಶಾಸಕ ಅಂಬರೀಶ್ ಅವರು ಸ್ಪರ್ಧೆ ಮಾಡದಿದ್ದರೂ ಪಕ್ಷ ಅವರನ್ನು ಕಡೆಗಣಿಸುವುದಿಲ್ಲ. ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಪರಮೇಶ್ವರ ಅವರು, 'ಅಂಬರೀಶ್ ಅವರನ್ನು ಪಕ್ಷ ಕಡೆಗಣಿಸುವುದಿಲ್ಲ. ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡುವುದಿಲ್ಲ' ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಬರೀಶ್ ಅವರು ಸ್ಪರ್ಧೆ ಮಾಡುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಬಂತರ ಗಣಿಗ ರವಿ ಅವರಿಗೆ ಬಿ ಫಾರಂ ಕಳಿಹಿಸಿಕೊಡಿ ಎಂದು ಪರಮೇಶ್ವರ ಅವರಿಗೆ ಸೂಚಿಸಿದ್ದರು. ಅದಂತೆ ಪರಮೇಶ್ವರ ಅವರು ಬಿ ಫಾರಂ ಕಳುಹಿಸಿ ಕೊಟ್ಟಿದ್ದಾರೆ.

ಒಂದು ವಾರದಿಂದ ಮೌನವಾಗಿದ್ದ ಅಂಬರೀಶ್
ಕಳೆದ ಒಂದು ವಾರದಿಂದ ಅಂಬರೀಶ್ ಅವರು ಚುನಾವಣೆಗೆ ಸ್ಪರ್ಧಿಸುವ ಕುರಿತು ಮೌನವಾಗಿದ್ದರು. ಸೋಮವಾರ ಮಂಡ್ಯದಿಂದ ಆಗಮಿಸಿದ್ದ ನಾಯಕರ ಜೊತೆ ಮಾತುಕತೆ ನಡೆಸಿದ್ದರು. ಭಾನುವಾರ ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಬರೀಶ್ ಜೊತೆ ಮಾತುಕತೆ ನಡೆಸಲು ಪ್ರಯತ್ನ ನಡೆಸಿದ್ದರೂ ಅದು ಸಾಧ್ಯವಾಗಿರಲಿಲ್ಲ.
ಕಳೆದ ವಾರ ಅಂಬರೀಶ್ ಅವರ ಜೊತೆ ಮಾತುಕತೆ ನಡೆಸಿದ್ದ ಸಿದ್ದರಾಮಯ್ಯ ಅವರು, 'ನೀವೇ ಸ್ಪರ್ಧೆ ಮಾಡಿ, ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಬೇಡ' ಎಂದು ಹೇಳಿದ್ದರು. ಆದರೆ, ಆರೋಗ್ಯದ ಕಾರಣ ನೀಡಿ ಅಂಬರೀಶ್ ಅವರು ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿದ್ದರು.

2018ರ ಚುನಾವಣಾ ಕಣ
2018ರ ಚುನಾವಣೆಗೆ ಮಂಡ್ಯ ಕ್ಷೇತ್ರದ ಚುನಾವಣಾ ಕಣ ಅಂತಿಮವಾಗಿದೆ. ಕಾಂಗ್ರೆಸ್ ಪಕ್ಷದಿಂದ ಗಣಿಗ ರವಿ ಅವರು ಅಭ್ಯರ್ಥಿ. ಬಿಜೆಪಿಯಿಂದ ಚಂದಗಲ ಶಿವಣ್ಣ ಅಭ್ಯರ್ಥಿ. ಎಂ.ಶ್ರೀನಿವಾಸ್ ಅವರು ಜೆಡಿಎಸ್ ಅಭ್ಯರ್ಥಿ.
ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಗಣಿಗ ರವಿ ಅವರು ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಕ್ಷೇತ್ರದ ಜನರು ಯಾರಿಗೆ ಬೆಂಬಲ ನೀಡಲಿದ್ದಾರೆ? ಎಂದು ಕಾದು ನೋಡಬೇಕು.












Click it and Unblock the Notifications