SM Krishna passes away: ಎಸ್.ಎಂ.ಕೃಷ್ಣ ಅಂತ್ಯಕ್ರಿಯೆಗೆ ಸ್ಥಳ ಪರಿಶೀಲಿಸಿದ ಡಿ.ಕೆ.ಶಿವಕುಮಾರ್
ಮಾಜಿ ಸಿಎಂ ಹಾಗೂ ಕರ್ನಾಟಕದ ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ ಅವರು ಇಂದು ನಿಧನರಾಗಿದ್ದು, ಎಲ್ಲೆಡೆ ಸಂತಾಪ ಸೂಚಿಸಲಾಗುತ್ತಿದೆ. ಇನ್ನು ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ಸಂಬಂಧಿಯೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕಂಬನಿ ಮಿಡಿದಿದ್ದಾರೆ. ಇನ್ನು ಕೃಷ್ಣ ಅವರ ಅಂತ್ಯಕ್ರಿಯೆಯು ಹುಟ್ಟೂರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯಲ್ಲಿ ನಡೆಯಲಿದೆ.
ಈ ಹಿನ್ನೆಲೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಎಸ್.ಎಂ ಕೃಷ್ಣ ಅವರ ಅಂತ್ಯಕ್ರಿಯೆ ನೆರವೇರಲಿರುವ ಅವರ ಹುಟ್ಟೂರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಗೆ ಭೇಟಿ ನೀಡಿದ್ದಾರೆ. ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅಂತ್ಯಕ್ರಿಯೆ ನಡೆಯಲಿರುವ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಇನ್ನು ಎಸ್.ಎಂ.ಕೃಷ್ಣ ಅವರ ನಿಧನದ ವಾರ್ತೆ ತಿಳಿದು, ಬೆಳಗಾವಿ ಅಧಿವೇಶನದಲ್ಲಿದ್ದ ಡಿ.ಕೆ.ಶಿವಕುಮಾರ್ ಅವರು ನೇರವಾಗಿ ಬೆಂಗಳೂರಿನಲ್ಲಿದ್ದ ಸದಾಶಿವನಗರ ನಿವಾಸಕ್ಕೆ ಬಂದು ಎಸ್.ಎಂ ಕೃಷ್ಣ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಭಾವುಕರಾದರು. ಕೃಷ್ಣ ಅವರು ನನಗೆ ಗುರು ಮಾತ್ರವಲ್ಲ, ನನ್ನನ್ನು ಮಗನಂತೆ ನೋಡಿಕೊಂಡಿದ್ದರು ಎಂದು ಡಿ.ಕೆ.ಶಿವಕುಮಾರ್ ಕಣ್ಣೀರು ಹಾಕಿದರು.
ನನ್ನ ರಾಜಕೀಯ ಮಾರ್ಗದರ್ಶಿಗಳಾಗಿದ್ದ ಕೃಷ್ಣ ಅವರ ಜೊತೆ ಕಳೆದ ನೆನಪುಗಳು ಸ್ಮೃತಿಪಟಲದಲ್ಲಿ ಹಾದು ಹೋದವು. ಅವರ ದೂರದೃಷ್ಟಿಯ ನಾಯಕತ್ವ ಹಾಗೂ ಕರ್ನಾಟಕಕ್ಕೆ ನೀಡಿದ ಕೊಡುಗೆಗಳು ಅವಿಸ್ಮರಣೀಯ ಎಂದು ಅವರು ಹೇಳಿದ್ದಾರೆ. ಎಸ್.ಎಂ.ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ಇಂದು ಸಂಜೆ 5 ಗಂಟೆಗೆ ಕಾಂಗ್ರೆಸ್ ಕಚೇರಿಯಲ್ಲಿ ಸಂತಾಪ ಸೂಚಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಳ್ಳಲಿದ್ದಾರೆ. ರಾಜ್ಯದ ಪ್ರಗತಿಯ ನಿಟ್ಟಿನಲ್ಲಿ ಶ್ರೀ ಎಸ್.ಎಂ. ಕೃಷ್ಣ ಅವರು ನೀಡಿದ ಕೊಡುಗೆಗಳು ಸ್ಮರಣೀಯ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಸಂತಾಪ
ಕೃಷ್ಣ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ರಾಜ್ಯ ಮತ್ತು ಕೇಂದ್ರ ಸಚಿವರಾಗಿ ಹಾಗೂ ಮುಖ್ಯಮಂತ್ರಿಯಾಗಿ ಕೃಷ್ಣ ಅವರು ಸಲ್ಲಿಸಿರುವ ಸೇವೆ ಅನುಪಮವಾದುದು. ವಿಶೇಷವಾಗಿ ಮುಖ್ಯಮಂತ್ರಿಯಾಗಿ ಐಟಿ-ಬಿಟಿ ಕ್ಷೇತ್ರದ ಬೆಳವಣಿಗೆಗೆ ಅವರು ನೀಡಿರುವ ಕೊಡುಗೆಗಾಗಿ ಕರ್ನಾಟಕ ಸದಾ ಋಣಿಯಾಗಿರುತ್ತದೆ ಎಂದು ನೆನೆದಿದ್ದಾರೆ.
ಮುತ್ಸದ್ದಿ ರಾಜಕಾರಣಿಯಾಗಿದ್ದ ಕೃಷ್ಣ ಅವರು ಅಜಾತಶತ್ರುಗಳಾಗಿದ್ದರು. ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಪ್ರಾರಂಭದ ದಿನಗಳಲ್ಲಿ ನನಗೆ ಮಾರ್ಗದರ್ಶಕರಾಗಿದ್ದ ಕೃಷ್ಣ ಅವರು ಸದಾ ನನ್ನ ಹಿತೈಷಿಗಳಾಗಿದ್ದರು. ಕೃಷ್ಣ ಅವರ ದೂರದರ್ಶಿತ್ವ, ಶಿಸ್ತುಬದ್ಧ ಜೀವನ, ಸಜ್ಜನಿಕೆಯ ನಡವಳಿಕೆ ಮತ್ತು ಅಧ್ಯಯನಶೀಲ ಪ್ರವೃತ್ತಿ ಉದಯೋನ್ಮುಖ ರಾಜಕಾರಣಿಗಳಿಗೆ ಮಾದರಿ ಎಂದು ಸಿಎಂ ಹೇಳಿದ್ದಾರೆ.

ಎಸ್.ಎಂ.ಕೃಷ್ಣ ಅವರ ಅಗಲಿಕೆಯಿಂದ ನೊಂದಿರುವ ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಕೋರುತ್ತೇನೆ. ನಾಡು ಕಂಡ ಅಪ್ರತಿಮ ರಾಜಕಾರಣಿ, ಧೀಮಂತ ನೇತಾರ, ದೂರದರ್ಶಿತ್ವದ ನಾಯಕ, ಮಾಜಿ ಮುಖ್ಯಮಂತ್ರಿ ಕೃಷ್ಣ ಅವರ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಭವಿಷ್ಯದ ಪೀಳಿಗೆಗೆ ಜೀವನ ಪ್ರೇರಣಾದಾಯಕವಾಗಿರಲಿ ಎಂದು ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ.












Click it and Unblock the Notifications