Mandya constituency: ಸಕ್ಕರೆ ನಾಡಿನ ಈ ಬಾರಿಯ ಸರದಾರನಾರು?
ನಾಡಿಗೆ ಆಗುವ ಯಾವೊಂದು ಅನ್ಯಾಯವನ್ನು ಸಹಿಸದೆ ಸಿಡಿದೇಳುವ ಗುಣ ಮಂಡ್ಯ ಮಣ್ಣಿನದ್ದಾಗಿದೆ. ಹಾಗಾಗಿ ಮಂಡ್ಯ ಎಂದರೆ ಇಂಡಿಯಾಗೂ ಗೊತ್ತು ಎಂದು ಇಲ್ಲಿನ ಜನ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಮಂಡ್ಯ, ಮಾರ್ಚ್ 16: ಕರ್ನಾಟಕ ರಾಜಕೀಯದಲ್ಲೇ ಹಳ್ಳಿಯಿಂದ ಡೆಲ್ಲಿವರೆಗೂ ಸದ್ದು ಮಾಡುವ ಕ್ಷೇತ್ರವೆಂದರೆ ಅದು ಮಂಡ್ಯ ವಿಧಾನಸಭಾ ಕ್ಷೇತ್ರ. ಕೃಷಿಯನ್ನೇ ಮುಖ್ಯ ಕಸುಬಾಗಿ ಇಂದಿಗೂ ಅಳವಡಿಸಿಕೊಂಡಿರುವ ಕ್ಷೇತ್ರದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕರ್ನಾಟಕ ರಾಜಕಾರಣದಲ್ಲಿ ಈ ಕ್ಷೇತ್ರ ಯಾವಾಗಲು ಸದ್ದು ಮಾಡುತ್ತದೆ. ಅದರ ಕುರಿತ ಮಾಹಿತಿ ಇಲ್ಲಿದೆ.
ನಾಡಿಗೆ ಆಗುವ ಯಾವೊಂದು ಅನ್ಯಾಯವನ್ನು ಸಹಿಸದೆ ಸಿಡಿದೇಳುವ ಗುಣ ಮಂಡ್ಯ ಮಣ್ಣಿನದ್ದಾಗಿದೆ. ಹಾಗಾಗಿ ಮಂಡ್ಯ ಎಂದರೆ ಇಂಡಿಯಾಗೂ ಗೊತ್ತು ಎಂದು ಇಲ್ಲಿನ ಜನ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಕೃಷಿ ಆಧಾರಿತ ರೈತಾಪಿ ಜನರು ಪ್ರಮುಖವೆನಿಸಿರುವ ಜಿಲ್ಲೆಯಲ್ಲಿ ಒಟ್ಟು 5 ಸಕ್ಕರೆ ಕಾರ್ಖಾನೆಗಳಿವೆ. ಕಬ್ಬು, ಭತ್ತ, ರಾಗಿ, ರೇಷ್ಮೆ, ಹುರುಳಿ ಸೇರಿದಂತೆ ಹಲವು ಬೆಳೆಗಳನ್ನು ಇಲ್ಲಿ ಬೆಳೆಯುತ್ತಾರೆ.
ಮೈಸೂರು, ತುಮಕೂರು, ರಾಮನಗರ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಿಂದ ಸುತ್ತುವರೆದಿರುವ ಮಂಡ್ಯ ಜಿಲ್ಲೆ ಬೆಂಗಳೂರು ಮತ್ತು ಮೈಸೂರು ಮಹಾನಗರಗಳ ನಡುವೆ ಇದ್ದರೂ ಇಂದಿಗೂ ತನ್ನ ವೈಶಿಷ್ಟತೆಯನ್ನು ಉಳಿಸಿಕೊಂಡಿದೆ. ಕಾವೇರಿ, ಹೇಮಾವತಿ, ಲೋಕಪಾವನಿ, ಶಿಂಷಾ, ಲಕ್ಷ್ಮಣತೀರ್ಥ ಮತ್ತು ವೀರ ವೈಷ್ಣವಿ ನದಿಗಳು ಹರಿಯುವ ಮೂಲಕ ಮಂಡ್ಯ ಜಿಲ್ಲೆಯನ್ನು ಸಮೃದ್ಧವಾಗಿಟ್ಟಿವೆ. ಜಾನಪದ ಕಲೆ ಮತ್ತು ರಂಗಭೂಮಿಗೆ ವಿಶಿಷ್ಟ ಕೊಡುಗೆ ನೀಡಿರುವ ಜಿಲ್ಲೆಯು ಪ್ರವಾಸೋದ್ಯಮಕ್ಕೂ ಹೆಸರಾಗಿದೆ.
ರೈತ ಚಳುವಳಿಗೆ ಹೆಸರಾಸ ಕ್ಷೇತ್ರ ಮಂಡ್ಯವಾಗಿದೆ. ದೇಶ ಯಾವುದೇ ಮೂಲೆಯಲ್ಲಿ ರೈತರಿಗೆ ಅನ್ಯಾಯವಾದರೆ ಇಲ್ಲಿನ ರೈತರು ಸಿಡಿದೇಳುತ್ತಾರೆ. ಹೀಗೆ ರೈತ ಚಳುವಳಿಯಿಂದ ಇಲ್ಲಿ ರಾಜಕಾರಣ ಕೂಡ ಹುಟ್ಟಿಕೊಂಡಿದೆ. ಜಿಲ್ಲೆಯಲ್ಲಿ ಕೆ.ಎಸ್ ಪುಟ್ಟಣ್ಣಯ್ಯ, ಎಸ್.ಡಿ ಜಯರಾಂ, ಎಂ.ಶ್ರೀನಿವಾಸ್, ಎಚ್.ಶ್ರೀನಿವಾಸ್, ನಂದಿನಿ ಜಯರಾಂ, ಕೆ.ಎಸ್ ನಂಜುಂಡೇಗೌಡ, ಸುನಂದಾ ಜಯರಾಂ ಮುಂತಾದವರು ಸಮರ್ಥ ನಾಯಕತ್ವ ನೀಡಿ ರೈತಸಂಘವನ್ನು ಕಟ್ಟಿದ್ದಾರೆ.

1952ರಲ್ಲಿ ಮೊದಲ ಚುನಾವಣೆ
1952ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕೆ.ವಿ. ಶಂಕರಗೌಡರು ಕಿಸಾನ್ ಮಜ್ದೂರ್ ಪಕ್ಷದ ಕೆ. ಚಿಕ್ಕಲಿಂಗಯ್ಯ ವಿರುದ್ಧ ಗೆಲುವು ಸಾಧಿಸುತ್ತಾರೆ. ಇಲ್ಲಿನ ರಾಜಕೀಯ ಆರಂಭದ ಹೆಜ್ಜೆಯಾಗಿದೆ. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 2,35,000 ಮತದಾರರಿದ್ದಾರೆ. ಅದರಲ್ಲಿ ಒಕ್ಕಲಿಗ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ 95,000 ಮತಗಳಿವೆ. ಎರಡನೇ ಸ್ಥಾನದಲ್ಲಿ ಪರಿಶಿಷ್ಟ ಜಾತಿಯ ಸುಮಾರು 33,000 ಮತಗಳಿವೆ. ಉಳಿದಂತೆ ಮುಸ್ಲಿಂ 23,000, ಲಿಂಗಾಯತ 13,000, ಕುರುಬ 13,000, ಎಸ್‌ಟಿ 8,000 ಮತಗಳಿವೆ. ಇತರೆ ಸಮುದಾಯದ ಸುಮಾರು 50,000 ಮತಗಳಿವೆ.

ಮೊದಲಿನಿಂದಲೂ ಇಲ್ಲಿ ಜೆಡಿಎಸ್ ಪ್ರಬಲ್ಯ
ಒಕ್ಕಲಿಗ ಮತದಾರರ ಸಂಪೂರ್ಣ ಮತಗಳು ಒಟ್ಟಾಗಿ ಬೀಳುವುದರಿಂದ ಮೊದಲಿನಿಂದಲೂ ಇಲ್ಲಿ ಜೆಡಿಎಸ್ ಪ್ರಬಲ್ಯ ಇದೆ. ಈಗ ಕ್ಷೇತ್ರದಲ್ಲಿ ಶಾಸಕರಾಗಿರುವ ಎಂ ಶ್ರೀನಿವಾಸ್ ಅವರಿಗೆ ಕ್ಷೇತ್ರದಲ್ಲಿ ಸದ್ಯ ಒಳ್ಳೆಯ ಹೆಸರಿಲ್ಲ. ಕ್ಷೇತ್ರದಲ್ಲಿ ಅವರು ತಮ್ಮ ಹೆಸರು ಕೆಡಿಸಿಕೊಂಡಿದ್ದಾರೆ. ಇದರಿಂದ ತಮಗೆ ಟಿಕೆಟ್ ಸಿಗುವುದಿಲ್ಲ ಎಂದು ಅವರು ಪ್ರಚಾರವನ್ನೂ ಅಷ್ಟಾಗಿ ನಡೆಸುತ್ತಿರಲಿಲ್ಲ. ಆದರೂ ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ವರಿಷ್ಠರು ಹೇಳಿರುವುದರಿಂದ ಈಗ ಅವರು ತಮ್ಮ ಪ್ರಚಾರ ಬಿರುಸುಗೊಳಿಸಿದ್ದಾರೆ. ಆದರೆ ಎಂ ಶ್ರೀನಿವಾಸ್ ಅವರ ಅಳಿಯ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಶ್ರೀನಿವಾಸ್ ಅವರು ಕ್ಷೇತ್ರದಲ್ಲಿ ಹೆಸರು ಹಾಳಾಗಿರುವುದರಿಂದ ತಮ್ಮ ಟಿಕೆಟ್ ಅನ್ನು ಅಳಿಯನಿಗೆ ಕೊಡಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರೊಂದಿಗೆ ಕೆವಿ ಶಂಕರೇಗೌಡರ ಮೊಮ್ಮಗ ಕೆಎಸ್ ವಿಜಯಾನಂದ ಸಹ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇವರೊಂದಿಗೆ ಮನ್ಮುಲ್ ಅಧ್ಯಕ್ಷ ಬಿಆರ್ ರಾಮಚಂದ್ರ, ಮುದ್ದನಘಟ್ಟ ಮಹಾಲಿಂಗೇಗೌಡ ಕೂಡ ಆಕಾಂಕ್ಷಿಯಾಗಿದ್ದಾರೆ.

ಕಾಂಗ್ರೆಸ್‌ನಿಂದ ಬರೋಬ್ಬರಿ 16 ಮಂದಿ ಅರ್ಜಿ
ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಕಾಂಗ್ರೆಸ್‌ನಿಂದ ಬರೋಬ್ಬರಿ 16 ಮಂದಿ ಅರ್ಜಿ ಹಾಕಿದ್ದಾರೆ. ಕಳೆದ ಚುನಾವಣೆಯಲ್ಲಿ ಟಿಕೆಟ್ ಪಡೆದು ಸೋತಿದ್ದ ಗಣಿಗ ರವಿಕುಮಾರ್ ಅವರು ಸೋತರು ಹಲವು ಕಾರ್ಯಕ್ರಮಗಳಿಂದ ತಮ್ಮ ಹೆಸರು ಉಳಿಸಿಕೊಂಡಿದ್ದಾರೆ. ಇನ್ನು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವ ಕೆಕೆ ರಾಧಾಕೃಷ್ಣ ಕೀಲಾರ, ಕಾವೇರಿ ಆಸ್ಪತ್ರೆ ಮುಖ್ಯಸ್ಥ ಎಚ್‌ಬಿ ರಾಮು, ಮನ್ಮುಲ್ ನಿರ್ದೇಶಕ ಯುಸಿ ಶಿವಕುಮಾರ್, ಎಂಎಸ್ ಚಿದಂಬರ್, ಅಮರಾವತಿ ಚಂದ್ರಶೇಖರ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್ ಸೇರಿದಂತೆ ಇನ್ನೂ ಹಲವರು ಪಟ್ಟಿಯಲ್ಲಿದ್ದಾರೆ.

ಚಂದಗಾಲು ಶಿವಣ್ಣ ಅವರಿಗೆ ಟಿಕೆಟ್
ಇನ್ನೂ ಬಿಜೆಪಿಯಲ್ಲಿ ಕಳೆದ ಬಾರಿ ಜೆಡಿಎಸ್ ತೊರೆದು ಬಂದಿದ್ದ ಚಂದಗಾಲು ಶಿವಣ್ಣ ಅವರಿಗೆ ಟಿಕೆಟ್ ನೀಡಲಾಗಿತ್ತು. ಆದರೆ ಈ ಬಾರಿ ಜೆಡಿಎಸ್‌ನಿಂದಲೂ ವಲಸೆ ಬಂದಿರುವ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕರಾದ ಅಶೋಕ್ ಜಯರಾಂ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎನ್ನಲಾಗಿದೆ. ಇನ್ನೂ ರೈತ ಸಂಘಟನೆ ಇಲ್ಲಿ ಸಕ್ರಿಯವಾಗಿರುವುದರಿಂದ ಆರ್ಗನಿಕ್ ಮಂಡ್ಯ ಸಂಸ್ಥೆ ಮೂಲಕ ಕ್ಷೇತ್ರದಲ್ಲಿ ಪರಿಚಿತರಾಗಿರುವ ಮಧುಚಂದನ್ ಗೌಡ ಕೂಡ ಸರ್ವೋದಯ ಪಕ್ಷದಿಂದ ಕಣಕ್ಕೆ ಇಳಿಯಲಿದ್ದಾರೆ. ಮಹಿಳಾ ಸಂಘಗಳನ್ನು ಸ್ಥಾಪಿಸಿರುವ ಅವರಿಗೆ ಬಹುದೊಡ್ಡ ಜನ ಬೆಂಬಲವೂ ಇಲ್ಲಿದೆ. ಮೈಷುಗರ್ ಕಬ್ಬು ಬೆಳೆ ಪೇ ಫಾರ್ಮಾರ್ ಎಂಬ ಹೋರಾಟಗಳಿಂದ ಅವರು ಕ್ಷೇತ್ರದ ರೈತರಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಹೀಗಾಗಿ ಅವರು ತಮ್ಮ ಪ್ರಚಾರ ನಡೆಸಿದ್ದಾರೆ.












Click it and Unblock the Notifications