ಜೆಡಿಎಸ್‌ನವರು ನನ್ನನ್ನು ಪ್ರಚಾರಕ್ಕೆ ಕರೆದಿಲ್ಲ: ಸುಮಲತಾ ಸ್ಪಷ್ಟನೆ
ಮಂಡ್ಯ :ಮತದಾನ ಮಾಡುವುದು ನನ್ನ ಕರ್ತ್ಯವ್ಯ, ಅದನ್ನ ನಿರ್ವಹಿಸಿದ್ದೇನೆ. ದೇವೇಗೌಡರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ. ಅವರಿಗೆ ಸರಿಯಾದ ಮಾಹಿತಿ ಇಲ್ಲದೆ ಆ ರೀತಿ ಹೇಳಿದ್ದಾರೆ. ಅವರಿಂದ ಅಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
ದೊಡ್ಡರಸಿನಕೆರೆಯ ಮತಗಟ್ಟೆ ಸಂಖ್ಯೆ 167ರಲ್ಲಿ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು ದೊಡ್ಡವರು. ಆದರೆ, ಸ್ವತಂತ್ರ ಸಂಸದೆಯಾಗಿ ನನ್ನ ಜವಾಬ್ದಾರಿಯನ್ನ ನಿರ್ವಹಿಸಿದ್ದೀನಿ. ಮೋದಿಯವರು ಪ್ರಧಾನಿಯಾಗಬೇಕೆಂಬ ಉದ್ದೇಶದಿಂದ ನಾನು ಗೆದ್ದಂತಹ ಸೀಟ್ ತ್ಯಾಗ ಮಾಡಿದ್ದೀನಿ. ಈ ಹಂತದಲ್ಲಿ ಅಂಬರೀಶ್ ಅವರ ಪಡೆಯ ಶಕ್ತಿಯನ್ನು ಕೂಡ ಎನ್‌ಡಿಎಗೆ ಕೊಟ್ಟಿದ್ದೇವೆ. ಮೈತ್ರಿ ಪರ ನಮ್ಮ ಬೆಂಬಲಿಗರು ನಿಷ್ಠೆಯಿಂದ ಕೆಲಸ ಮಾಡಿದ್ದಾರೆ ಎಂದರು.

ಆದರೆ, ಜೆಡಿಎಸ್ ನಾಯಕರು ಯಾವುದೇ ಸಭೆ, ಪ್ರಚಾರಕ್ಕೆ ಆಹ್ವಾನಿಸಿಲ್ಲ. ಅವರು ಕರೆದು ನಾನು ಬರದೇ ಇದ್ದರೆ ತಪ್ಪಾಗುತ್ತಿತ್ತು. ಆದರೆ, ಅವರು ನನ್ನ ಕರೆದೇ ಇಲ್ಲ. ಇನ್ನು ಪ್ರಚಾರಕ್ಕೆ ಬರಲಿಲ್ಲ ಎಂಬುದಕ್ಕೆ ಅರ್ಥವಿದೆಯೇ ಎಂದು ಸುಮಲತಾ ಮರು ಪ್ರಶ್ನಿಸಿದರು.
ಕರೆಯದಿರುವುದು ಬೇಸರವಾಗಿದೆ
ನಾನಿಲ್ಲದೆ ಚುನಾವಣೆ ಮಾಡಿಕೊಳ್ಳುತ್ತೇವೆಂಬ ಭಾವನೆ ಇರಬಹುದು. ದೇವೇಗೌಡ ಅವರು ಹೇಳಿಕೆ ನೀಡಿದ ನಂತರ ನನಗೆ ಒಂದಷ್ಟು ಕರೆ ಬಂದವು. ನನ್ನ ಯಾವುದೇ ಪ್ರಚಾರಕ್ಕೆ ಕರೆದಿಲ್ಲ. ಕುಮಾರಸ್ವಾಮಿ ನಮ್ಮ ಮನೆಗೆ ಬಂದು ಹೋದ ನಂತರ ನನಗೆ ಒಂದು ಫೋನ್ ಮಾಡಿ ಪ್ರಚಾರಕ್ಕೆ ಬನ್ನಿ ಎಂದು ಕೇಳಿಲ್ಲ. ಇಷ್ಟು ತ್ಯಾಗ ಮಾಡಿಯೂ ನನ್ನ ಕರೆಯಲಿಲ್ಲ ಎನ್ನುವುದು ನನಗೆ ಬೇಸರವಾಯಿತು. ಹಾಗಿದ್ದರೆ ನಾನು ಮಾಡಿದ್ದು ತಪ್ಪಾ? ಎಂದರು.
ನನ್ನ ಅಭಿಮಾನಿಗಳು ಒಂದಷ್ಟು ಜನ ವಿರೋಧ ವ್ಯಕ್ತಪಡಿಸಿದರು. ಸೋತ ಸೀಟನ್ನೇ ಬಿಡಲ್ಲ, ಅಂತಹದರಲ್ಲಿ ನಾನು ಗೆದ್ದ ಸೀಟು ಬಿಟ್ಟು ಕೊಟ್ಟಿದ್ದಿನಿ. ಅವರ ಮನಸ್ಸಿನಲ್ಲಿ ಏನಿದೆ ಎಂಬುದು ನನಗೆ ಗೊತ್ತಿಲ್ಲ. ಆದರೆ, ಅವರು ನನ್ನ ಪ್ರಚಾರಕ್ಕೆ ಕರೆದಿಲ್ಲ. ಪಕ್ಷ ಸೂಚನೆ ನೀಡಿದ ಕಡೆ ಹೋಗಿ ನಾನು ಪ್ರಚಾರಕ್ಕೆ ಹೋಗಿದ್ದೇನೆ. ಮಂಗಳೂರುವರೆಗೂ ಹೋಗಿದ್ದೀನಿ, ಮಂಡ್ಯಕ್ಕೆ ಬರುತ್ತಿರಲಿಲ್ಲವೇ? ಆ ದಿನ ನನ್ನ ಸೀಟನ್ನ ಬಿಟ್ಟಾಗಲೂ ಬೇಸರವಾಗಿರಲಿಲ್ಲ. ಆದರೆ, ದೇವೇಗೌಡರ ಹೇಳಿಕೆ ನನಗೆ ಬೇಸರ ತರಿಸಿದೆ ಎಂದರು.
ಎನ್‌ಡಿಎ, ಬಿಜೆಪಿ ಗೆಲ್ಲಬೇಕು ಎಂಬುದು ಇದೆ. ಮಂಡ್ಯದಲ್ಲೂ ಒಳ್ಳೆಯ ಟ್ರೆಂಡ್ ಇದೆ ಎಂದು ಮಾತನಾಡುತ್ತಾರೆ. ರಾಜ್ಯದ 28 ಕ್ಷೇತ್ರಗಳಲ್ಲೂ ಎನ್‌ಡಿಎ ಅಭ್ಯರ್ಥಿಗಳು ಗೆಲ್ಲಬೇಕು ಎಂಬುದು ನನ್ನ ಆಶಯ ಎಂದರು.
ಸಚಿವ ಎನ್.ಚಲುವರಾಯಸ್ವಾಮಿ ಅವರ ಋಣ ಸಂದಾಯದ ಹೇಳಿಕೆಗೆ ಪ್ರತಿಕ್ರಿಯಿಸಿ, ಚುನಾವಣೆ ಬಂದಾಗ ಅವರು ಋಣ ಸಂದಾಯ ಬಗ್ಗೆ ಮಾತನಾಡುತ್ತಾರೆ. ಆ ಬಗ್ಗೆ ಅವರನ್ನೇ ಕೇಳಿ ಎಂದು ಹೇಳಿದರು.












Click it and Unblock the Notifications