ಬೆಂಗಳೂರು-ಮೈಸೂರು ಹೆದ್ದಾರಿಯ ಈ ಹೋಟೆಲ್‌ನಲ್ಲಿ ಇಡ್ಲಿ ಬೆಲೆ ಒಂದು ರೂಪಾಯಿ ಮಾತ್ರ!
ಸಾಮಾನ್ಯವಾಗಿ ನಾವು ಯಾವುದೇ ಹೋಟೆಲ್‌ನಲ್ಲಿ ತಿಂಡಿ ತಿಂದರೂ ಕನಿಷ್ಠ 40-50 ರೂಪಾಯಿ ಖರ್ಚಾಗುತ್ತದೆ. ಒಂದು ಪ್ಲೇಟ್ ಇಡ್ಲಿ (ಎರಡು ಸಣ್ಣ ಇಡ್ಲಿ) ಬೆಲೆ ಕನಿಷ್ಠ 30-40 ರೂಪಾಯಿ ಇರುತ್ತದೆ. ಆದರೆ ಇಲ್ಲೊಬ್ಬರು ನಡೆಸುವ ಹೋಟೆಲ್‌ನಲ್ಲಿ ನೀವು ಬರೀ ಹತ್ತು ರೂಪಾಯಿ ಕೊಟ್ಟರೆ ಸಾಕು ಹತ್ತು ಇಡ್ಲಿ ಜೊತೆ ಒಂದು ಬೋಂಡ ಕೂಡ ಸಿಗುತ್ತೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಈ ಹೋಟೆಲ್‌ನಲ್ಲಿ ಒಂದು ಇಡ್ಲಿ ಬೆಲೆ ಕೇವಲ ಒಂದು ರೂಪಾಯಿ ಮಾತ್ರ. ಈ ಹೋಟೆಲ್ ಇರೋದು ಮಂಡ್ಯ ಜಿಲ್ಲೆಯ ಇಂಡುವಾಳು ಗ್ರಾಮದಲ್ಲಿ.

ಶೇಖರ್ ಪಾಟೀಲ್ ಎನ್ನುವವರು ಫೇಸಬುಕ್‌ನಲ್ಲಿ ಈ ಹೋಟೆಲ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇಂಡುವಾಳು ಗ್ರಾಮದ ನಿಂಗಮ್ಮ ಎನ್ನುವವರು ಕೇವಲ ಒಂದು ರೂಪಾಯಿಗೆ ಒಂದು ಇಡ್ಲಿ ನೀಡುವ ಮೂಲಕ ಜನ ಮನ ಗೆದ್ದಿದ್ದಾರೆ.
ಫೇಸ್‌ಬುಕ್ ಪೋಸ್ಟ್‌ನಲ್ಲಿ ಏನಿದೆ?
ಮಂಡ್ಯದ ಇಂಡುವಾಳು ಗ್ರಾಮದಲ್ಲಿ ಈಗ ಒಂದು ರೂಪಾಯಿಗೆ ಒಂದು ಇಡ್ಲಿ ಕೊಡುವ ಒಂದು ಅಜ್ಜಿ ಹೋಟೆಲ್ ಇದೆ ಎಂದು ಗೊತ್ತಾಯಿತು. ಸ್ನೇಹಿತರ ಜೊತೆ ಬೆಂಗಳೂರು-ಮೈಸೂರು ಹೈವೆಯಲ್ಲಿ ಬರುವ ಇಂಡುವಾಳು ಗ್ರಾಮಕ್ಕೆ ಸ್ನೇಹಿತರ ಜೊತೆ ನಡೆದೇ ಹೋದೆವು.
ಊರಿನಲ್ಲಿ ಯಾರನ್ನೇ ಕೇಳಿದರೂ ರಸ್ತೆಬದಿಯಲ್ಲಿರುವ ಪುಟ್ಟ ಪೆಟ್ಟಿ ಅಂಗಡಿಯಲ್ಲಿ ತನ್ನ ಕಾಯಕದಲ್ಲಿ ಮಾಲೀಕರು ಹಾಗೂ ಕೆಲಸದವರಾಗಿರುವ ನಿಂಗಮ್ಮರನ್ನು ತೋರಿಸೇ ತೋರಿಸುತ್ತಾರೆ.
10 ರೂಪಾಯಿಗೆ ಒಂದು ಪ್ಲೇಟ್ ಇಡ್ಲಿ(8 ಇರುತ್ತವೆ) ಹಾಗೂ ಒಂದು ದಪ್ಪನೆಯ ಬೋಂಡ, ಟಮೋಟ ಸಾಗು+ಚಟ್ನಿ. ಹಬೆಯಾಡುವ ಮಲ್ಲಿಗೆ ಮೃದುವಿನ ಬಿಸಿ ಇಡ್ಲಿಯನ್ನು ಸಾಗು ಹಾಗೂ ಚಟ್ನಿಯಲ್ಲಿ ಮುಳುಗಿಸಿ ಬಾಯಲ್ಲಿಟ್ಟರೆ ನೀವು ಅಗಿಯುವ ಅಗತ್ಯವಿಲ್ಲ. ಮುಲಮುಲನೆ ಕರಗಿ ಗಂಟಲಿಗಿಳಿಯುತ್ತದೆ ಎಂದು ಹೇಳಿದ್ದಾರೆ.
33 ವರ್ಷಗಳಿಂದ ಇದೇ ಕಾಯಕ
ಕಳೆದ 33 ವರ್ಷಗಳಿಂದಲೂ ಇದೇ ಜಾಗದಲ್ಲಿ ಇಡ್ಲಿ ಮಾಡುವ ಕೆಲಸ ಮಾಡುತ್ತಿದ್ದಾರೆ, 33 ವರ್ಷದ ಹಿಂದೆ ಇದೇ ಹೋಟೆಲಿನಲ್ಲಿ ಗಂಡನನ್ನು ಕಳೆದುಕೊಂಡ ನಿಂಗಮ್ಮ ಅವರ ನೆನಪಿನಲ್ಲಿ ಕೆಲಸ ಮುಂದುವರೆಸಿದ್ದಾರೆ. ಆಗ ಒಂದು ಇಡ್ಲಿ ಬೆಲೆ 50 ಪೈಸೆ ಇತ್ತು.
ಈಗ 8-9 ವರ್ಷದಿಂದ ಈಚೆಗೆ ಇಡ್ಲಿ ಬೆಲೆ 1 ರೂ. ಮಾಡಿದ್ದಾರೆ. ಇದ್ದ ಒಬ್ಬ ಮಗಳ ಮದುವೆ ಮಾಡಿದ್ದಾರೆ, ಮೊದಲು ಇಲ್ಲಿ ಗುಡಿಸಲು ಇತ್ತು, ಈಗ ಅಲ್ಲಿ ಶೀಟ್ ಹಾಕಲಾಗಿದ್ದು, ಒಬ್ಬರೇ ವಾಸ ಮಾಡುತ್ತಾರೆ.
ಪ್ರತಿದಿನ ಅಕ್ಕಿ-ಉದ್ದು ನೆನೆಸಿ, ಎರಡೆರಡು ಬಕೆಟ್ ಹೊತ್ತು ಮಂಡ್ಯಕ್ಕೆ ಬಸ್‌ನಲ್ಲಿ ಹೋಗಿ ಗ್ರೈಂಡರ್ ಮಾಡಿಸಿಕೊಂಡು ಬಂದು ದಿನಕ್ಕೆ 500 ಇಡ್ಲಿ, 100 ಬೋಂಡ ಮಾಡುತ್ತಾರೆ. ಅಲ್ಲಿಗೆ ₹ 700 ಬರುತ್ತದೆ. ಅದರಲ್ಲಿ ಅಕ್ಕಿ, ಉದ್ದಿನಬೇಳೆ, ಕಾಯಿ, ಕಡಲೆಹಿಟ್ಟು, ಈರುಳ್ಳಿ, ಎಣ್ಣೆ, ಸಿಲಿಂಡರ್, ಖರ್ಚು ತೆಗೆದು 150 -200ರೂ ಉಳಿಯುತ್ತದೆ ಎನ್ನುತ್ತಾರೆ ನಿಂಗಮ್ಮ.
ಇಷ್ಟೆಲ್ಲಾ ಮಾಡಿ 150 ಉಳಿದರೆ ಸಾಕಾ ಎಂದು ಕೇಳಿದರೆ, "ಅಯ್ಯೋ, ಈ ವಯಸ್ಸಲ್ಲಿ ನನ್ನನ್ನು ಯಾರು ಕೂಲಿಗೆ ಕರೆಯುತ್ತಾರೆ, ಈ ಇಡ್ಲಿ ಮಾಡುದ್ರೆ ನನ್ನ ಜೀವ್ಣಕ್ಕಾಗುವಷ್ಟಾದರೂ ಆಯ್ತದೆ ಬಾ ಮಗಾ" ಎನ್ನುತ್ತಾರಂತೆ.
ಇಡ್ಲಿ ಬೆಲೆ 2 ರೂಪಾಯಿ ಆದರೂ ಮಾಡಿ ಎಂದಾಗ, "ಅಯ್ಯೋ 1ರೂಪಾಯೇ ಸಾಕು ಬನ್ರಪ್ಪ, ನಾನ್ ಬದ್ಕುಕೆ ಇಷ್ಟೇ ಸಾಕಲ್ವೆ" ಎನ್ನುತ್ತಾರೆ.












Click it and Unblock the Notifications