ಹನುಮ ಧ್ವಜ ವಿವಾದ: ರಾಷ್ಟ್ರ ಧ್ವಜ ಹಾರಿಸಲು ಅಡ್ಡಿ; ಬಲಪಂಥೀಯ ಕಾರ್ಯಕರ್ತರ ವಿರುದ್ಧ ಎಫ್‌ಐಆರ್
ರಾಜ್ಯಾದ್ಯಂತ ಸುದ್ದಿಯಾಗಿದ್ದ ಕೆರಗೋಡು ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ರಾಷ್ಟ್ರಧ್ವಜ ಹಾರಿಸಲು ಅಧಿಕಾರಿಗಳಿಗೆ ಅಡ್ಡಿಪಡಿಸಿದ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮಂಡ್ಯ ತಾಲೂಕಿನ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮತ್ತು ತಹಶೀಲ್ದಾರ್ ದೂರು ನೀಡಿದ್ದಾರೆ. ಸಾರ್ವಜನಿಕ ಸೇವಕರ ವಿರುದ್ಧ ಕಾನೂನುಬಾಹಿರ ಸಭೆ, ಅಕ್ರಮ ನಿರ್ಬಂಧ ಮತ್ತು ಕ್ರಿಮಿನಲ್ ಬಲ ಪ್ರಯೋಗದ ದೂರು ದಾಖಲಿಸಿದ್ದಾರೆ.
ಕೆರಗೋಡು ಗ್ರಾಮದಲ್ಲಿ ಜನವರಿ 28 ರಂದು ಕೇಸರಿ ಹನುಮ ಧ್ವಜ ತೆರವು ಮಾಡಿ ಅದೇ ಸ್ಥಳದಲ್ಲಿ ರಾಷ್ಟ್ರ ಧ್ವಜ ಹಾರಿಸುವ ಸಂದರ್ಭದಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ್ದಾರೆ. ಕೆಲಸ ಮಾಡುತ್ತಿದ್ದ ರಾಜ್ಯ ಅಧಿಕಾರಿಗಳಿಗೆ ರಾಷ್ಟ್ರಧ್ವಜ ಹಾರಿಸದಂತೆ ಅಡ್ಡಿ ಪಡಿಸಿದ್ದಾರೆ ಎಂದು ಕೆರಗೋಡು ನಿವಾಸಿ ಪ್ರತಾಪ್ ಬೆಳ್ಳಿದೆಗಳು ಹಾಗೂ 400ರಿಂದ 500 ಮಂದಿ ಬಲಪಂಥೀಯ ಕಾರ್ಯಕರ್ತರ ವಿರುದ್ಧ ಕಾರ್ಯನಿರ್ವಾಹಕ ದಂಡಾಧಿಕಾರಿ ಶಿವಕುಮಾರ್ ಬಿರಾದಾರ್ ಆರೋಪಿಸಿದ್ದಾರೆ.

ಜನವರಿ 28ರಂದು ರಾತ್ರಿ ಶ್ರೀಗೌರಿಶಂಕರ ಸೇವಾ ಟ್ರಸ್ಟ್‌ನಿಂದ ನಿಯಮ ಉಲ್ಲಂಘಿಸಿ ಕೇಸರಿ ಧ್ವಜ ಹಾರಿಸಲಾಗಿದ್ದು, ಇದಕ್ಕೆ ಕೆಲವು ಪ್ರತಿಸ್ಪರ್ಧಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಮಸ್ಯೆ ಬಗೆಹರಿಸಲು ಶಾಂತಿ ಸಭೆಯಲ್ಲಿ ಗ್ರಾ.ಪಂ.ಅಧಿಕಾರಿಗಳು ಟ್ರಸ್ಟ್‌ನ ಸದಸ್ಯರಿಗೆ ಮನವರಿಕೆ ಮಾಡಿ ಕೇಸರಿ ಧ್ವಜ ತೆರವು ಹಾಗೂ ಅದರ ಜಾಗದಲ್ಲಿ ರಾಷ್ಟ್ರಧ್ವಜಾರೋಹಣಕ್ಕೆ ಅವಕಾಶ ಕಲ್ಪಿಸಲು ಯತ್ನಿಸಿದರು. ಆದರೆ, ಅವರು ಸಹಕರಿಸಲು ನಿರಾಕರಿಸಿದ್ದಾರೆ. ನಂತರ ಕೆರಗೋಡು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿಯಮ ಉಲ್ಲಂಘಿಸಿ ಅಳವಡಿಸಿರುವ ಕೇಸರಿ ಧ್ವಜವನ್ನು ತೆಗೆಯಲು ಉನ್ನತ ಅಧಿಕಾರಿಗಳ ನೆರವು ಕೋರಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಟ್ರಸ್ಟ್‌ನ ಬೆಂಬಲಿಗರು ಮತ್ತು ಪ್ರತಿಸ್ಪರ್ಧಿ ಗುಂಪಿನ ನಡುವೆ ಉದ್ವಿಗ್ನತೆ ಹೆಚ್ಚಾದಾಗ, ಮಂಡ್ಯ ತಾಲೂಕು ಅಧಿಕಾರಿಗಳು ಮಧ್ಯಪ್ರವೇಶಿಸಲು ನಿರ್ಧರಿಸಿದರು. ಜನವರಿ 28 ರಂದು ಬೆಳಗ್ಗೆ ಪೊಲೀಸರೊಂದಿಗೆ ಗ್ರಾಮ ಪಂಚಾಯಿತಿ ಕಚೇರಿಗೆ ಬಂದರು. ಆದರೆ, ಕೆರಗೋಡು ಮತ್ತು ಇತರ ಗ್ರಾಮಗಳ ಸುಮಾರು 400 ರಿಂದ 500 ಬಲಪಂಥಿಯ ಕಾರ್ಯಕರ್ತರು ತಡೆದರು. ಕೇಸರಿ ಧ್ವಜವನ್ನು ಕೆಳಗಿಳಿಸಲು ಬಿಡಲಿಲ್ಲ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

"ಬೆಳಿಗ್ಗೆ 6 ರಿಂದ 9 ಗಂಟೆಯವರೆಗೆ ಧ್ವಜವನ್ನು ತೆಗೆದುಹಾಕುವ ಅಗತ್ಯವನ್ನು ಪ್ರತಿಭಟನಾಕಾರರಿಗೆ ಮನವರಿಕೆ ಮಾಡಲು ಮೂರು ಗಂಟೆಗಳ ಕಾಲ ಪ್ರಯತ್ನ ಮಾಡಿದರೂ ಅವರು ಪಟ್ಟುಬಿಡಲಿಲ್ಲ. ನಂತರ ಪೊಲೀಸರ ನೆರವಿನಿಂದ ಹನುಮ ಧ್ವಜವನ್ನು ಇಳಿಸಲಾಯಿತು' ಎಂದು ದೂರಿನಲ್ಲಿ ತಿಳಿಸಲಾಗಿದೆ.
ಜನವರಿ 28 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಸರ್ಕಾರಿ ಅಧಿಕಾರಿಗಳು ರಾಷ್ಟ್ರಧ್ವಜವನ್ನು ಹಾರಿಸಲು ಪ್ರಯತ್ನಿಸಿದಾಗ, ಪ್ರತಿಭಟನಾಕಾರರು ಅವರಿಗೆ ಅಡ್ಡಿಪಡಿಸಿದರು ಮತ್ತು ಹಲ್ಲೆ ನಡೆಸಿದರು ಎಂದು ಆರೋಪಿಸಲಾಗಿದೆ. ಇನ್ನು, ಕೆರಗೋಡು ಗ್ರಾಮ ಪಂಚಾಯಿತಿ ಜೆಡಿಎಸ್ ಹಿಡಿತ ಹೊಂದಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಅಲ್ಪಸಂಖ್ಯಾತರಿದ್ದಾರೆ.
ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಮುನ್ನ ಗ್ರಾಮ ಪಂಚಾಯಿತಿ ಆವರಣದಲ್ಲಿರುವ ನೂತನ ಧ್ವಜ ಸ್ತಂಭದ ಮೇಲೆ ಕೇಸರಿ ಹನುಮ ಧ್ವಜಾರೋಹಣ ಮಾಡಲು ಗ್ರಾಮ ಪಂಚಾಯಿತಿ ಸರ್ವಾನುಮತದಿಂದ ತೀರ್ಮಾನಿಸಿತ್ತು .ಆದರೆ ಜನವರಿ 5 ರಂದು ಕೆರಗೋಡು ಪಂಚಾಯತ್ ದಾಖಲೆಗಳ ಪ್ರಕಾರ ಪಂಚಾಯಿತಿಯಿಂದ ಅಧಿಕೃತವಾಗಿ ರಾಷ್ಟ್ರಧ್ವಜ ಅಥವಾ ರಾಜ್ಯ ಧ್ವಜಾರೋಹಣಕ್ಕೆ ಮಾತ್ರ ಅನುಮತಿಯಿದೆ ಎಂದು ತಿಳಿಯಿತು. ಸುಮಾರು ಎಂಟು ದಿನಗಳ ಕಾಲ ಧ್ವಜಸ್ತಂಭದ ಮೇಲೆ ಕೇಸರಿ ಧ್ವಜ ಹಾರಾಡುತ್ತಿತ್ತು. ಗಣರಾಜ್ಯೋತ್ಸವದ ನಂತರ ಕೇಸರಿ ಧ್ವಜ ಮತ್ತು ರಾಷ್ಟ್ರಧ್ವಜದ ವಿವಾದ ಆರಂಭವಾಯಿತು.












Click it and Unblock the Notifications