ಕಬ್ಬಿನ ಗದ್ದೆಯಲ್ಲಿ ಅಗ್ನಿ ಅವಘಡ: ರೈತ ಸಜೀವ ದಹನ, 20 ಎಕರೆ ಬೆಳೆ ನಾಶ
ಕಬ್ಬಿನ ಗದ್ದೆಗೆ ಬಿದ್ದ ಬೆಂಕಿ ಆರಿಸಲು ಹೋದ ರೈತ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಕರಕಲಾಗಿರುವ ಘಟನೆ ಮಂಡ್ಯ ತಾಲೂಕಿನ ಮೊಡಚಾಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಸುಮಾರು 20 ಎಕರೆ ಪ್ರದೇಶದ ಕಬ್ಬಿನ ಬೆಳೆ ನಾಶವಾಗಿದೆ.
ಮಂಡ್ಯ, ಫೆಬ್ರವರಿ 13: ಕಬ್ಬಿನ ಗದ್ದೆಗೆ ಬಿದ್ದ ಬೆಂಕಿ ಆರಿಸಲು ಹೋದ ರೈತ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಕರಕಲಾಗಿರುವ ಘಟನೆ ಮಂಡ್ಯ ತಾಲೂಕಿನ ಮೊಡಚಾಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೊಡಚಾಕನಹಳ್ಳಿ ಗ್ರಾಮದ ಹಾಲಿಂಗಯ್ಯ (60) ಮೃತ ರೈತ ಎಂದು ಗುರುತಿಸಲಾಗಿದೆ.
ಭಾನುವಾರ ಮಧ್ಯಾಹ್ನ ಸುಮಾರು 1 ಗಂಟೆ ಸಮಯದಲ್ಲಿ ಮೊಡಚಾಕನಹಳ್ಳಿ ಗ್ರಾಮದಲ್ಲಿರುವ ಮಹಾಲಿಂಗಯ್ಯ ಅವರು ಜಮೀನಿನ ಬಳಿ ಹೋಗಿದ್ದಾರೆ. ಈ ವೇಳೆ ಕಬ್ಬಿನ ಗದ್ದೆಗೆ ಬೆಂಕಿ ಹೊತ್ತಿಕೊಂಡಿದ್ದು, ನೋಡ ನೋಡುತ್ತಿದ್ದಂತೆ ಸಂಪೂರ್ಣ ಗದ್ದೆಗೆ ಬೆಂಕಿ ಆವರಿಸಿದ್ದು, ಹೊತ್ತಿ ಉರಿದಿದೆ. ಬೆಳೆ ಕಣ್ಣೆದುರಲ್ಲೆ ಸುಟ್ಟು ಹೋಗುತ್ತಿರುವುದನ್ನು ಕಂಡ ಮಹಾಲಿಂಗಯ್ಯ ಬೆಂಕಿ ಆರಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಬೆಂಕಿಯ ಕೆನ್ನಾಲಿಗೆ ಮಹಾಲಿಂಗಯ್ಯಗೂ ಆವರಿಸಿದ್ದು, ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾರೆ.
ದಟ್ಟ ಹೊಗೆಯನ್ನು ನೋಡಿದ ಗ್ರಾಮಸ್ಥರು ತಕ್ಷಣ ಜಮೀನಿನ ಬಳಿಗೆ ಬಂದು ನೀರು, ಮಣ್ಣು ಹಾಕಿ ಬೆಂಕಿ ಆರಿಸಲು ಯತ್ನಿಸಿದ್ದಾರೆ. ಘಟನೆಯಲ್ಲಿ ಸುಮಾರು 20 ಎಕರೆ ಪ್ರದೇಶದ ಕಬ್ಬಿನ ಬೆಳೆ ನಾಶವಾಗಿದೆ. ಮೊಡಚಾಕನಹಳ್ಳಿ ಗ್ರಾಮದ ಮಹೇಶ ಅವರಿಗೆ ಸೇರಿದ 8 ಎಕರೆ, ಜವರೇಗೌಡರ 1.5 ಎಕರೆ, ಪಾಪಣ್ಣ ಅವರ 2 ಎಕರೆ ಶಂಕರ್‌ರವರ 1 ಎಕರೆ ಹಾಗೂ ಇನ್ನೂ ಇತರ ರೈತರ ಒಟ್ಟು ಸುಮಾರು 20 ಎಕರೆ ಪ್ರದೇಶದ ಕಬ್ಬು ಬೆಂಕಿಗಾಹುತಿಯಾಗಿದೆ. ಅಲ್ಲದೇ ಕಬ್ಬಿನ ಗದ್ದೆಯ ಸಮೀಪ ಇದ್ದ ಮಹೇಶ್ ಅವರ ಒಂದೂವರೆ ಎಕರೆ ಬಾಳೆ ತೋಟವೂ ಬೆಂಕಿಗಾಹುತಿಯಾಗಿದೆ.

ಘಟನಾ ಸ್ಥಳಕ್ಕೆ ಶಾಸಕ ಪುಟ್ಟರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಮಹಾಲಿಂಗಯ್ಯ ಅವರ ಮನೆಗೆ ತೆರಳಿ ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಇನ್ನು ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರ ಹಾಗೂ ಕುಟುಂಬ ನಿರ್ವಹಣೆಗಾಗಿ ಎರಡು ಹಸುಗಳನ್ನು ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಇನ್ನು ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ ಅನೇಕ ರೈತ ಮುಖಂಡರು ಮಹಾಲಿಂಗಯ್ಯ ಅವರ ಮನೆಗೆ ತೆರಳಿ ಸಾಂತ್ವನ ಹೇಳಿದ್ದಾರೆ.
ಅಗ್ನಿ ಅವಘಡ ಘಟನೆಗೆ ಸಂಬಂಧಿಸಿದಂತೆ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.












Click it and Unblock the Notifications