ಮಳ್ಳವಳ್ಳಿಯಲ್ಲಿ ವೇದ ಚಿತ್ರತಂಡಕ್ಕೆ ಭರ್ಜರಿ ಸ್ವಾಗತ, ಅಭಿಮಾನಿಗಳಿಗೆ ಶಿವಣ್ಣ ಹೇಳಿದ್ದೇನು?
ಮಂಡ್ಯ, ಡಿಸೆಂಬರ್, 29: ವೇದ ಚಲನಚಿತ್ರ ಬಿಡುಗಡೆಯಾದ ಹಿನ್ನೆಲೆಯಲ್ಲಿ ಹಿರಿಯ ಕನ್ನಡ ಚಲನಚಿತ್ರ ನಟ ಶಿವರಾಜ್ ಕುಮಾರ್ ಮಳವಳ್ಳಿ ಪಟ್ಟಣದ ಅನಂತರಾಂ ವೃತ್ತಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸಾವಿರಾರು ಅಭಿಮಾನಿಗಳು ಬೃಹತ್ ಹೂವಿನ ಹಾರಹಾಕಿ ಅಭಿನಂದಿಸಿ ಗೌರವಿಸುವುದರ ಮೂಲಕ ಸ್ವಾಗತ ಕೋರಿ ಅವರನ್ನು ಬರಮಾಡಿಕೊಂಡರು.
ಡಾ.ರಾಜ್‌ಕುಟುಂಬಕ್ಕೂ, ಮಳವಳ್ಳಿಗೂ ಅಭಿನಾಭಾವ ಸಂಬಂಧವಿದ್ದು, ರಾಜ್ಯದಲ್ಲಿಯೇ ಮೊಟ್ಟ ಮೊದಲು ಡಾ. ರಾಜ್‌ಕುಮಾರ್ ಕಲಾ ಸಂಘವನ್ನು ಮಳವಳ್ಳಿಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ ಸ್ಥಾಪನೆ ಮಾಡಿದರು. ಈ ಮೂಲಕ ರಾಜ್‌ಕುಮಾರ್ ಹೆಸರಿನಲ್ಲಿ ಹಲವು ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಜೊತೆಗೆ ರಾಶಿರಾಪು ಸೇನಾ ಸಮಿತಿ, ಡಾ.ರಾಜ್ ವಂಶದ ಅಭಿಮಾನಿ ದೇವರುಗಳ ಸೇನಾ ಸಮಿತಿ ರಚಿಸಿಕೊಂಡು ಬಂದಿದ್ದಾರೆ. ಮಳವಳ್ಳಿಯ ಬಗ್ಗೆ ಡಾ.ರಾಜ್‌ಕುಮಾರ್ ಕುಟುಂಬ ಇಟ್ಟಿರುವ ಅಭಿಮಾನಕ್ಕೆಇಲ್ಲಿನ ಅಭಿಮಾನಿಗಳು ಕೂಡ ವಿಭಿನ್ನ ಜನಪರ ಕಾರ್ಯಕ್ರಮದೊಂದಿಗೆ ಕೃತಜ್ಞತೆ ಸಲ್ಲಿಸುತ್ತಾ ಬರುತ್ತಿದ್ದಾರೆ.

ಪ್ರೀತಿ, ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ
ವೇದ ಚಲನಚಿತ್ರ ಬಿಡುಗಡೆಯಾದ ಹಿನ್ನೆಲೆಯಲ್ಲಿ ಚಲನಚಿತ್ರದ ತಂಡ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಘೋಷಣೆಯೊಂದಿಗೆ ಪಟಾಕಿ ಸಿಡಿಸಿದ್ದಾರೆ. ಅಲ್ಲದೇ ಶಿವರಾಜ್‌ಕುಮಾರ್‌ಗೆ ಹೂವಿನ ಹಾರ ಹಾಕಿ ಮೆರವಣಿಗೆ ಮೂಲಕ ಮಹಾಲಕ್ಷ್ಮಿ ಚಿತ್ರಮಂದಿರಕ್ಕೆ ಕರೆತರಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಮಳವಳ್ಳಿ ಜನರು ನಮ್ಮ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿ ಮತ್ತು ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಿಮ್ಮ ಪ್ರೀತಿಗೆ ಚಿರಋಣಿ ಆಗಿರುತ್ತೇನೆ ಎಂದು ಹೇಳಿದರು.
ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ
ತಾಲೂಕಿನ ಮುತ್ತತ್ತಿಯಲ್ಲಿ ನಮ್ಮ ದೇವರು ಮುತ್ತತ್ತಿರಾಮ ಸ್ವಾಮಿ ದೇವಸ್ಥಾನವಿದೆ. ಇಲ್ಲಿನ ಜನರನ್ನು ಕಂಡರೆ ತಂದೆ ಡಾ.ರಾಜ್‌ಕುಮಾರ್ ಅವರು ಸೇರಿದಂತೆ ನಮಗೆ ಬಹಳ ಪ್ರೀತಿ ಇದೆ. ನಟ ಡಾ.ಪುನೀತ್ ರಾಜ್‌ಕುಮಾರ್ ಅವರನ್ನು ತುಂಬಾ ಪ್ರೀತಿಸುವ ಜನರು ಇದ್ದಾರೆ. ಕನ್ನಡ ಚಲನಚಿತ್ರಗಳಿಗೆ ಹಾಗೂ ನಮ್ಮ ಮತ್ತು ಕುಟುಂಬದ ಸದಸ್ಯರ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಹಾಲಕ್ಷ್ಮಿ ಚಿತ್ರಮಂದಿರ ಮಾಲೀಕ ನಾಗೇಂದ್ರ, ಡಾ.ರಾಜ್‌ಕುಮಾರ್ ಕಲಾ ಸಂಘದ ಅಧ್ಯಕ್ಷ ದೊಡ್ಡಯ್ಯ, ಡಾ.ರಾಜ್‌ಕುಮಾರ್ ವಂಶದ ಅಭಿಮಾನಿಗಳ ದೇವರುಗಳ ಸೇನಾ ಸಮಿತಿ ಅಧ್ಯಕ್ಷ ನಾಗರಾಜು, ರಾ.ಶಿ.ರಾ.ಪು ಸೇವಾ ಸಮಿತಿ ಅಧ್ಯಕ್ಷ ಕೃಷ್ಣ, ಮುಖಂಡರಾದ ನಂಜುಂಡ, ಕುಮಾರ್, ರಾಜು, ಮಹದೇವು, ಸಿದ್ದೇಶ್ ಗಾಂಧಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications