KRS ಸಮೀಪದಲ್ಲಿ ಅಕ್ರಮ ಗಣಿಗಾರಿಕೆ ಪತ್ತೆಗೆ ಡ್ರೋನ್ ಸರ್ವೆ ಮಾಡಿಸಲು ಸುಮಲತಾ ಸೂಚನೆ
ಮಂಡ್ಯ, ಜನವರಿ, 06: ಕೆ.ಆರ್.ಎಸ್. ಸಮೀಪದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಪತ್ತೆಗೆ ನಿಖರವಾದ ಡ್ರೋನ್ ಸರ್ವೆ ಮಾಡಿಸಿ ಮ್ಯಾಪಿಂಗ್ ಮಾಡುವಂತೆ ಸೂಚಿಸಲಾಗಿದೆ. ಸಂಸದೆ ಸುಮಲತಾ ಅಂಬರೀಶ್ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಮಿತಿ ಸಭೆಯು ಡ್ರೋಣ್ ಸರ್ವೆ ಮಾಡಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಖಡಕ್ ಸೂಚನೆ ನೀಡಿದೆ.
ನಗರದ ಜಿಲ್ಲಾ ಪಂಚಾಯತ್‌ನ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ, ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಕೇಂದ್ರ ವಲಯ ಮತ್ತು ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸುಮಲತಾ ಅಂಬರೀಶ್ ಮಾತನಾಡಿದರು. ಕೆ.ಆರ್.ಎಸ್. ಸುತ್ತಮುತ್ತಲಲ್ಲೇ ಗಣಿಗಾರಿಕೆ, ಕ್ವಾರಿ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿವೆ. ಇಲ್ಲಿ ಸಕ್ರಮಕ್ಕಿಂತ ಅಕ್ರಮವಾಗಿ ನಡೆಯುತ್ತಿರುವ ಚಟುವಟಿಕೆಗಳು ಹೆಚ್ಚಾಗಿವೆ. ಇದನ್ನು ತಡೆಯಲು ಏಕೆ ಮುಂದಾಗಿಲ್ಲ? ಎಂದು ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಪದ್ಮಜಾ ಅವರನ್ನು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪದ್ಮಜಾ ಅವರು, ಅಕ್ರಮ ಗಣಿಗಾರಿಕೆಗೆ ನಾವೆಲ್ಲೂ ಎಡೆಮಾಡಿಕೊಟ್ಟಿಲ್ಲ. ಎಲ್ಲ ಚೆಕ್‌ಪೋಸ್ಟ್‌ಗಳಲ್ಲೂ ಎರವಲು ಸಿಬ್ಬಂದಿಗಳನ್ನು ನೇಮಕಗೊಳಿಸಲಾಗಿದೆ. ಶ್ರೀರಂಗಪಟ್ಟಣ, ಕೆ.ಆರ್.ಎಸ್. ಹಾಗೂ ಮಹದೇವಪುರ ಚೆಕ್‌ಪೋಸ್ಟ್‌ಗಳಲ್ಲಿ ಸಿ.ಸಿ. ಕ್ಯಾಮೆರಾ ಸೇರಿದಂತೆ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಅಕ್ರಮ ಸಾಗಾಣಿಕೆಗೆ ಕಡಿವಾಣ ಹಾಕಲಾಗಿದೆ. ಅಲ್ಲದೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯ ನಡುವೆಯೂ ಅಕ್ರಮ ಸಾಗಾಣಿಕೆದಾರರನ್ನು ಪತ್ತೆ ಹಚ್ಚಿ 21 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅವರು ಜಾಮೀನು ಪಡೆದುಕೊಂಡಿದ್ದಾರೆ ಎಂದರು.

19 ಲಕ್ಷ ರೂಪಾಯಿ ದಂಡ ಸಂಗ್ರಹ
10 ಮೆಟ್ರಿಕ್ ಟನ್‌ಗಿಂತಲೂ ಹೆಚ್ಚಿನ ಬಾರ ಸಾಗಿಸುವ ಟಿಪ್ಪರ್‌ಗಳಿಗೆ ಸ್ಥಳದಲ್ಲೇ ದಂಡ ವಿಧಿಸಲಾಗುತ್ತಿದೆ. ಈವರೆಗೆ ಸುಮಾರು 19 ಲಕ್ಷ ರೂಪಾಯಿ ದಂಡ ಸಂಗ್ರಹಿಸಲಾಗಿದೆ. ಚಾಲ್ತಿ ಕಲ್ಲು ಗಣಿ ಗುತ್ತಿಗೆದಾರರಿಂದ 23 ಕೋಟಿ ರೂಪಾಯಿ ಹಾಗೂ ಅವಧಿ ಮುಗಿದ ಕಲ್ಲುಗಣಿ ಗುತ್ತಿಗೆದಾರರಿಂದ 39.85 ಕೋಟಿ ರೂಪಾಯಿ ಸೇರಿ ಒಟ್ಟು 63.83 ಕೋಟಿ ರೂಪಾಯಿ ರಾಜಧನ ಬಾಕಿ ಇದ್ದು, ಇದನ್ನು ವಸೂಲಿ ಮಾಡಲು ಈಗಾಗಲೇ ನೋಟಿಸ್ ಜಾರಿಗೊಳಿಸಲಾಗಿದೆ ಎಂದರು.

ವಿಚಾರಣೆಗೆ ಹಾಜರಾಗುತ್ತಿಲ್ಲ ಎನ್ನುವ ಆರೋಪ
ಮಧ್ಯಪ್ರವೇಶಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಂ ರಾಯಪುರ, ನೋಟಿಸ್ ಕೊಟ್ಟು ಸುಮ್ಮನೆ ಕೂತರೆ ಪ್ರಯೋಜನವೇನು? ನ್ಯಾಯಾಲಯದಲ್ಲಿ ನೀವು ಹಾಕಿರುವ ಪ್ರಕರಣಗಳ ವಿಚಾರಣೆಗೆ ವಕೀಲರೇ ಹಾಜರಾಗುತ್ತಿಲ್ಲ ಎಂಬ ದೂರುಗಳಿವೆ. ಈ ಹಿನ್ನೆಲೆಯಲ್ಲಿ ಅವರ ಪರವಾನಗಿ ರದ್ದುಗೊಳಿಸಿ ಸಂಬಂಧಪಟ್ಟ ತಹಶೀಲ್ದಾರರಿಗೆ ಇವರ ಸ್ಥಿರ ಮತ್ತು ಚರಾಸ್ತಿ ಮಾಹಿತಿ ಸಂಗ್ರಹಿಸಿ ಮುಟ್ಟುಗೋಲು ಹಾಕಿಕೊಳ್ಳುವಂತೆ ತಿಳಿಸಿ, ರಾಜಧನ ವಸೂಲಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ನಂತರ ಮತ್ತೆ ಪದ್ಮಜಾ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಜಿಲ್ಲಾದ್ಯಂತ ಖನಿಜಗಳ ಅನಧಿಕೃತ ಗಣಿಗಾರಿಕೆ, ಸಾಗಾಣಿಕೆ ಸಂಬಂಧ 66 ಪ್ರಕರಣಗಳನ್ನು ಪತ್ತೆ ಮಾಡಿ ವಿವಿಧ ನ್ಯಾಯಾಲಯಗಳಲ್ಲಿ ನಿಯಮಾನುಸಾರ ಖಾಸಗಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಅನಧಿಕೃತ ಖನಿಜಗಳನ್ನು ಸಾಗಾಣಿಕೆ ಮಾಡುತ್ತಿದ್ದ 119ರಲ್ಲಿ 3 ಪ್ರಕರಣಗಳಿಗೆ ಪಿಸಿಆರ್ ದಾಖಲಿಸಿದ್ದು, ಉಳಿದ 116 ಪ್ರಕರಣಗಳಿಂದ 39.11 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪರವಾನಗಿಗೆ ಪಾವತಿಸಿದ ಹಣದ ವಿವರ
ಕೆ.ಆರ್.ಎಸ್. ಅಣೆಕಟ್ಟು ಸುತ್ತಮುತ್ತಲಿನ 20 ಕಿ.ಮೀ. ವ್ಯಾಪ್ತಿಯೊಳಗೆ ಎಲ್ಲಾ ರೀತಿಯ ಕಲ್ಲು ಗಣಿಗಾರಿಕೆಯನ್ನು ನಿಷೇದಿಸುವಂತೆ ಜಿಲ್ಲಾಧಿಕಾರಿಗಳು ಇಲಾಖೆಯ ಸರ್ಕಾರದ ಮಟ್ಟದ ಕಾರ್ಯರ್ಶಿಗಳು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯವರಿಗೆ ಪತ್ರ ಬರೆದಿದ್ದಾರೆ. ಸ್ಫೋಟಕ ಸಾಮಗ್ರಿಗಳ ದಾಸ್ತಾನು ಮಾಡಲು ಪರವಾನಗಿ ನೀಡುವಿಕೆ ಹಾಗೂ ನಿಯಂತ್ರಣ ಕ್ರಮವನ್ನು ಕೇಂದ್ರದ ಇಲಾಖೆ ಕೈಗೊಳ್ಳಲಿದೆ ಎಂದು ತಿಳಿಸಿದರು. ಹಾಗೆಯೇ ಬೆಂಗಳೂರು-ಮೈಸೂರು ದಶಪಥ ಎಕ್ಸ್‌ಪ್ರೆಸ್ ವೇ ನಿರ್ಮಾಣ ಕೈಗೊಂಡಿರುವ ದಿಲೀಪ್ ಬಿಲ್ಡ್‌ಕಾನ್ ಲಿಮಿಟೆಡ್ ಅವರ ಕಾಮಗಾರಿಗೆ ಸಂಬಂಧಿಸಿದಂತೆ 22.44 ಲಕ್ಷ ಮೆಟ್ರಿಕ್ ಟನ್ ಉಪ ಖನಿಜಗಳನ್ನು ಸಾಗಾಣಿಕೆ ಮಾಡಲು ಪರವಾನಗಿ ಪಡೆದಿದ್ದಾರೆ. ಇದಕ್ಕೆ 24.75 ಕೋಟಿ ರಾಜಧನವನ್ನು ಪಾವತಿಸಿದ್ದಾರೆ. ಮುರ‌್ರಂ ಮಣ್ಣಿಗೆ ಸಂಬಂಧಿಸಿದಂತೆ 7.32 ಕೋಟಿ ಸೇರಿ ಒಟ್ಟಾರೆ ಇಲಾಖೆಗೆ 32.07 ಕೋಟಿ ರೂ. ರಾಜಧನ ಬಂದಿದೆ ಎಂದು ಸಂಸದರಿಗೆ ಮಾಹಿತಿ ನೀಡಿದರು.

ಪರಿಶೀಲಿಸಿದ ಬಳಿಕ ಪರವಾನಗಿ ನೀಡಲಾಗಿದೆ
ಉಳಿದಂತೆ ಪಾಂಡವಪುರ ತಾಲೂಕಿನ ಕನಗನಮರಡಿ ಹಾಗೂ ಶಂಭೂನಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಕ್ವಾರಿಗಳು ಕಾನೂನುಬದ್ಧವಾಗಿವೆ. ಎರಡೂ ಕ್ರಷರ್‌ಗಳಿಗೂ ಭೇಟಿ ನೀಡಿ ಪರಿಶೀಲಿಸಿದ ಬಳಿಕವೇ ಪರವಾನಗಿ ನೀಡಲಾಗಿದೆ. ಇದು ಕೆ.ಆರ್.ಎಸ್‌ನಿಂದ ವಾಯುಮಾರ್ಗದಲ್ಲಿ 20 ಕಿ.ಮೀ. ಹೊರಗಿದೆ. ಆದ್ದರಿಂದ ಇಲಾಖೆಯ ನಿಯಮಾವಳಿಯಂತೆ ಪರವಾನಗಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳೀಗೌಡ, ಜಿಲ್ಲಾಧಿಕಾರಿ ಡಾ. ಎಚ್.ಎನ್. ಗೋಪಾಲಕೃಷ್ಣ, ಜಿಲ್ಲಾ ಪಂಚಾಯತಿ ಸಿಇಓ ಶಾಂತಾ ಎಲ್. ಹುಲ್ಮನಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ಯತೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications