ಬಣ್ಣದವರ ಮಾತಿಗೆ ಮಂಡ್ಯದ ಜನ ಬೆರಗಾಗೋದು ಬೇಡ : ಡಿಸಿ ತಮ್ಮಣ್ಣ
ಮಂಡ್ಯ, ಮಾರ್ಚ್ 07 : 'ಬಣ್ಣದವರ ಮಾತಿಗೆ ಮಂಡ್ಯ ಜಿಲ್ಲೆಯ ಜನರು ಬೆರಗಾಗೋದು ಬೇಡ. ರೈತರ ಮಗನಾದ ನಿಖಿಲ್‌ರನ್ನು ಈ ಬಾರಿ ಆಯ್ಕೆ ಮಾಡಿ' ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ ಕ್ಷೇತ್ರದ ಜನರಿಗೆ ಮನವಿ ಮಾಡಿದರು.
ಗುರುವಾರ ಮದ್ದೂರು ತಾಲೂಕಿನ ಕೂಳಗೆರೆ ಗ್ರಾಮದಲ್ಲಿ ಮಾತನಾಡಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಪರೋಕ್ಷವಾಗಿ ಸುಮಲತಾ ಅಂಬರೀಶ್ ಅವರು ಮಂಡ್ಯದಿಂದ ಚುನಾವಣಾ ಕಣಕ್ಕಿಳಿಯುವುದಕ್ಕೆ ವಿರೋಧ ವ್ಯಕ್ತಪಡಿಸಿದರು.
'ಯಾರು ಈ ಸಮಾಜದ ಬಗ್ಗೆ ಚಿಂತನೆ ಮಾಡುತ್ತಾರೆಯೋ, ಸದಾ ರೈತರ ಬಗ್ಗೆ ಆಲೋಚನೆ ನಡೆಸುತ್ತಾರೆಯೋ, ಯಾರು ನಮ್ಮ ನೋವಿಗೆ ಸ್ಪಂದಿಸುತ್ತಾರೆಯೋ ಅಂತಹವರನ್ನು ಆಯ್ಕೆ ಮಾಡಿ' ಎಂದು ಡಿ.ಸಿ.ತಮ್ಮಣ್ಣ ಹೇಳಿದರು.
ಮಂಡ್ಯದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಅವರು ಚುನಾವಣಾ ಕಣಕ್ಕಿಳಿಯಲು ಬಯಸಿದ್ದಾರೆ. ಆದರೆ, ಮಂಡ್ಯ ಕ್ಷೇತ್ರವನ್ನು ಕಾಂಗ್ರೆಸ್ ಜೆಡಿಎಸ್‌ಗೆ ಬಿಟ್ಟುಕೊಡಲಿದೆ. ಸ್ಥಳೀಯ ಜೆಡಿಎಸ್ ಸುಮಲತಾ ಅವರ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸುತ್ತಿದೆ....

ಸುಮಲತಾ ಅವರಿಗೆ ಪ್ರಶ್ನೆ
'ಅಂಬರೀಶ್ ಅವರು ಶಾಸಕರು, ಸಚಿವರು ಆಗಿದ್ದಾಗ ಅವರ ಮನೆಗೆ ಹೋದಾಗ ಎಷ್ಟು ಜನಸಾಮಾನ್ಯರನ್ನು ಈಯಮ್ಮ ಮಾತನಾಡಿಸಿದ್ದಾರೆ. ಎಷ್ಟು ಜನಕ್ಕೆ ಒಂದು ಲೋಟ ಕುಡಿಯಲು ನೀರು ಕೊಟ್ಟಿದ್ದಾರೆ. ನೀನು ಯಾವೂರಪ್ಪ? ಏನಪ್ಪ ಸಮಸ್ಯೆ ಎಂದು ಕೇಳಿದ್ದಾರಾ?' ಎಂದು ಡಿ.ಸಿ.ತಮ್ಮಣ್ಣ ಪ್ರಶ್ನಿಸಿದರು.

ರಮ್ಯಾ ವಿರುದ್ಧವೂ ಆಕ್ರೋಶ
'ಇವತ್ತು ಅವರ ಹೆಸರು ಹೇಳಿಕೊಂಡು ಬಂದು ನಾನೇನೋ ಉದ್ಧಾರ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಈ ಹಿಂದೆ ಒಬ್ಬ ಹೆಣ್ಣು ಮಗಳು ಬಂದು ಹೋದಳು. ಏನು ಮಾಡಿದ್ಲು?' ಎಂದು ಮಾಜಿ ಸಂಸದೆ ರಮ್ಯಾ ವಿರುದ್ಧವೂ ಡಿ.ಸಿ.ತಮ್ಮಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಬೆರಗಾಗೋದು ಬೇಡ
'ಬಣ್ಣದವರ ಮಾತಿಗೆ ಜಿಲ್ಲೆಯ ಜನರು ಬೆರಗಾಗುವುದು ಬೇಡ. ಯಾರಿಗೆ ಈ ಸಮಾಜದ ಬಗ್ಗೆ ಚಿಂತನೆ ಇದೆ. ಸದಾ ರೈತರ ಬಗ್ಗೆ ಚಿಂತಿಸುತ್ತಾರೆ. ಯಾರು ನಮ್ಮ ನೋವಿಗೆ ಕಷ್ಟಕ್ಕೆ ಸ್ಪಂದಿಸಿ ನಮ್ಮ ಜೊತೆ ನಿಲ್ಲುತ್ತಾರೆ. ಅಂತಹವರನ್ನು ಆಯ್ಕೆ ಮಾಡಿ' ಎಂದು ಡಿ.ಸಿ.ತಮ್ಮಣ್ಣ ಮನವಿ ಮಾಡಿದರು.

ರೈತರ ಮಗನನ್ನು ಆಯ್ಕೆ ಮಾಡಿ
'ನಮ್ಮ ಕ್ಷೇತ್ರದ ಹಣೆಬರಹವನ್ನು ಬರೆಯುವವರು ನೀವು. ರೈತರ ಮಗನಾದ ನಿಖಿಲ್ ರನ್ನು ಈ ಬಾರಿ ಆಯ್ಕೆ ಮಾಡುವಂತೆ' ಡಿ.ಸಿ.ತಮ್ಮಣ್ಣ ಅವರು ಕ್ಷೇತ್ರದ ಜನರಿಗೆ ಮನವಿ ಮಾಡಿಕೊಂಡರು.

ಜೆಡಿಎಸ್ ನಾಯಕರ ತೀರ್ಮಾನ
ಮಂಡ್ಯದಿಂದ 2019ರ ಲೋಕಸಭಾ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಬೇಕು ಎಂಬುದು ಮಂಡ್ಯದ ಜೆಡಿಎಸ್ ಕಾರ್ಯಕರ್ತರ ಒತ್ತಾಯವಾಗಿದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಈಗಾಗಲೇ ನಿಖಿಲ್ ಸ್ಪರ್ಧೆಗೆ ಪರೋಕ್ಷವಾಗಿ ಒಪ್ಪಿಗೆ ನೀಡಿದ್ದಾರೆ.












Click it and Unblock the Notifications