ಕಾವೇರಿ ನದಿಗೆ ಸ್ನಾನಕ್ಕೆಂದು ತೆರಳಿದ್ದ ವ್ಯಕ್ತಿ ಮೊಸಳೆಗೆ ಬಲಿ
ಮಂಡ್ಯ, ಮೇ 28: ಕಾವೇರಿ ನದಿಗೆ ಸ್ನಾನಕ್ಕೆ ತೆರಳಿದ್ದ ವ್ಯಕ್ತಿ ಮೊಸಳೆ ಬಾಯಿಗೆ ಸಿಕ್ಕು ಬಲಿಯಾದ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿ ಭಾನುವಾರ ನಡೆದಿದೆ.
ಬೆಂಗಳೂರಿನ ಹೆಸರುಘಟ್ಟದ ವೆಂಕಟೇಶ್(52) ಮೃತರು. ಭಾನುವಾರ ತಮ್ಮ ಕುಟುಂಬ ಹಾಗೂ ಸಂಬಂಧಿಕರ ಜತೆಗೆ ಮುತ್ತತ್ತಿಗೆ ಆಗಮಿಸಿದ್ದ ಅವರು, ಬೆಳಗ್ಗೆ ಹನುಮ ದೇವಸ್ಥಾನಕ್ಕೆ ತೆರಳುವ ಮೊದಲೇ ಕಾವೇರಿ ನದಿಯಲ್ಲಿ ಸ್ನಾನಕ್ಕೆ ತೆರಳಿ ಈಜಾಡುತ್ತಿದ್ದಾಗ ಮೊಸಳೆ ದಾಳಿ ನಡೆಸಿ ವೆಂಕಟೇಶ್‌ರನ್ನು ಎಳೆದುಕೊಂಡು ಹೋಗಿದೆ.

ಸ್ಥಳೀಯರು ನೀರಿಗೆ ಇಳಿದು ವೆಂಕಟೇಶ್ ಅವರ ಸಹಾಯಕ್ಕೆ ತೆರಳುವಷ್ಟರಲ್ಲಿ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಘಟನೆಯಲ್ಲಿ ವೆಂಕಟೇಶ್ ಅವರ ಬಲ ಕೈ, ಎಡ ಕಾಲನ್ನು ಮೊಸಳೆಯು ಹಿಡಿದು ಎಳೆದಾಡಿದ್ದರಿಂದ ಮೂಳೆ ಮುರಿದಿತ್ತು. ಸ್ಥಳಕ್ಕೆ ಹಲಗೂರು ಪಿಎಸ್‌ಐ ಶ್ರೀಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲಾಯಿತು.












Click it and Unblock the Notifications