Sahitya Sammelana: ಸಾಹಿತ್ಯ ಸಮ್ಮೇಳನದಲ್ಲಿ ಸಿಎಂ ವಿರುದ್ಧ ಕೇಳಿಬಂತು ದೊಡ್ಡ ಆರೋಪ
ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿನ್ನೆ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದರು. ಈ ವೇಳೆ ಸಿದ್ದರಾಮಯ್ಯ ಅವರು ಈ ಸಮ್ಮೇಳನವನ್ನು ರಾಜಕೀಯ ವೇದಿಕೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಆರೋಪಿಸಿದ್ದಾರೆ.
ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡದ ಬಗ್ಗೆ ಮಾತನಾಡುವುದನ್ನು ಬಿಟ್ಟು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನು ಸ್ಮೃತಿ, ತೆರಿಗೆ ವಂಚನೆ, ಗ್ಯಾರಂಟಿ ಯೋಜನೆಗಳ ಪ್ರಚಾರ, ಹಿಂದಿ ಹೇರಿಕೆ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡಿದ್ದಾರೆ. ಈ ಮೂಲಕ ಸಾಹಿತ್ಯ ವೇದಿಕೆಯನ್ನು ರಾಜಕೀಯ ವೇದಿಕೆಯಾಗಿ ಮಾಡಿಕೊಂಡಿದ್ದು ಇವರ ಘನ ಸಾಧನೆ ಎಂದು ಟೀಕಿಸಿದ್ದಾರೆ.

ಕನ್ನಡ ಕಾವಲು ಸಮಿತಿಯ ಮೊದಲನೇ ಅಧ್ಯಕ್ಷರು, ವ್ಯಾಕರಣದ ಮೇಷ್ಟ್ರು ಹಾಕಿಕೊಡುವ ಮೇಲ್ಪಂಕ್ತಿಯಿದು. ತಾಯಿ ಭುವನೇಶ್ವರಿಯು ಇವರಿಗೆ ಒಳ್ಳೆಯ ಬುದ್ದಿಯನ್ನು ನೀಡಲಿ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಮಂಡ್ಯದಲ್ಲಿ ಆಯೋಜಿಸಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬೃಹತ್ ವೇದಿಕೆಯಲ್ಲಿ ಚಾಲನೆ ನೀಡಿ, ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲಿ ಎಂದು ಸಿದ್ದರಾಮಯ್ಯ ಶುಭ ಹಾರೈಸಿದ್ದರು.
ಕರ್ನಾಟಕದಲ್ಲಿ ಅತಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆಯೆಂದು ಹೆಸರು ಪಡೆದಿರುವ, ಸಕ್ಕರೆ ನಗರಿ ಎಂದೇ ಪ್ರಸಿದ್ಧವಾಗಿರುವ ಮಂಡ್ಯದಲ್ಲಿ ಆಯೋಜಿಸಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮುಂದಿನ ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿದೆ ಎಂದು ಅವರು ಹೇಳಿದ್ದರು.

ಮಂಡ್ಯ ಜಿಲ್ಲೆ ಅಪ್ಪಟ ಕನ್ನಡದ ನೆಲ. ಜಗತ್ತಿನ ಯಾವುದೇ ಮೂಲೆಯಿಂದ ಯಾವುದೇ ಭಾಷಿಗರು ಮಂಡ್ಯಕ್ಕೆ ಬಂದರೂ ಒಂದು ತಿಂಗಳೊಳಗೆ ಅವರಿಗೆ ಕನ್ನಡ ಕಲಿಸುವಂತಹ ಭಾಷಾಭಿಮಾನ ಮತ್ತು ದಿಟ್ಟತನ ಮಂಡ್ಯದ ಜನರದ್ದು ಎಂದು ಸಿಎಂ ಭಾಷಣ ಮಾಡಿದ್ದರು.
ದ್ವೇಷ ಬಿತ್ತಲು ಬಂದವರನ್ನು ಮಂಡ್ಯ ಜನ ಓಡಿಸಿದ್ದಾರೆ. ಧ್ವಜ ಸತ್ಯಾಗ್ರಹದ ಮೂಲಕ ಪೂರ್ವಿಕರು ಬಿತ್ತಿದ್ದ ಜಾತ್ಯತೀತ ಗುಣ ಇಲ್ಲಿ ಈಗಲೂ ಇನ್ನೂ ಉಳಿದಿದೆ ಎಂಬುದನ್ನ ಮಂಡ್ಯದ ಜನತೆ ತೋರಿಸಿಕೊಟ್ಟಿದ್ದಾರೆ ಎಂದು ಸಿಎಂ ಶ್ಲಾಘಿಸಿದರು. ರಾಜ್ಯಕ್ಕೆ ತೆರಿಗೆ ಮೊತ್ತ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ, ರಾಷ್ಟ್ರಭಾಷೆಯ ಹೆಸರಿನಲ್ಲಿ ಹಿಂದಿ ಹೇರಿಕೆ ಆಗುತ್ತಿದೆ ಎಂದೂ ಅವರು ವೇದಿಕೆ ಮೇಲೆ ಅಸಮಾಧಾನ ಹೊರಹಾಕಿದರು.

ಸಿದ್ಧಾಂತಕ್ಕಿಂತ ನಾವು ಬದುಕುವ ವಿಧಾನ ಮುಖ್ಯ. ಸಾಹಿತ್ಯಕ್ಕೆ ಯಾವುದು ಜನಪರ ನಿಲುವು, ಯಾವುದು ಜನವಿರೋಧಿ ಎಂಬುದನ್ನು ನಿರ್ಧರಿಸುವುದು ಸಾಧ್ಯವಾಗಬೇಕು. ಈ ಮಂಡ್ಯ ಅಪ್ಪಟ ಕನ್ನಡದ ನೆಲವಾಗಿದ್ದು, ದೇಶದ ಯಾವ ಭಾಗದಿಂದ ಇಲ್ಲಿಗೆ ಬಂದವರಿಗೂ ಕನ್ನಡ ಕಲಿಸುವ ಸಾಮರ್ಥ್ಯವಿದೆ. ಇನ್ನು ಹಲವು ಪ್ರಕಾರದ ಸಾಹಿತ್ಯ ರಚನೆಯಾದ ನೆಲದಲ್ಲಿ ವೈಚಾರಿಕತೆ ಮೂಲವಾಗಿದೆ ಎಂದು ಕೊಂಡಾಡಿದ್ದರು.
ಆದರೆ, ಸಿಎಂ ಸಿದ್ದರಾಮಯ್ಯ ಅವರು ಈ ಮೂಲ ಕಾರ್ಯಕ್ರಮದ ಉದ್ದೇಶಕ್ಕಿಂತ ಇನ್ನಿತರೆ ವಿಚಾರಗಳನ್ನು ಪ್ರಸ್ತಾಪಿಸಿ, ರಾಜಕೀಯ ಭಾಷಣ ಮಾಡುವ ಮೂಲಕ ಈ ವೇದಿಕೆಗೆ ಅವಮಾನ ಮಾಡಿದ್ದಾರೆ ಎಂದು ಖಂಡನೆ ವ್ಯಕ್ತವಾಗಿದೆ. ಯತ್ನಾಳ್ ಕೂಡ ಇದನ್ನು ಖಂಡಿಸಿದ್ದಾರೆ.












Click it and Unblock the Notifications