ಕಾವೇರಿ ನದಿಗೆ ಬಾಗಿನ ಅರ್ಪಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮಂಡ್ಯ, ಜುಲೈ 20 : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಂಪತಿ ಸಮೇತ ಬುಧವಾರ ಮಧ್ಯಾಹ್ನ ಕೃಷ್ಣರಾಜ ಸಾಗರ ಜಲಾಶಯದಲ್ಲಿ ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದ್ದಾರೆ. ಕಳೆದ 9 ತಿಂಗಳ ಅಂತರದಲ್ಲಿ 2ನೇ ಬಾರಿಗೆ ಬೊಮ್ಮಾಯಿ ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಕೆಆರ್‌ಎಸ್ ಜಲಾಶಯಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಂಪತಿ, ಜಲಾಶಯದ ಕೆಳ ಭಾಗದಲ್ಲಿರುವ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿದರು. ಬಳಿಕ ಅಣೆಕಟ್ಟೆಯ ಮೇಲ್ಭಾಗಕ್ಕೆ ತೆರಳಿ ಕಾವೇರಿ ತಾಯಿಗೆ ಬಾಗಿನ ಅರ್ಪಿಸಿದರು. ಕಳೆದ 14 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕೆಆರ್‌ಎಸ್ ಜುಲೈನಲ್ಲೇ ಭರ್ತಿಯಾಗಿದೆ.
ಕೊಡಗಿನಲ್ಲಿ ಕಳೆದ 15 ದಿನಗಳಿಂದ ಭಾರಿ ಮಳೆಯಾಗುತ್ತಿರುವ ಹಿನ್ನಲೆ ಕೆಆರ್‌ಎಸ್ ಜಲಾಶಯ ಈ ಬಾರಿ ಜುಲೈನಲ್ಲೇ ಭರ್ತಿಯಾಗಿದೆ. ಈ ಹಿಂದಿನ ವರ್ಷಗಳಲ್ಲಿ ಆಗಸ್ಟ್‌ನಲ್ಲಿ ಭರ್ತಿಯಾಗಿ, ಅದೇ ತಿಂಗಳು ಬಾಗಿನ ಕೂಡ ಅರ್ಪಿಸಲಾಗುತ್ತಿತ್ತು. ಕಳೆದ ವರ್ಷ ನವೆಂಬರ್‌ನಲ್ಲಿ ಬೊಮ್ಮಾಯಿ ಬಾಗಿನ ಅರ್ಪಿಸಿದ್ದರು. ಆದರೆ ಇದೇ ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಯೊಬ್ಬರು ಆಷಾಡ ಮಾಸದಲ್ಲಿ ಕಾವೇರಿಗೆ ಬಾಗಿನ ಅರ್ಪಿಸಿದ್ದಾರೆ. ಈ ಹಿಂದೆ ಆಷಾಡ ಮುಗಿದ ನಂತರವಷ್ಟೇ ಬಾಗಿನ ಅರ್ಪಿಸಲಾಗುತ್ತಿತ್ತು.

ಬುಧವಾರ ಬೆಳಗ್ಗೆ ಮೈಸೂರಿಗೆ ಆಗಮಿಸಿದ ಬೊಮ್ಮಾಯಿ ವಿಮಾನ ನಿಲ್ದಾಣದಿಂದ ನೇರವಾಗಿ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡದೇವತೆ ದರ್ಶನ ಪಡೆದರು. ನಂತರ ಎಚ್‌ಡಿ ಕೋಟೆ ತಾಲೂಕಿ ಕಬಿನಿ ಜಲಾಶಯಕ್ಕೆ ತೆರಳಿ ಬಾಗಿನ ಅರ್ಪಿಸಿದ್ದರು.
ಜಲ ಸಂಪನ್ಮೂಲ ಇಲಾಖೆ ಸಚಿವ ಗೋವಿಂದ ಎಂ. ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ರೇಷ್ಮೆ, ಯುವ ಜನಸಬಲೀಕರಣ ಕ್ರೀಡಾ ಸಚಿವ ಡಾ.ಕೆ.ಸಿ ನಾರಾಯಣ ಗೌಡ, ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಸೇರಿದಂತೆ ಹಲವರಿದ್ದರು.












Click it and Unblock the Notifications