ತಮಿಳುನಾಡಿಗೆ ನೀರು, ನೆಲಕಚ್ಚುತ್ತಿದೆ ಕೆಆರ್‍ಎಸ್‍ ನೀರಿನ ಮಟ್ಟ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಸೆಪ್ಟೆಂಬರ್ 14 : ಕಾವೇರಿ ನದಿ ನೀರು ಹರಿದು ತಮಿಳುನಾಡು ಸೇರುತ್ತಿದೆ. ಕೆಆರ್‍ಎಸ್ ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ತಗ್ಗುತ್ತಿದೆ. ಹಾರಂಗಿ, ಹೇಮಾವತಿ, ಕಬಿನಿ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಇದೀಗ ಜಲಾಶಯಗಳ ನೀರಿನ ಮಟ್ಟ ಸಾಮಾನ್ಯವಾಗಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಇರುತ್ತಿದ್ದ ನೀರಿನ ಮಟ್ಟಕ್ಕೆ ಬಂದು ತಲುಪಿದೆ.

ಬೇಸಿಗೆಯಲ್ಲಿ ಜಲಾಶಯಗಳು ಈ ಮಟ್ಟ ತಲುಪಿದರೆ ಮಳೆಗಾಲದಲ್ಲಿ ತುಂಬಬಹುದು ಎಂಬ ಧೈರ್ಯ ಇರುತ್ತಿತ್ತು. ಆದರೆ, ಮಳೆಗಾಲದಲ್ಲೇ ಇಂತಹ ಪರಿಸ್ಥಿತಿಗೆ ಬಂದು ತಲುಪಿದೆ. ಮುಂದಿನ ಬೇಸಿಗೆಯ ದಿನಗಳನ್ನು ಊಹಿಸಿದರೆ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವವಾಗುತ್ತದೆ.[ಕಾವೇರಿ ವಿವಾದ : ಕರ್ನಾಟಕಕ್ಕೆ ಮತ್ತೆ ಅನ್ಯಾಯ]

 krs

ಈ ಬಾರಿ ಹನಿ ನೀರಿಗೂ ಪರದಾಡುವ ಸ್ಥಿತಿಗೆ ಬಂದು ತಲುಪುವುದು ಖಚಿತವಾಗುತ್ತಿದೆ. ಕಾವೇರಿ ತವರು ಕೊಡಗಿನಲ್ಲೇ ನೀರು ನದಿ, ತೊರೆಗಳಲ್ಲಿ ಹರಿಯುತ್ತಿಲ್ಲ. ನೀರಿನಾಶ್ರಯವಿರುವ ಪ್ರದೇಶಗಳಲ್ಲಿ ಭೂಮಿಯಿಂದ ಉಕ್ಕಿ ಹರಿಯುತ್ತಾ, ಬಾವಿಗಳಲ್ಲಿ ನೀರು ತುಂಬಿಕೊಂಡಿರಬೇಕಿತ್ತಾದರೂ ಈ ಬಾರಿ ಅದು ಕಾಣುವುದು ಅಪರೂಪವಾಗಿದೆ.[ಕೋರ್ಟ್ ಆದೇಶವನ್ನು ಕರ್ನಾಟಕ ಸರ್ಕಾರ ಮೀರಬಹುದು]

ಕೊಡಗಿನಲ್ಲಿಯೇ ನದಿ, ತೊರೆಗಳು ತುಂಬಿ ಹರಿಯುತ್ತಿಲ್ಲ ಎಂದಾದ ಮೇಲೆ ಕೆಆರ್‍ಎಸ್‍ಗೆ ನೀರು ತಾನೆ ಹೇಗೆ ಹರಿದು ಬರಬೇಕು?. ಕಾವೇರಿ ಕಣಿವೆಯಲ್ಲಿ ಎಷ್ಟೇ ಜೋರಾಗಿ ಮಳೆ ಸುರಿದರೂ ಕೆಆರ್‍ಎಸ್‍ನ ನೀರಿನ ಮಟ್ಟ ಹೆಚ್ಚುವ ಲಕ್ಷಣಗಳಂತು ಖಂಡಿತಾ ಇಲ್ಲ. ಸುಪ್ರೀಂಕೋರ್ಟ್ ತೀರ್ಪಿನಂತೆ ತಮಿಳುನಾಡಿಗೆ ನೀರು ಹರಿಯುತ್ತಲೇ ಇದ್ದು, ಸೆ.20ರವರೆಗೆ ಇದೇ ರೀತಿ ನೀರು ಹರಿದರೆ ಜಲಾಶಯ ಬರಿದಾಗಿ ಡೆಡ್‍ಸ್ಟೋರೇಜ್‍ ತಲುಪಲಿದೆ.[ತಮಿಳುನಾಡಿಗೆ ನೀರು ಹರಿಸುತ್ತೇವೆ : ಸಿದ್ದರಾಮಯ್ಯ]

ಜಲಾಶಯದ ನೀರಿನ ಮಟ್ಟ : ಸೆ. 7ರಂದು 93.25 ಅಡಿ ಇದ್ದ ಜಲಾಶಯದ ಮಟ್ಟ ಸೆ.13ಕ್ಕೆ 88ಕ್ಕೆ ಕುಸಿದಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸೆ.7ರಿಂದ ಅಪಾರ ಪ್ರಮಾಣದ ನೀರು ತಮಿಳುನಾಡಿನತ್ತ ಹರಿದು ಹೋಗುತ್ತಿದೆ. ನೀರು ಬಿಡಬೇಕಾದ ಅನಿವಾರ್ಯತೆಯಿಂದ ಹಾರಂಗಿ ಮತ್ತು ಹೇಮಾವತಿಯಿಂದ ನೀರು ಕೆಆರ್‍ಎಸ್‍ಗೆ ಹರಿದು ಬರುತ್ತಿದೆ. ಪರಿಣಾಮ ಜಲಾಶಯಗಳು ಖಾಲಿಯಾಗುತ್ತಿವೆ.[ಕುಡಿಯುವ ನೀರು ಪೂರೈಕೆ ಭರವಸೆ ನೀಡಿದ ಸಿದ್ದರಾಮಯ್ಯ]

ಯಾವಾಗ ಜಲಾಶಯಗಳಲ್ಲಿ ನೀರಿನ ಮಟ್ಟ ನೆಲ ಕಚ್ಚತೊಡಗಿತೋ ಜಲಾಶಯದ ನೀರಿನ ಮಟ್ಟವನ್ನು ಮಾಧ್ಯಮಗಳಿಗೆ ತಿಳಿಸುವುದನ್ನೇ ನಿಲ್ಲಿಸಲಾಗಿದೆ. ಕೆಆರ್‍ಎಸ್‍ಗೆ ಎರಡು ಜಲಾಶಯಗಳಿಂದ ಹರಿದು ಬರುತ್ತಿರುವ ನೀರು ಸೇರಿ ಒಳಹರಿವು 9847 ಇದ್ದು, ಕೆಆರ್‌ಎಸ್‌ನಲ್ಲಿ ನೀರಾವರಿ ಇಲಾಖೆಯು ಸ್ಥಾಪಿಸಿರುವ ಜಲಮಾಪನ ಘಟಕದ ಅಧಿಕಾರಿಗಳ ಪ್ರಕಾರ ಮಂಗಳವಾರ ಬೆಳಗ್ಗೆ ಜಲಾಶಯದಿಂದ 10567 ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಹರಿಯಬಿಡಲಾಗುತ್ತಿತ್ತು.[ತಮಿಳುನಾಡಿಗೆ ಹೇಮಾವತಿ ನದಿ ನೀರು ಬಿಡುಗಡೆ]

ಸೆ.7ರಿಂದ ನೀರಿನ ಮಟ್ಟ ಗಣನೀಯವಾಗಿ ಕುಸಿಯುತ್ತಲೇ ಇದೆ. ಸೆ.7ರಂದು 93.25 ಇದ್ದರೆ, 8ರಂದು 91.88ಕ್ಕೆ ಕುಸಿದಿತ್ತು. ಬಳಿಕ ಹೇಮಾವತಿಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿ ಕೆಆರ್‍ಎಸ್‍ನ ಮಟ್ಟ ಕಾಯ್ದುಕೊಳ್ಳುವ ಯತ್ನ ಆರಂಭಿಸಲಾಯಿತು. ಆದರೂ ಸೆ.10ರಂದು 90.57ಗೆ ಕುಸಿಯಿತು. 12ರಂದು 89.05 ಇದ್ದ ಮಟ್ಟ ಹೆಚ್ಚಿನ ಒಳಹರಿವಿನ ಹೊರತಾಗಿಯೂ ಮಂಗಳವಾರ ಕೇವಲ ಒಂದೇ ದಿನದಲ್ಲಿ 88 ಅಡಿಗೆ ಬಂದು ತಲುಪಿದೆ.

ನೀರು ಇದೇ ರೀತಿ ಹರಿಯುತ್ತಲೇ ಇದ್ದರೆ ಕೆಆರ್‍ಎಸ್ ಜಲಾಶಯ ಸೇರಿದಂತೆ ಕಾವೇರಿ ಕಣಿವೆಯ ಎಲ್ಲ ಜಲಾಶಯಗಳು ಬತ್ತಿ ಹೋಗುವುದರಲ್ಲಿ ಎರಡು ಮಾತಿಲ್ಲ. ಈ ನಡುವೆ ಕೆಆರ್‍ಎಸ್‍ನಿಂದ ಕಾಲುವೆಗಳಿಗೆ ನೀರು ಹರಿಸುವ ಮೂಲಕ ರೈತರ ಕಣ್ಣೊರೆಸುವ ತಂತ್ರವನ್ನು ಸರ್ಕಾರ ಮಾಡುತ್ತಿದ್ದರೂ ಆ ನೀರನ್ನು ನಂಬಿ ಯಾವುದೇ ಬೆಳೆ ಬೆಳೆಯಲಾರದ ಸ್ಥಿತಿಗೆ ರೈತ ಬಂದು ತಲುಪಿದ್ದಾನೆ.

ಕಾವೇರಿ ನೀರಾವರಿ ನಿಗಮದ ಕಾರ್ಯನಿರ್ವಾಹಕ ಅಭಿಯಂತರ ಕಚೇರಿಯ ಮೂಲಗಳ ಪ್ರಕಾರ ಜಲಾಶಯದಲ್ಲಿ ಮಂಗಳವಾರ ಇದ್ದ 'ಬಳಕೆಗೆ ಲಭ್ಯ' ನೀರಿನ ಪ್ರಮಾಣ ಕೇವಲ 6.657 ಟಿಎಂಸಿ ಮಾತ್ರ. ಇದೇ ದಿನ ಕಳೆದ ವರ್ಷ ಜಲಾಶಯದಲ್ಲಿ ಬಳಕೆಗೆ ಲಭ್ಯ ನೀರಿನ ಪ್ರಮಾಣ 20.385 ಟಿಎಂಸಿ ಇತ್ತು.

ಕಳೆದ ವರ್ಷಕ್ಕೆ ಹೋಲಿಸಿದಾಗ ಸುಮಾರು 16 ಟಿಎಂಸಿಯಷ್ಟು ನೀರು ಕಡಿಮೆಯಾಗಿದೆ. ಕಳೆದ ಬಾರಿ 106.95 ಅಡಿಗಳಷ್ಟು ನೀರು ಕೆಆರ್‌ಎಸ್‌ನಲ್ಲಿತ್ತು. ಸುಪ್ರೀಂ ತೀರ್ಪಿನಂತೆ ಸೆ.20ರ ವರೆಗೂ ನೀರು ಹರಿಸುವುದು ಅನಿವಾರ್ಯವಾಗಿರುವುದರಿಂದ ಕೆಆರ್‍ಎಸ್ ಜಲಾಶಯ ಮಳೆಗಾಲ ಕಳೆಯುವ ಮೊದಲೇ ಡೆಡ್‍ಸ್ಟೋರೇಜ್ (74 ಅಡಿ) ತಲುಪುವ ಸಾಧ್ಯತೆಗಳು ಕಂಡು ಬರುತ್ತಿದೆ.

ಕೆಆರ್‍ಎಸ್‍ ನೀರನ್ನೇ ನಂಬಿರುವ ಅನ್ನದಾತರ ಬದುಕು ಮೂರಾಬಟ್ಟೆಯಾಗಿದೆ. ಕೃಷಿ ಹೊರತುಪಡಿಸಿ ಬೇರೆ ಕಾಯಕವೇ ಮಾಡಲಾಗದ ಸ್ಥಿತಿಯಲ್ಲಿರುವ ರೈತ ಮುಂದೇನು? ಎಂಬ ಚಿಂತೆಯಲ್ಲಿದ್ದಾನೆ. ಅಷ್ಟೇ ಅಲ್ಲದೆ, ಕುಡಿಯಲು ಇದೇ ನೀರನ್ನು ನಂಬಿ ಬೆಂಗಳೂರು, ಮೈಸೂರು ಜನರೂ ಇದ್ದಾರೆ. ಮುಂದೆ ಏನೆಲ್ಲ ಆಗುತ್ತದೆ ಎಂಬುದನ್ನು ಕಾಲವೇ ಹೇಳಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Water level in the Krishna Raja Sagar (KRS) in the Mandya district has dipped to 88 feet on September 13, 2016.
Please Wait while comments are loading...