ಮಂಡ್ಯ : ಕಾವೇರಿ ಪ್ರತಿಮೆ ನಿರ್ಮಾಣಕ್ಕೆ ಬಿಜೆಪಿ ವಿರೋಧ
ಮಂಡ್ಯ, ನವೆಂಬರ್ 20 : ಮಂಡ್ಯ ಜಿಲ್ಲಾ ಬಿಜೆಪಿ ಘಟಕ ಬೃಂದಾವನ ಗಾರ್ಡನ್‌ನಲ್ಲಿ ಕಾವೇರಿ ತಾಯಿ ಪ್ರತಿಮೆ ನಿರ್ಮಿಸಲು ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ರಾಜ್ಯಪಾಲರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದೆ.
ಬೃಂದಾವನ ಗಾರ್ಡನ್‌ನಲ್ಲಿ ಡಿಸ್ನಿ ಲ್ಯಾಂಡ್ ಮಾದರಿಯಲ್ಲಿ ಮನರಂಜನೆ ಚಟುವಟಿಕೆ ಕೈಗೊಳ್ಳುವುದು, ತಾಯಿ ಕಾವೇರಿ ಪ್ರತಿಮೆ ನಿರ್ಮಾಣ ಮಾಡಿದರೆ ಕೃಷ್ಣರಾಜಸಾಗರ ಜಲಾಶಯಕ್ಕೆ ಹಾನಿಯಾಗಲಿದೆ ಎಂದು ಮನವಿಯಲ್ಲಿ ತಿಳಿಸಿದೆ.
ಕೆಆರ್‌ಎಸ್ ಮಂಡ್ಯ ಜಿಲ್ಲೆಯ ಜೀವನಾಡಿಯಾಗಿದೆ. ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಪ್ರಮುಖ ಮೂಲವಾಗಿದೆ. ಪ್ರತಿಮೆ ನಿರ್ಮಾಣ ಕಾಮಗಾರಿ ಮೂಲಕ ಜಲಾಶಯಕ್ಕೆ ಹಾನಿ ಮಾಡಬಾರದು ಎಂದು ಮನವಿ ಮಾಡಲಾಗಿದೆ.

ಕಾವೇರಿ ತಾಯಿಯ ಪ್ರತಿಮೆ ನಿರ್ಮಿಸುವ ಬದಲು ಸರ್ಕಾರ ಗಗನಚುಕ್ಕಿ ಜಲಪಾತವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಿ. ಅಲ್ಲಿ ಥೀಮ್ ಪಾರ್ಕ್ ನಿರ್ಮಿಸುವ ಬಗ್ಗೆ ಗಮನಹರಿಸಲಿ ಎಂದು ಸಲಹೆ ನೀಡಲಾಗಿದೆ.
ಪಾಂಡವಪುರ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಕಲ್ಲು ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಮನವಿ ಮಾಡಲಾಗಿದೆ.
ಕರ್ನಾಟಕ ಸರ್ಕಾರ ಕೆಆರ್‌ಎಸ್ ಜಲಾಶಯ ಬಳಿ 125 ಅಡಿ ಎತ್ತರದ ಕಾವೇರಿ ಮಾತೆಯ ಪ್ರತಿಮೆ ನಿರ್ಮಾಣ ಮಾಡಲು ಚಿಂತನೆ ನಡೆಸುತ್ತಿದೆ. ಸರ್ಕಾರದ ಪ್ರಸ್ತಾವನೆಗೆ ಪರಿಸರವಾದಿಗಳು, ಇಂಜಿನಿಯರ್‌ಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಕೆಆರ್‌ಎಸ್ ಅಣೆಕಟ್ಟು ಮತ್ತು ಅದರ ಸುತ್ತಲಿನ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು 1200 ಕೋಟಿ ವೆಚ್ಚದಲ್ಲಿ ಪಾರ್ಕ್ ಮತ್ತು ಪ್ರತಿಮೆ ನಿರ್ಮಾಣ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಆದರೆ, ಈಗಾಗಲೇ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ.











Click it and Unblock the Notifications