ಬಿಜೆಪಿ ಹೊಸ ಪ್ಲಾನ್: ಕಾರ್ಯಕರ್ತರಿಂದಲೇ ಅಭ್ಯರ್ಥಿಗಳ ಆಯ್ಕೆ
ಮಂಡ್ಯ, ಮಾರ್ಚ್ 31: ಮೊಟ್ಟ ಮೊದಲ ಬಾರಿಗೆ ರಾಷ್ಟ್ರೀಯ ಪಕ್ಷವಾಗಿರುವ ಭಾರತೀಯ ಜನತಾ ಪಕ್ಷ 2023ರ ವಿಧಾನಸಭಾ ಚುನಾವಣೆಗೆ ಜಿಲ್ಲೆಯ ಏಳು ಕ್ಷೇತ್ರಗಳಿಂದ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಶುಕ್ರವಾರ ನಗರದಲ್ಲಿ ಮತದಾನ ನಡೆಯಿತು.
ನಗರದ ಹೊರವಲಯದ ಗ್ರೀನ್ ಪ್ಯಾಲೇಸ್ ಕಲ್ಯಾಣಮಂಟಪದಲ್ಲಿ ಮತದಾನ ಪ್ರಕ್ರಿಯೆ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಿತು. ಈ ಮತದಾನದಲ್ಲಿ ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರದ ಪ್ರಮುಖರು, ಮಂಡಲ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಪ್ರಮುಖರು, ವಿಧಾನ ಸಭಾ ಕ್ಷೇತ್ರದಿಂದ ಜಿಲ್ಲಾ ಘಟಕಗಳಿಗೆ ನೇಮಕಗೊಂಡವರು ಸೇರಿದಂತೆ 600ಕ್ಕೂ ಹೆಚ್ಚು ಮಂದಿ ಮತದಾನದಲ್ಲಿ ಪಾಲ್ಗೊಂಡಿದ್ದರು.

ಒಬ್ಬರಿಗೆ ಮೂರು ಮತಗಳನ್ನು ಚಲಾಯಿಸುವ ಅಧಿಕಾರ ನೀಡಲಾಗಿದ್ದು, ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಸ್ಥಳೀಯ ಮುಖಂಡರಿಗೆ ನೀಡಲಾಗುವ ನಿರ್ದಿಷ್ಟ ನಮೂನೆ ಸ್ವೀಕರಿಸಿದ ಅರ್ಹ ಮತದಾರರು ಯಾರಿಗೆ ಟಿಕೆಟ್ ನೀಡಬೇಕು ಎಂಬ ಬಗ್ಗೆ ಸೂಚಿಸಿ ಮತ ಪೆಟ್ಟಿಗೆಯಲ್ಲಿ ಹಾಕಿದರು. ಒಂದೊಂದು ವಿಧಾನಸಭಾ ಕ್ಷೇತ್ರದಿಂದ ಹತ್ತಾರು ಆಕಾಂಕ್ಷಿಗಳಿದ್ದರೂ ಪ್ರಮುಖವಾಗಿ ಮೂವರಿಗೆ ಮಾತ್ರ ಸೂಚಿಸಲು ಅವಕಾಶ ನೀಡಲಾಗಿತ್ತು.
ಸಂಜೆ 4 ಗಂಟೆಯ ಬಳಿಕ ಪ್ರತಿ ಕ್ಷೇತ್ರದ ಮತಪೆಟ್ಟಿಗೆಯನ್ನು ಸೀಲ್ ಮಾಡಿಕೊಂಡು ಬೆಂಗಳೂರಿಗೆ ತೆಗೆದುಕೊಂಡು ಹೋಗಲಾಯಿತು.
ಚುನಾವಣಾ ವೀಕ್ಷಕರಾಗಿ ಆಗಮಿಸಿದ್ದ ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ್ ಮಾತನಾಡಿ, ಕಾರ್ಯಕರ್ತರಿಂದಲೇ ಅಭ್ಯರ್ಥಿಯನ್ನು ಆಯ್ಕೆ ಮಾಡುವಂತಹ ಕಾರ್ಯವನ್ನು ಮೊಟ್ಟ ಮೊದಲ ಬಾರಿ ಭಾರತೀಯ ಜನತಾ ಪಾರ್ಟಿ ಪ್ರಾರಂಭಿಸಿದೆ.

ಪ್ರತೀ ವಿಧಾನ ಸಭಾ ಕ್ಷೇತ್ರದಲ್ಲೂ ಎಷ್ಟೇ ಮಂದಿ ಆಕಾಂಕ್ಷಿತ ಅಭ್ಯರ್ಥಿಗಳಿದ್ದರೂ ಅವರಲ್ಲಿ ಯಾರು ಬಹಳ ಮುಖ್ಯವಾಗಿರುತ್ತಾರೆ ಎಂಬುದನ್ನು ಮನಗಂಡು ಮೂರು ಮಂದಿಗೆ ಮತ ಹಾಕುವಂತೆ ಸಲಹೆ ನೀಡಿದರು.
ಈ ಬಗ್ಗೆ ಶಾಸಕ ಕೆ. ರಾಮದಾಸ್ ಮಾತನಾಡಿ, ವ್ಯಕ್ತಿಗಿಂತಲೂ ಪಕ್ಷ ಮುಖ್ಯ. ಪಕ್ಷಕ್ಕಿಂತಲೂ ದೇಶ ದೊಡ್ಡದು. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಮುಂದಾಗಬೇಕು. ಪಕ್ಷದಿಂದ ಯಾರೇ ಅಭ್ಯರ್ಥಿಯಾದರೂ ಸಹ ಪಕ್ಷವನ್ನು ಬೆಂಬಲಿಸುವ ಮೂಲಕ ಅಧಿಕಾರಕ್ಕೆ ತರಬೇಕು ಎಂದು ಕಿವಿಮಾತು ಹೇಳಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಗೋಪಿನಾಥ ರೆಡ್ಡಿ ಮಾತನಾಡಿ, ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ದೇಶ ಸೇವೆ, ಸಮಾಜ ಸೇವೆಯ ಧ್ಯೇಯೋದ್ದೇಶ ಹೊಂದಿರುವ ಉತ್ತಮ ಚಾರಿತ್ರ್ಯ ಹೊಂದಿರುವ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕರ್ತರ ಮತದಾನದ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಸಿದ್ದರಾಮಯ್ಯ, ಮಂಡಲ ಅಧ್ಯಕ್ಷರು, ಅಭ್ಯರ್ಥಿಗಳು ಸಹ ಈ ವೇಳೆ ಹಾಜರಿದ್ದರು.
ದಾವಣಗೆರೆ ಅಭ್ಯರ್ಥಿಗಳ ಆಯ್ಕೆಗೆ ಮತದಾನ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ಜಿಲ್ಲೆಯ ಏಳು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಮತದಾನ ನಡೆಯಿತು.
ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಚನ್ನಗಿರಿ,ಹೊನ್ನಾಳಿ, ಹರಿಹರ, ಮಾಯಕೊಂಡ, ಜಗಳೂರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ವೋಟಿಂಗ್ ನಡೆಯಿತು. ದಾವಣಗೆರೆ ಉತ್ತರ ಹಾಗೂ ದಾವಣಗೆರೆ ದಕ್ಷಿಣದಲ್ಲಿ ಹೆಚ್ಚಿನ ಆಕಾಂಕ್ಷಿಗಳಿದ್ದು, ಪ್ರಮುಖ ಮೂವರ ಹೆಸರಿಗೆ ಮತ ಅಥವಾ ಚೀಟಿಯಲ್ಲಿ ಹೆಸರು ಬರೆಯುವ ಮೂಲಕ ಅಭಿಪ್ರಾಯ ಸಂಗ್ರಹಿಸಲಾಯಿತು.











Click it and Unblock the Notifications