ಮಂಡ್ಯ; ಜನರ ಭಾವನಾತ್ಮಕ ಸಂಬಂಧ ಗಟ್ಟಿಗೊಳಿಸಲು ಭಾರತ್ ಜೋಡೋ
ಮಂಡ್ಯ, ಅಕ್ಟೋಬರ್, 09: "ಮೂರು ದಿನಗಳ ಕಾಲ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆಯು ಜಿಲ್ಲೆಯಲ್ಲಿ ಯಶಸ್ವಿಯಾಗಿದೆ. ಜನರ ಭಾವನಾತ್ಮಕ ಸಂಬಂಧ ಗಟ್ಟಿಗೊಳಿಸುವ ಉದ್ದೇಶದ ಪಾದಯಾತ್ರೆಯದ್ದು ಆಗಿತ್ತು" ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಎನ್. ಚಲುವರಾಯಸ್ವಾಮಿ ಹೇಳಿದರು.
ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, "ಪಾದಯಾತ್ರೆ ಮೂಲಕ ರಾಹುಲ್ ಗಾಂಧಿ ದೇಶ, ಪ್ರಜಾಪ್ರಭುತ್ವ, ಸಂವಿಧಾನವನ್ನು ಗಟ್ಟಿಗೊಳಿಸುವ ಮೂಲಕ ದೇಶದಲ್ಲಿ ಬದಲಾವಣೆ ತರಲು ಪಾದಯಾತ್ರೆ ನಡೆಸುತ್ತಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ, ಅಧಿಕಾರದ ಆಸೆ ಇಲ್ಲ" ಎಂದು ಸ್ಪಷ್ಟಪಡಿಸಿದರು.
"ರಾಹುಲ್ ಗಾಂಧಿ ಅವರು ದೇಶದ ಬಗ್ಗೆ ಗೌರವ, ಅಭಿಮಾನ, ಪ್ರೀತಿ, ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ. ಅವರು ಸಾಕಷ್ಟು ಜ್ಞಾನ ಹೊಂದಿದ್ದು, ಪ್ರಬುದ್ಧರಾಗಿದ್ದಾರೆ. ಟೀಕೆಗಳನ್ನು ಮಾಡುವವರು ಇದ್ದೇ ಇರುತ್ತಾರೆ. ಆದರೆ ನಾನು ಮೂರು ದಿನಗಳ ಕಾಲ ಅವರ ಜೊತೆಯಲ್ಲಿಯೇ ಇದ್ದು ಗಮನಿಸಿದ್ದೇನೆ. ಬಡವರು, ದಲಿತರು, ರೈತರು, ಹಿಂದುಳಿದ ವರ್ಗದವರು ಸೇರಿದಂತೆ ಎಲ್ಲ ವರ್ಗದ ಜನರ ಬಗ್ಗೆ ಅವರು ಕಾಳಜಿ ಹೊಂದಿದ್ದಾರೆ" ಎಂದು ತಿಳಿಸಿದರು.
"ಜಿಲ್ಲೆಯಲ್ಲಿ ಶ್ರೀರಂಗಪಟ್ಟಣ, ಪಾಂಡವಪುರ ಹಾಗೂ ನಾಗಮಂಗಲ ತಾಲೂಕಿನಲ್ಲಿ ಮೂರು ದಿನಗಳ ಕಾಲ ನಡೆದ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಬೆಲೆ ಏರಿಕೆಯಿಂದ ಸಾಮಾನ್ಯ ಜನರ ಜೀವನ ಹೇಗಿದೆ, ಸಮಸ್ಯೆಗಳೇನು?, ರೈತರ ಸಮಸ್ಯೆ, ಎನ್‌ಇಪಿ ಶಿಕ್ಷಣ ನೀತಿಯಲ್ಲಿ ಆಗಿರುವ ಸಮಸ್ಯೆ, ಪ್ರವಾಸೋದ್ಯಮ, ಮೈಶುಗರ್ ಕಾರ್ಖಾನೆ, ಕಬ್ಬು ಬೆಳೆಗಾರರ ಸಮಸ್ಯೆ ಸೇರಿದಂತೆ ಜಿಲ್ಲೆಯ ಸಮಸ್ಯೆಗಳನ್ನು ತಿಳಿದುಕೊಂಡಿದ್ದಾರೆ. ಸಂವಾದ ನಡೆಸುವ ಮೂಲಕ ಎಲ್ಲ ಮಾಹಿತಿಗಳನ್ನು ಪಡೆದಿದ್ದಾರೆ. ಅಲ್ಲದೆ ಪಾದಯಾತ್ರೆಯಿಂದ ಸಾಕಷ್ಟು ಕಲಿತಿದ್ದೇನೆ ಎಂದು ಅವರೇ ಸ್ಪಷ್ಟವಾಗಿ ಹೇಳಿದ್ದಾರೆ" ಎಂದರು.

ಯಾತ್ರೆಯಲ್ಲಿ ಭಾಗಿಯಾದ ಕಾರ್ಯಕರ್ತರು
"ಹಿಂದೆ ಸಾಕಷ್ಟು ನಾಯಕರು ಪಾದಯಾತ್ರೆ ನಡೆಸಿದ್ದಾರೆ. ಆದರೆ ಈ ಪಾದಯಾತ್ರೆಯು ಐತಿಹಾಸಿಕವಾಗಿದೆ. ಪ್ರಧಾನಿ ಆಗುವ ಅವಕಾಶವಿದ್ದರೂ ಅದನ್ನು ಬೇರೆಯವರಿಗೆ ನೀಡುವ ಮೂಲಕ ಅಧಿಕಾರ ತ್ಯಾಗ ಮಾಡಿದ್ದಾರೆ. ಇದು ಮತ್ತೊಬ್ಬ ನಾಯಕರಿಂದ ನಿರೀಕ್ಷಿಸಲು ಸಾಧ್ಯವಿಲ್ಲ" ಎಂದು ಎನ್. ಚಲುವರಾಯಸ್ವಾಮಿ ಶ್ಲಾಘಿಸಿದರು.
"ಮೂರು ದಿನಗಳ ಕಾಲ ನಡೆದ ಪಾದಯಾತ್ರೆಯಲ್ಲಿ ಸುಮಾರು 1.50 ಲಕ್ಷ ಜನ ಕಾರ್ಯಕರ್ತರು, ಮುಖಂಡರು, ನಾಯಕರು ಹಾಗೂ ಪಕ್ಷಾತೀತವಾಗಿ ಎಲ್ಲ ಸಾರ್ವಜನಿಕರು ಭಾಗವಹಿಸಿದ್ದು ಅಭೂತಪೂರ್ವ ಯಶಸ್ವಿಗೆ ಕಾರಣವಾಗಿದೆ. ಅಲ್ಲದೆ ವಿವಿಧ ಸಂಘಟನೆಗಳು, ಬೇರೆ ಜಿಲ್ಲೆಗಳಿಂದಲೂ ಆಗಮಿಸಿದ ಪಕ್ಷದ ನಾಯಕರು, ಕಾರ್ಯಕರ್ತರು ಬೆಂಬಲ ನೀಡಿದ್ದಾರೆ. ಮಂಡ್ಯ ಪೊಲೀಸ್ ಇಲಾಖೆ ಸಂಪೂರ್ಣವಾಗಿ ಸಹಕರಿಸಿದ್ದು, ಎಲ್ಲರಿಗೂ ಧನ್ಯವಾದ ಹೇಳುತ್ತೇನೆ" ಎಂದು ಎನ್. ಚಲುವರಾಯಸ್ವಾಮಿ ತಿಳಿಸಿದರು.

ಸೋನಿಯಾ ಬಗ್ಗೆ ಚಲುವರಾಯಸ್ವಾಮಿ ಅಭಿಪ್ರಾಯ
"ಸೋನಿಯಾ ಗಾಂಧಿ ಪಾದಯಾತ್ರೆಗೆ ಬೆಂಬಲ ಸೂಚಿಸಿದ್ದರಿಂದ ಮತ್ತಷ್ಟು ಹುರುಪು ಬಂದಿದೆ. ನಮ್ಮ ಪಕ್ಷದ ಹಿರಿಯ ನಾಯಕರು ಆಗಿರುವುದರಿಂದ ಅವರ ಮಾರ್ಗದರ್ಶನ, ಬೆಂಬಲ, ಪ್ರೋತ್ಸಾಹ ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಅವರು ಜಿಲ್ಲೆಗೆ ಆಗಮಿಸಿ ಪಾದಯಾತ್ರೆಯಲ್ಲಿ ಭಾಗವಹಿಸಿ ನಮ್ಮ ಜೊತೆ ಹೆಜ್ಜೆ ಹಾಕಿದ್ದು ಕಾರ್ಯಕರ್ತರಲ್ಲಿ ಹುರುಪು ಹೆಚ್ಚಿಸಿದೆ. ರಾಹುಲ್ ಗಾಂಧಿ ಪಾದಯಾತ್ರೆಯು ಕೇವಲ ಮಂಡ್ಯ ಜಿಲ್ಲೆಗೆ ಸೀಮಿತವಾಗಿಲ್ಲ" ಎಂದು ಎನ್. ಚಲುವರಾಯಸ್ವಾಮಿ ಹೇಳಿದರು.

ಮುಂದಿನ ಚುನಾವಣೆ ಎದುರಿಸಲು ಪ್ರಯತ್ನ
"ಇದು ದೇಶ ಹಾಗೂ ರಾಜ್ಯದ ಪಾದಯಾತ್ರೆ ಆಗಿದೆ. ಆದ್ದರಿಂದ ಇದನ್ನು ಮಂಡ್ಯ ಜಿಲ್ಲೆಯ ಶಕ್ತಿ ಪ್ರದರ್ಶನ ಎಂದು ಬಿಂಬಿಸುವ ಅಗತ್ಯವಿಲ್ಲ. ಆದರೆ ಪಾದಯಾತ್ರೆಯಿಂದ ಸಹಜವಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಬಂದಂತಾಗಿದೆ. ಮೊದಲಿಗಿಂತಲೂ ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಬದಲಾವಣೆ ಕಂಡಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಏಳು ಕ್ಷೇತ್ರಗಳಲ್ಲೂ ಪ್ರಬಲವಾಗಿ ಚುನಾವಣೆ ಎದುರಿಸುವ ಮೂಲಕ ಗೆಲ್ಲಲು ಪ್ರಯತ್ನಿಸುತ್ತೇವೆ" ಎಂದು ಎನ್. ಚಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಜನರ ಸಮಸ್ಯೆಯನ್ನು ತಿಳಿಯುತ್ತಿರುವ ರಾಹುಲ್
ಕೆಪಿಸಿಸಿ ಉಪಾಧ್ಯಕ್ಷ ಪಿ. ಎಂ. ನರೇಂದ್ರಸ್ವಾಮಿ ಮಾತನಾಡಿ, "ದೇಶದಲ್ಲಿ ಅಸಹನೆ, ದೌರ್ಜನ್ಯ, ಜಾತಿ, ಧರ್ಮಗಳ ನಡುವೆ ಸಂಘರ್ಷ, ಕೋಮುವಾದಿತನ ಹೆಚ್ಚಾಗಿದೆ. ಇದರ ಬಗ್ಗೆ ಸಂಸತ್‌ನಲ್ಲಿ ಮಾತನಾಡಲು ಅವಕಾಶ ನೀಡದೆ ಬಿಜೆಪಿ ರಾಜಕೀಯ ಮಾಡುತ್ತಿದೆ. ಇದನ್ನು ಎತ್ತಿ ತೋರಿಸಬೇಕಾದ ಕೆಲವು ರಾಷ್ಟ್ರೀಯ ಮಟ್ಟದ ಮಾಧ್ಯಮಗಳು ವೌನವಾಗಿವೆ. ಆದ್ದರಿಂದ ದೇಶದ ಜನರ ಸಮಸ್ಯೆ ಅರಿಯಲು ಜನರ ಬಳಿಯೇ ಹೋಗುತ್ತೇನೆ ಎಂದು ನಿರ್ಧರಿಸಿ ರಾಹುಲ್ ಗಾಂಧಿ ಅವರು ಪಾದಯಾತ್ರೆ ನಡೆಸುವ ಮೂಲಕ ಜನರ ಸಮಸ್ಯೆಯನ್ನು ತಿಳಿಯುತ್ತಿದ್ದಾರೆ. ಇದರಲ್ಲಿ ಯಾವುದೇ ಅಧಿಕಾರ, ರಾಜಕೀಯ ಇಲ್ಲ. ಯಾರು ಏನೇ ಟೀಕೆ ಮಾಡಿದರೂ ಪಾದಯಾತ್ರೆಯನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ" ಎಂದು ಹೇಳಿದರು.












Click it and Unblock the Notifications