ಬೆಂ-ಮೈ ಹೆದ್ದಾರಿಯಲ್ಲಿ ದರೋಡೆಕೋರರ ಹಾವಳಿ: ಗೂಡ್ಸ್ ಮೇಲೆ ಐವರ ದಾಳಿ
ಮಂಡ್ಯ, ಆಗಸ್ಟ್ 19: ತರಕಾರಿ ಸಾಗಾಣಿಕೆ ಮಾಡುತ್ತಿದ್ದ ಗೂಡ್ಸ್ ವಾಹನದ ಮೇಲೆ ಐವರು ದರೋಡೆಕೋರರ ಗುಂಪು ದಾಳಿ ಮಾಡಿ ಚಾಲಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ವಿಫಲ ಯತ್ನ ನಡೆಸಿದ ಘಟನೆ ತಾಲೂಕಿನ ಇಂಡುವಾಳು ಸಮೀಪ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಡರಾತ್ರಿ ಜರುಗಿದೆ.
ಮದ್ದೂರಿನ ಗೂಡ್ಸ್ ವಾಹನದ ಚಾಲಕ ಚಂದ್ರು ಹಾಗೂ ದಯಾನಂದ ಎನ್ನುವವರು ದರೋಡೆಕೋರರ ದಾಳಿಯಿಂದ ಯಾವುದೇ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ದರೋಡೆಕೋರರು ಮಾರಕಾಸ್ತ್ರ ಮತ್ತು ಕಲ್ಲುಗಳಿಂದ ದಾಳಿ ನಡೆಸಿದ ಪರಿಣಾಮ ಗೂಡ್ಸ್ ವಾಹನದ ಮುಂಭಾಗದ ಗಾಜು ಸೇರಿದಂತೆ ಹಲವು ಭಾಗಗಳು ಜಖಂಗೊಂಡಿದೆ.

ಮದ್ದೂರು ಪಟ್ಟಣದ ಹಳೇ ಎಂ.ಸಿ. ರಸ್ತೆಯ ಮಹಾವೀರ ಚಿತ್ರಮಂದಿರದ ಬಳಿ ಇರುವ ನಿಡಘಟ್ಟ ಗ್ರಾಮದ ಪ್ರಸನ್ನ ಎಂಬುವರ ತರಕಾರಿ ಮಂಡಿಗೆ ಚಾಲಕ ಚಂದ್ರು ಹಾಗೂ ದಯಾನಂದ ತಮ್ಮ ಟಾಟಾ ಏಸ್ (ಕೆ.ಎ.೧೧ ಪಿ. ೪೧೫೮) ವಾಹನದಲ್ಲಿ ಮೈಸೂರಿನ ಎಪಿಎಂಸಿ ಮಾರುಕಟ್ಟೆಯಿಂದ ಮದ್ದೂರಿಗೆ ತರಕಾರಿ ತುಂಬಿಕೊಂಡು ಬರುತ್ತಿದ್ದರು.
ಮಧ್ಯರಾತ್ರಿ 1:15ರ ಸುಮಾರಿಗೆ ಇಂಡುವಾಳು ಸಮೀಪದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ಬಳಿ ರಸ್ತೆ ವಿಭಜಕದ ಮಧ್ಯೆ ಬೆಳೆದು ನಿಂತಿದ್ದ ಗಿಡಗಂಟೆಗಳ ಮಧ್ಯೆ ಅಡಗಿಕುಳಿತಿದ್ದ ಐವರು ದರೋಡೆಕೋರರ ಗುಂಪು ಏಕಾಏಕಿ ಹೆದ್ದಾರಿಗಿಳಿದು ಗೂಡ್ಸ್ ವಾಹನವನ್ನು ಅಡ್ಡಗಟ್ಟಲು ಯತ್ನಿಸಿದ್ದಾರೆ.
ಈ ವೇಳೆ ಚಾಲಕ ಚಂದ್ರು ತನ್ನ ಸಮಯಪ್ರಜ್ಞೆಯಿಂದ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೆ ಮತ್ತಷ್ಟು ವೇಗವಾಗಿ ಚಾಲನೆ ಮಾಡಿಕೊಂಡು ಬಂದ ಪರಿಣಾಮ ದರೋಡೆ ಯತ್ನ ವಿಫಲವಾಗಿದೆ. ಈ ಘಟನೆ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಒಂದೇ ರಾತ್ರಿ ಎರಡು ಕಡೆ ದರೋಡೆ
ಶ್ರೀರಂಗಪಟ್ಟಣ: ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಪ್ರಯಾಣದ ವೇಳೆ ಸುಲಿಗೆ ಮುಂದುವರೆದಿದ್ದು, ಒಂದೇ ರಾತ್ರಿ ಎರಡು ಕಡೆ ದರೋಡೆ ನಡೆದ ಘಟನೆ ಇತ್ತೀಚಿಗೆ ನಡೆದಿತ್ತು.
ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿ ಗೇಟ್ ಮತ್ತು ಗೌರಿಪುರ ಬಳಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ಬೆದರಿಸಿ ಚಿನ್ನಾಭರಣ ದೋಚಿದ್ದಾರೆ. ಶನಿವಾರ ತಡರಾತ್ರಿ ಹೆದ್ದಾರಿಯಲ್ಲಿ ಹೆಲ್ಮೆಟ್ ಧರಿಸಿದ್ದ ಇಬ್ಬರು ದರೋಡೆ ಮಾಡಿ ಪರಾರಿಯಾಗಿದ್ದರು.
ನಗುವನಹಳ್ಳಿ ಗೇಟ್ ಬಳಿಯ ಭಾರತ್ ಬೆಂಚ್ ಕಂಪೆನಿ ಎದುರು ಉಡುಪಿಯ ಶಿವಪ್ರಸಾದ- ಸುಮಾ ದಂಪತಿ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದ ಸಮಯದಲ್ಲಿ ಇಬ್ಬರು ದುಷ್ಕರ್ಮಿಗಳು ದಂಪತಿ ಬೆದರಿಸಿ 30 ಗ್ರಾಂ ಚಿನ್ನಾಭರಣ ದೋಚಿದ್ದರು. ಇದಾದ ಕೆಲ ಹೊತ್ತಿನಲ್ಲಿ ಗೌರಿಪುರ ಬಳಿ ದುಷ್ಕರ್ಮಿಗಳು ಕೋಲಾರ ಜಿಲ್ಲೆ ಮಾಲೂರಿನ ಡಾ. ರಕ್ಷಿತ್ ರೆಡ್ಡಿ ಮತ್ತು ಡಾ.ಮಾನಸ ದಂಪತಿಗೆ ಬೆದರಿಸಿ 40 ಗ್ರಾಂ ಚಿನ್ನಾಭರಣ ಕಸಿದು ಪರಾರಿಯಾಗಿದ್ದರು.
ಮೈಸೂರಿಗೆ ತೆರಳುತ್ತಿದ್ದ ವೇಳೆ ಡಾ.ರಕ್ಷಿತ್ ರೆಡ್ಡಿ ಅವರ ಕಾರು ಪಂಕ್ಚರ್ ಆಗಿದ್ದು, ಚಕ್ರ ಬದಲಿಸುತ್ತಿದ್ದಾಗ ದುಷ್ಕರ್ಮಿಗಳು ದರೋಡೆ ಮಾಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.












Click it and Unblock the Notifications