Amit Shah Mandya Visit ಡಿಸೆಂಬರ್ 30ರಂದು ಮಂಡ್ಯಕ್ಕೆ ಭೇಟಿ ನೀಡಲಿರುವ ಅಮಿತ್ ಶಾ:ಸ್ಥಳ ಪರಿಶೀಲಿಸಿದ ಎಡಿಜಿಪಿ ಅಲೋಕ್ ಕುಮಾರ್
ಮದ್ದೂರು, ಡಿಸೆಂಬರ್, 29: ಕೇಂದ್ರ ಗೃಹ ಸಚಿವ ಅಮಿತ್ ಶಾ ಡಿಸೆಂಬರ್ 30ರಂದು ತಾಲೂಕಿನ ಗೆಜ್ಜಲಗೆರೆಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ನಡೆಯಲಿರುವ ಮೆಗಾ ಡೇರಿ ಉದ್ಘಾಟನೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಕಾನೂನು ಶಿಸ್ತು ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಬುಧವಾರ ಒಕ್ಕೂಟಕ್ಕೆ ಭೇಟಿ ನೀಡಿ ಭದ್ರತೆ ವ್ಯವಸ್ಥೆ ಕುರಿತಂತೆ ಪರಿಶೀಲನೆ ನಡೆಸಿದರು. ಅಲ್ಲದೇ ಸೂಕ್ತ ಭದ್ರತಾ ದೃಷ್ಟಿಯಿಂದ 900 ಮಂದಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ದಕ್ಷಿಣ ವಲಯ ಐಜಿಪಿ ಪ್ರವೀದ್ ಮಧುಕರ್ ಪವಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಒಕ್ಕೂಟಕ್ಕೆ ಭೇಟಿ ನೀಡಿದ ಅಲೋಕ್ ಕುಮಾರ್, ಗೃಹ ಸಚಿವ ಅಮಿತ್ ಶಾ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುವ ವೇದಿಕೆ, ಮೆಗಾಡೇರಿ ಉದ್ಘಾಟನಾ ಕಟ್ಟಡ, ಒಕ್ಕೂಟದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸುವ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಗೃಹ ಸಚಿವರು ಒಕ್ಕೂಟಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ರಸ್ತೆ ಮಾರ್ಗ, ಹೆಲಿಪ್ಯಾಡ್ ಸ್ಥಳ, ಪೊಲೀಸ್ ಭದ್ರತೆ ಕುರಿತಂತೆ ಎಡಿಜಿಪಿ ಅಲೋಕ್‌ಕುಮಾರ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

900 ಮಂದಿ ಪೊಲೀಸ್ ಸಿಬ್ಬಂದಿ ನಿಯೋಜನೆ
ನಂತರ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಲೋಕ್ ಕುಮಾರ್, ಬೆಂಗಳೂರು ಯಲಹಂಕ ಏರ್‌ಪೋರ್ಟ್ ಮೂಲಕ ಮದ್ದೂರು-ಮಳವಳ್ಳಿ ರಸ್ತೆಯ ಹುಲಿಗೆರೆಪುರ ಹೆಲಿಪ್ಯಾಡ್‌ಗೆ ಬೆಳಗ್ಗೆ 1 ಗಂಟೆಗೆ ಕೇಂದ್ರ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ. ರಸ್ತೆ ಮೂಲಕ ಸುಮಾರು 11:15ಕ್ಕೆ ಗೆಜ್ಜಲಗೆರೆ ಡೇರಿಗೆ ತೆರಳಲಿದ್ದಾರೆ. ಅಮಿತ್ ಶಾ ಆಗಮದ ಹಿನ್ನೆಲೆಯಲ್ಲಿ ಹಿರಿಯ ಮತ್ತು ಕಿರಿಯ ಪೊಲೀಸ್ ಅಧಿಕಾರಿಗಳು ಹಾಗೂ 900 ಸಿಬ್ಬಂದಿಯನ್ನು ಭದ್ರತಾ ವ್ಯವಸ್ಥೆಗಾಗಿ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ಯತೀಶ್, ಹಾಸನ ಜಿಲ್ಲಾ ಎಸ್‌ಪಿ ಹರಿರಾಂ ಶಂಕರ್, ಮೈಸೂರು ನಗರ ಎಸ್‌ಪಿ ಮುತ್ತುರಾಜು, ಎಎಸ್‌ಪಿಗಳಾದ ವೇಣುಗೋಪಾಲ್, ಸದ್ದಾರಾಜ್, ಜಿಲ್ಲಾ ಪಂಚಾಯತ್ ಸಿಇಓ ಶಾಂತಾ ಹುಲ್ಮನಿ, ಕೆಎಂಎ ವ್ಯವಸ್ಥಾಪಕ ನಿರ್ದೇಶಕ ಸತೀಶ್, ಮನ್‌ಮುಲ್ ಅಧ್ಯಕ್ಷ ಬಿ.ಆರ್. ರಾಮಚಂದ್ರ, ಮಂಡ್ಯ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ. ಪಿ.ಆರ್.ಮಂಜೇಶ್, ನಿರ್ದೇಶಕರಾದ ರೂಪ, ವಿ. ಸುಜಾತಕೃಷ್ಣ ಸೇರಿದಂತೆ ವಿವಿಧ ವಿಭಾಗಳ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications