ಡಿ.ಹೊಸೂರಲ್ಲಿ ಅಂಬಿ ಪ್ರತಿಮೆ ನಿರ್ಮಿಸಿದ ಅಭಿಮಾನಿಗಳು

ಮಂಡ್ಯ, ನವೆಂಬರ್ 27 : ನಟ ಅಂಬರೀಶ್ ಅವರು ಸದಾ ನೆನಪಾಗಿ ತಮ್ಮೊಂದಿಗಿರಬೇಕೆಂಬ ಸಂಕಲ್ಪ ತೊಟ್ಟ ಮದ್ದೂರು ತಾಲೂಕಿನ ಡಿ.ಹೊಸೂರು ಗ್ರಾಮದ ಜನ ಪ್ರತಿಮೆ ನಿರ್ಮಾಣ ಮಾಡಿ ನೆನಪನ್ನು ಹಸಿರಾಗಿಸಿದ್ದಾರೆ. ಹಾಗೆ ನೋಡಿದರೆ ಮಂಡ್ಯದ ಗಂಡು ಎಂದೇ ಕರೆಯಿಸಿಕೊಳ್ಳುತ್ತಿದ್ದ ರೆಬಲ್ ಸ್ಟಾರ್ ಅಂಬರೀಶ್ ಅವರು ಇನ್ನು ನೆನಪು ಮಾತ್ರ.

ಅವರು ಜಿಲ್ಲೆಯಾದ್ಯಂತ ಓಡಾಡಿದವರು.ಹೀಗಾಗಿ ಇಲ್ಲಿನ ಪ್ರತಿ ಗ್ರಾಮಗಳ ಜನರು ಅವರ ಒಡನಾಟವನ್ನು ನೆನೆದು ಕಣ್ಣೀರಾಗುತ್ತಿದ್ದಾರೆ. ಅಂಬರೀಶ್ ಅವರು ಮಂಡ್ಯದ ಬಗ್ಗೆ ಎಷ್ಟೊಂದು ಅಭಿಮಾನವಿಟ್ಟಿದ್ದರು ಎಂಬುದಕ್ಕೆ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಅಂಬರೀಶ್ ಅವರ ಪಾರ್ಥಿವ ಶರೀರದ ದರ್ಶನಕ್ಕೆ ಹರಿದು ಬಂದ ಅಭಿಮಾನಿಗಳ ದಂಡೇ ಸಾಕ್ಷಿ.

ಅಂಬಿ ವಿ ಮಿಸ್ ಯೂ....ಕಣ್ಣೀರು ತರಿಸುತ್ತೆ ಅಂತಿಮಯಾತ್ರೆಯ ಈ ಫೋಟೋಗಳು

ಜತೆಗೆ ವಯಸ್ಸಿನ ಬೇಧವಿಲ್ಲದೆ ಎಲ್ಲರೂ ಅವರ ಅಭಿಮಾನಿಗಳಾಗಿದ್ದರು ಎಂಬುದು ಎಲ್ಲರಿಗೂ ತಿಳಿದ ವಿಚಾರವೇ. ಸಾಮಾನ್ಯವಾಗಿ ಕೆಲವು ನಟರು ರಾಜಕೀಯಕ್ಕೆ ಬಂದ ಬಳಿಕ ಅವರನ್ನು ಜನ ರಾಜಕೀಯ ನಾಯಕರಾಗಿ ನೋಡುತ್ತಾರೆ. ಮತ್ತು ಮೊದಲಿನ ಅಭಿಮಾನವನ್ನು ಕಳೆದುಕೊಂಡು ಪಕ್ಷದ ಕಾರ್ಯಕರ್ತರಿಗೆ ಸೀಮಿತರಾಗಿ ಬಿಡುತ್ತಾರೆ.

ಆದರೆ ಅಂಬರೀಶ್ ಅವರ ವಿಚಾರದಲ್ಲಿ ಹಾಗೆ ಆಗಲೇ ಇಲ್ಲ. ಅವರನ್ನು ಜನ ರಾಜಕಾರಣಿಯಾಗಿ ನೋಡಲೇ ಇಲ್ಲ. ಅವರು ಮಂಡ್ಯದವರಿಗೆ ಪ್ರೀತಿಯ ಅಣ್ಣನಾಗಿಯೇ ಉಳಿದು ಬಿಟ್ಟರು. ಒಬ್ಬ ವ್ಯಕ್ತಿ ಆಸ್ತಿ ಅಂತಸ್ತುಗಳನ್ನು ಸುಲಭವಾಗಿ ಸಂಪಾದಿಸಿಕೊಳ್ಳಬಹುದು ಆದರೆ ಜನರ ಪ್ರೀತಿಗಳನ್ನು ಗಳಿಸುವುದು ಅಷ್ಟು ಸುಲಭವಲ್ಲ. ಆದರೆ ಅಂಬರೀಶ್ ಹಾಗೆ ಆಗಿರಲಿಲ್ಲ.

ನಗು ಎಲ್ಲರನ್ನು ಸೆಳೆಯುತ್ತಿತ್ತು

ನಗು ಎಲ್ಲರನ್ನು ಸೆಳೆಯುತ್ತಿತ್ತು

ಅಂಬರೀಶ್ ಜನಗಳ ಪ್ರೀತಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಅಷ್ಟೇ ಅಲ್ಲ ಜನಗಳ ಪ್ರೀತಿಯನ್ನು ಹಾಗೆಯೇ ಉಳಿಸಿಕೊಂಡಿದ್ದರು. ಅವರ ನಡೆ ನುಡಿಗಳೇ ಅವರ ಅಭಿಮಾನಿಗಳು ಇಷ್ಟಪಡುವಂತಿತ್ತು. ಅಂಬರೀಶ್ ಅವರ ಮಾತು ಕೇಳಿದರೆ ಬೈಯ್ತಿದ್ದಾರೆನೋ ಎಂಬಂತೆ ತೋರುತ್ತಿತ್ತಾದರೂ ಅದರ ಹಿಂದೆ ಪ್ರೀತಿ ಎದ್ದು ಕಾಣುತ್ತಿತ್ತು. ಬೈದಂತೆ ಮಾತನಾಡಿಸಿ ಮತ್ತೆ ಮುಖದಲ್ಲಿ ಹೊರಸೂಸುತ್ತಿದ್ದ ನಗು ಎಲ್ಲರನ್ನು ಸೆಳೆಯುತ್ತಿತ್ತು.

ನಮ್ಮಲ್ಲೇ ಇದ್ದಾರೆ

ನಮ್ಮಲ್ಲೇ ಇದ್ದಾರೆ

ಇಂಥ ವ್ಯಕ್ತಿತ್ವದ ಅಂಬರೀಶ್ ಮತ್ತೆ ಬಾರದ ಲೋಕದತ್ತ ಪಯಣ ಬೆಳೆಸಿದ್ದಾರೆ. ಅದು ನೋವಿನ ಸಂಗತಿಯೇ. ಆದರೂ ಅವರ ಅಭಿಮಾನಿಗಳು ಅವರ ನೆನಪನ್ನು ಪ್ರತಿಮೆ ನಿರ್ಮಾಣ ಮಾಡಿ ಚಿರಸ್ಥಾಯಿಯಾಗಿಸುತ್ತಿದ್ದಾರೆ ಎನ್ನುವುದು ಖುಷಿಕೊಡುವ ವಿಚಾರವಾಗಿದೆ.

ಅಂಬರೀಶ್ ಅವರು ನಿಧನರಾಗಿರುವುದು ತಿಳಿಯುತ್ತಿದ್ದಂತೆಯೇ ಮದ್ದೂರು ತಾಲೂಕಿನ ಡಿ.ಹೊಸೂರು ಗ್ರಾಮದ ಜನ ತಮ್ಮ ನೆಚ್ಚಿನ ನಟ ಅಂಬರೀಶ್ ಅವರ ಪ್ರತಿಮೆಯನ್ನು ಊರಲ್ಲಿ ಪ್ರತಿಷ್ಠಾಪಿಸಿ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಅವರು ಎಲ್ಲೂ ಹೋಗಿಲ್ಲ ನಮ್ಮಲ್ಲೇ ಇದ್ದಾರೆ ಎಂಬುದನ್ನು ಸಾಕ್ಷೀಕರಿಸಿದ್ದಾರೆ.

ಗ್ರಾಮದಲ್ಲಿ ಪ್ರತಿಷ್ಠಾಪನೆ

ಗ್ರಾಮದಲ್ಲಿ ಪ್ರತಿಷ್ಠಾಪನೆ

ಗ್ರಾಮದಲ್ಲಿ ಅಂಬರೀಶ್ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ಆ ಪೈಕಿ ಕಟ್ಟಾ ಅಭಿಮಾನಿ ಮೋಹನ್‌ಕುಮಾರ್ ಮತ್ತು ಕುಮಾರ್, ಮಹದೇವ, ಚನ್ನಪ್ಪ, ಚಿನ್ನಹೆಗ್ಗಡೆ, ಶಂಕರೇಗೌಡ, ಅಪ್ಪಾಜಿ, ಸಣ್ಣಯ್ಯ ಸೇರಿದಂತೆ ಹಲವರು ಗ್ರಾಮಸ್ಥರ ನೆರವಿನೊಂದಿಗೆ ಸುಮಾರು ಒಂದು ಲಕ್ಷ ರೂ ವೆಚ್ಚದಲ್ಲಿ ಅಂಬರೀಶ್ ಅವರ ಪ್ರತಿಮೆ ನಿರ್ಮಾಣ ಮಾಡಿ ಗ್ರಾಮದಲ್ಲಿ ಪ್ರತಿಷ್ಠಾಪನೆ ಮಾಡಿದ್ದಾರೆ.

ಆ ನಂತರ ಹೂವಿನ ಹಾರ ಹಾಕಿ ಪೂಜೆ ಮಾಡುವ ಮೂಲಕ ಭಕ್ತಿಯಿಂದ ಶ್ರದ್ಧಾಂಜಲಿ ಸಲ್ಲಿಸಿ ತಮ್ಮ ಅಭಿಮಾನ ಮೆರೆದಿದ್ದಾರೆ.

ಅಭಿಮಾನವೇ ಹಾಗಿದೆ

ಅಭಿಮಾನವೇ ಹಾಗಿದೆ

ಮುಂದಿನ ದಿನಗಳ ಮಂಡ್ಯ ಜಿಲ್ಲೆಯಾದ್ಯಂತ ಅಂಬರೀಶ್ ಅವರ ಇಂತಹ ಪ್ರತಿಮೆ, ಪುತ್ಥಳಿಗಳು ಪ್ರತಿಷ್ಠಾಪನೆಗೊಂಡರೆ ಅಚ್ಚರಿಪಡಬೇಕಾಗಿಲ್ಲ. ಏಕೆಂದರೆ ಅಭಿಮಾನಿಗಳು ಅವರ ಮೇಲಿಟ್ಟಿರುವ ಅಭಿಮಾನವೇ ಹಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+