ವಿಶೇಷ ಲೇಖನ; ಕೆಆರ್‌ಎಸ್ ಮತ್ತು ಮಂಡ್ಯದ ರಾಜಕೀಯ!
ಮಂಡ್ಯ, ಜುಲೈ 08; ಇದುವರೆಗೆ ಕಾವೇರಿ ನೀರು ಹಂಚಿಕೆ ವಿಚಾರ ಬಂದಾಗ ಕೆಆರ್‌ಎಸ್ ಜಲಾಶಯ ಸುದ್ದಿಯಾಗುತ್ತಿತ್ತು. ಆದರೆ ಇದೀಗ ರಾಜಕೀಯವಾಗಿ ವಿಚಾರಕ್ಕೆ ಜಲಾಶಯವನ್ನು ಎಳೆದು ತಂದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸದ್ಯಕ್ಕೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳು, ಮಂಡ್ಯದ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಮತ್ತು ಜೆಡಿಎಸ್ ನಾಯಕರ ನಡುವಿನ ಆರೋಪ ಪ್ರತ್ಯಾರೋಪಗಳನ್ನು ಗಮನಿಸಿದರೆ ಇದು ಬಿರುಕು ಬಿಟ್ಟಿರುವುದು ಜಲಾಶಯದಲ್ಲಿ ಅಲ್ಲ ರಾಜಕೀಯದಲ್ಲಿ ಎನ್ನುವುದು ಸ್ಪಷ್ಟವಾಗುತ್ತಿದೆ.
ಇಷ್ಟಕ್ಕೂ ಒಂದು ಜಲಾಶಯದಲ್ಲಿ ಬಿರುಕು ಕಾಣಿಸಿಕೊಳ್ಳುವುದೆಂದರೆ ಅದು ತಮಾಷೆಯ ಮಾತಲ್ಲ. ಒಂದು ವೇಳೆ ಮಾಹಿತಿ ಕೊರತೆ ಅಥವಾ ತಾವು ಹೇಳಬೇಕಾದ ರೀತಿಯಲ್ಲಿ ಹೇಳಲಾಗದೆ ಎಡವಿ ಸುಮಲತಾ ಅಂತಹ ಹೇಳಿಕೆ ನೀಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.
ಸಂಸದರ ಹೇಳಿಕೆಯನ್ನು ಗಮನಿಸಿದರೆ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಮುಂದೊಂದು ದಿನ ಜಲಾಶಯದಲ್ಲಿ ಬಿರುಕು ಕಾಣಿಸಬಹುದು ಎಂಬುದನ್ನು ಹೇಳಲು ಹೋಗಿ ಎಡವಟ್ಟು ಮಾಡಿಕೊಂಡರಾ? ಗೊತ್ತಿಲ್ಲ. ಆದರೆ ಅವರು ಆ ಬಗ್ಗೆ ಕೆಲವು ಮ್ಯಾಗಜಿನ್‌ಗಳಲ್ಲಿ ಬಂದಿದ್ದನ್ನು ಓದಿದ್ದೆ ಎಂದಿದ್ದಾರೆ. ಅದು ಆಚೆಗಿರಲಿ ಆದರೆ ಸಂಸದರ ಹೇಳಿಕೆಗೆ ಸರ್ಕಾರ ಸ್ಪಷ್ಟನೆ ನೀಡಬೇಕಾಗಿತ್ತು. ಆದರೆ ಆಗಿದ್ದೇ ಬೇರೆ.

ಎಚ್. ಡಿ. ಕುಮಾರಸ್ವಾಮಿ ಬಂದರು
ಈ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಏಕೆ ಎಂಟ್ರಿ ಕೊಟ್ಟರೋ ಗೊತ್ತಿಲ್ಲ. ಒಂದು ವೇಳೆ ಸಮಾಜದ ಕಳಕಳಿಯ ನಾಯಕನಾಗಿ ಇಂತಹ ಆಧಾರವಿಲ್ಲದ ಮತ್ತು ಜನರನ್ನು ಭಯಪಡಿಸುವ ಹೇಳಿಕೆ ನೀಡಬೇಡಿ ಎಂದು ಹೇಳಬಹುದಿತ್ತೇನೋ ಬದಲಿಗೆ ಅವರು ಅದ್ಯಾಕೆ ಅಷ್ಟೊಂದು ಕಠಿಣ ಪದವನ್ನು ಬಳಸಿದರೋ ಗೊತ್ತಿಲ್ಲ.

ಚುನಾವಣೆಯಲ್ಲಿ ಪುತ್ರನ ಸೋಲು
ಮೇಲ್ನೋಟಕ್ಕೆ ಸುಮಲತಾ ಅಂಬರೀಶ್ ರಾಜಕೀಯವಾಗಿ ಕಳೆದ ಲೋಕಸಭಾ ಚುನಾವಣೆ ನಂತರ ಬದ್ಧ ವೈರಿಯಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ತಮ್ಮ ಪುತ್ರನಿಗಾದ ಸೋಲನ್ನು ಅರಗಿಸಿಕೊಳ್ಳುವುದು ಕುಮಾರಸ್ವಾಮಿಗೆ ಕಷ್ಟವಾಗಿದೆ. ಹೀಗಾಗಿಯೇ ಅವರು ಮೇಲಿಂದ ಮೇಲೆ ಸಂಸದೆ ಸುಮಲತಾರನ್ನು ಹಳಿಯುತ್ತಲೇ ಬರುತ್ತಿದ್ದಾರೆ. ಒಂದು ರೀತಿಯಲ್ಲಿ ಹೇಳಬೇಕೆಂದರೆ ಅವರದು ಶೀತಲ ಸಮರ.

ಜೆಡಿಎಸ್ ಭದ್ರಕೋಟೆಯಾಗಿಲ್ಲ
ಮಂಡ್ಯ ಜೆಡಿಎಸ್ ಭದ್ರಕೋಟೆ ಎಂದೇ ಹೇಳುತ್ತಾ ಬರಲಾಗುತ್ತಿದೆ. ಆದರೆ ಮುಂದಿನ ಚುನಾವಣೆ ಹೊತ್ತಿಗೆ ಏನು ಬೇಕಾದರೂ ಆಗಬಹುದು. ಇನ್ನು ಮಂಡ್ಯದಲ್ಲಿ ಎಗ್ಗಿಲ್ಲದೆ ಗಣಿಗಾರಿಕೆ ನಡೆಯುತ್ತಿದ್ದು, ಅದರಲ್ಲೂ ಪಾಂಡವಪುರದ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಲ್ಲಿ ಜೆಡಿಎಸ್ ಶಾಸಕ ಸಿ. ಎಸ್. ಪುಟ್ಟರಾಜು ಸೇರಿದಂತೆ ಜೆಡಿಎಸ್ ಮುಖಂಡರ ದೊಡ್ಡಪಾಲಿದೆ. ಇಷ್ಟನ್ನು ಗಮನಿಸಿದರೆ ಸಾಕು ಕುಮಾರಸ್ವಾಮಿ ಆಕ್ರೋಶಕ್ಕೆ ಕಾರಣಗಳು ಸುಲಭವಾಗಿ ಅರ್ಥವಾಗಿ ಬಿಡುತ್ತದೆ.

ಗಣಿಗಾರಿಕೆ ಕೂಗು ಹೊಸದೇನಲ್ಲ
ಹಾಗೆ ನೋಡಿದರೆ ಕೆಆರ್‌ಎಸ್ ಜಲಾಶಯಕ್ಕೆ ಗಣಿಗಾರಿಕೆಯಿಂದ ತೊಂದರೆಯಾಗುತ್ತಿದೆ ಎಂಬ ಕೂಗು ಇವತ್ತು ನಿನ್ನೆಯದಾಗಿರಲಿಲ್ಲ. ರೈತರು, ಸಂಘ ಸಂಸ್ಥೆಗಳು ಗಣಿಗಾರಿಕೆಯನ್ನು ನಿಲ್ಲಿಸಬೇಕೆಂದು ಹೋರಾಟ ನಡೆಸಿದ್ದರೂ ಕೂಡ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ಸಿಕ್ಕಿರಲಿಲ್ಲ. ಆದರೆ ಸಂಸದೆ ಸುಮಲತಾ ಯಾವಾಗ ಎಂಟ್ರಿ ಕೊಟ್ಟು ಅಕ್ರಮ ಗಣಿಗಾರಿಕೆ ವಿರುದ್ಧ ಸೆಟೆದು ನಿಂತರೋ ಆಗಲೇ ರಾಜಕೀಯದಲ್ಲಿ ಅಸಮಾಧಾನದ ಬೆಂಕಿ ಹೊತ್ತಿ ಉರಿಯಲಾರಂಭಿಸಿತು. ಅದರಲ್ಲೂ ಬೇಬಿ ಬೆಟ್ಟದಲ್ಲಿ ಸುಮಾರು 70ಕ್ಕೂ ಹೆಚ್ಚು ಗಣಿಗಾರಿಕೆಯನ್ನು ಮುಚ್ಚಲಾಯಿತು. ಅದರ ಪರಿಣಾಮಗಳು ಹಲವು ನಾಯಕರು ರೊಚ್ಚಿಗೇಳುವಂತೆ ಮಾಡಿದೆ ಎನ್ನುವುದಂತು ಸತ್ಯ.

ಜಲಾಶಯಕ್ಕೆ ಯಾವುದೇ ಅಪಾಯವಿಲ್ಲ
ಸದ್ಯಕ್ಕೆ ಸರ್ಕಾರದ ಮಂತ್ರಿಗಳು, ಜಲಾಶಯಕ್ಕೆ ಸಂಬಂಧಿಸಿದಂತೆ ಇಂಜಿನಿಯರ್‌ಗಳು ಕೆಆರ್‌ಎಸ್ ಜಲಾಶಯ ಭದ್ರವಾಗಿದೆ. ಯಾವುದೇ ಬಿರುಕು ಬಿಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದು ಜನರ ಪಾಲಿಗೆ ಸಮಾಧಾನದ ಸಂಗತಿಯಾಗಿದೆ. ಆದರೆ ಇದೀಗ ಸುಮಲತಾ ಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಇದು ಸದ್ಯದ ಮಟ್ಟಿಗೆ ಉರಿಯುವ ಬೆಂಕಿಗೆ ತುಪ್ಪ ಹಾಕಿದಂತಾಗಿದೆ. ಮುಂದೇನಾಗಲಿದೆ? ಎಂಬುದನ್ನು ಕಾದು ನೋಡೋಣ.











Click it and Unblock the Notifications