ಕುಶಾಲನಗರ ಸೈನಿಕ ಶಾಲೆ ಅಭಿವೃದ್ಧಿಗೆ 5 ಕೋಟಿಗೆ ಮನವಿ
ಮಡಿಕೇರಿ, ಫೆಬ್ರವರಿ 16; ಕುಶಾಲನಗರದ ಸೈನಿಕ ಶಾಲೆಗೆ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಟಿ. ಸೋಮಶೇಖರ್ ಭೇಟಿ ನೀಡಿದರು. ಶಾಲೆಯ ಅಭಿವೃದ್ಧಿಗೆ 5 ಕೋಟಿ ರೂಪಾಯಿಗಳ ಪ್ರಸ್ತಾವನೆಗೆ ಮಂಜೂರಾತಿ ಕೊಡಬೇಕು ಎಂದು ಮನವಿ ಸಲ್ಲಿಸಲಾಯಿತು.
ಸಚಿವ ಎಸ್. ಟಿ. ಸೋಮಶೇಖರ್, ನಗರಾಭಿವೃದ್ಧಿ ಸಚಿವ ಬಿ. ಎ. ಬಸವರಾಜು ಹಾಗೂ ಶಾಸಕರಾದ ಅಪ್ಪಚ್ಚು ರಂಜನ್ ಅವರು ಸಹ ಸೈನಿಕ ಶಾಲೆಯ ಪ್ರಾಂಶುಪಾಲ ಜಿ. ಕಣ್ಣನ್ ಅವರ ಜೊತೆ ಕೆಲ ಕಾಲ ಚರ್ಚೆ ನಡೆಸಿದರು.
"2018ರಲ್ಲಿ ಹಾರಂಗಿ ಜಲಾಶಯದಿಂದ ನೀರು ಬಿಟ್ಟ ಸಂದರ್ಭದಲ್ಲಿ ಶಾಲಾ ಆವರಣಕ್ಕೆ ನುಗ್ಗಿ ಸಾಕಷ್ಟು ಹಾನಿಯಾಗಿತ್ತು. ಈ ಸಂಬಂಧ ಸರ್ಕಾರದ ಮಟ್ಟದಿಂದ ಯಾವುದಾದರೂ ಸಹಾಯವಾಗಬಹುದೇ?" ಎಂದು ಪ್ರಾಂಶುಪಾಲರಾದ ಕಣ್ಣನ್ ಅವರು ಸಹಕಾರ ಸಚಿವ ಅವರ ಗಮನಕ್ಕೆ ತಂದರು.

ಇದಕ್ಕೆ ತಕ್ಷಣ ಸ್ಪಂದಿಸಿದ ಸಚಿವರಾದ ಎಸ್. ಟಿ. ಸೋಮಶೇಖರ್, ನೀರಾವರಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಾದ ರಾಕೇಶ್ ಸಿಂಗ್ ಅವರಿಗೆ ದೂರವಾಣಿ ಕರೆ ಮೂಲಕ ಸಂಪರ್ಕಿಸಿ, ಪರಿಸ್ಥಿತಿಯನ್ನು ವಿವರಿಸಿದರು.
5 ಕೋಟಿ ರೂಪಾಯಿಗಳ ಪ್ರಸ್ತಾವನೆ; ನೀರಾವರಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ರಾಕೇಶ್ ಸಿಂಗ್ ಅವರ ಬಳಿ ಸೈನಿಕ ಶಾಲೆಗೆ ಆದ ತೊಂದರೆ ಬಗ್ಗೆ ಸಚಿವರಾದ ಸೋಮಶೇಖರ್ ಅವರು ವಿವರಣೆ ನೀಡುವ ಸಂದರ್ಭದಲ್ಲಿ, ಶಾಲೆಯ ಅಭಿವೃದ್ಧಿಗೆ 5 ಕೋಟಿ ರೂಪಾಯಿಗಳ ಪ್ರಸ್ತಾವನೆಗೆ ಮಂಜೂರಾತಿ ಕೊಡಬೇಕು ಎಂದು ಮನವಿ ಮಾಡಿದರು.












Click it and Unblock the Notifications