ಮೊಬೈಲ್ ಕರೆನ್ಸಿಗೆ ಬರುತ್ತಿದ್ದ ಮಹಿಳೆಯರಿಗೆ ಅಶ್ಲೀಲ ಮೆಸೇಜ್; ಜನರಿಂದ ಥಳಿತ
ಮಡಿಕೇರಿ, ಸೆಪ್ಟೆಂಬರ್ 17: ಮೊಬೈಲ್ ಕರೆನ್ಸಿ ಹಾಕಿಸಲು ಬರುವ ಯುವತಿಯರ ಮತ್ತು ವಿವಾಹಿತ ಮಹಿಳೆಯರ ಮೊಬೈಲ್ ಸಂಖ್ಯೆ ಪಡೆದು ಅಶ್ಲೀಲ ಮೆಸೇಜ್ ಗಳನ್ನು ಕಳಿಸುತ್ತಿದ್ದವನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಖಾಸಗಿ ಬಸ್ ನಿಲ್ದಾಣದ ಬಳಿ ಮೊಬೈಲ್ ಅಂಗಡಿ ಹೊಂದಿರುವ ಮೊಹಮದ್ ಮುದಾಸಿರ್ ಎಂಬಾತ ಮಹಿಳೆಯರಿಗೆ ಹೀಗೆ ಮೊಬೈಲ್ ನಲ್ಲಿ ಮೆಸೇಜ್ ಕಳುಹಿಸಿ ಕಿರುಕುಳ ನೀಡುವುದನ್ನೇ ಉದ್ಯೋಗವನ್ನಾಗಿ ಮಾಡಿಕೊಂಡಿದ್ದ. ಹದಿನೈದು ದಿನಗಳ ಹಿಂದೆ ವಿವಾಹಿತ ಮಹಿಳೆಯೊಬ್ಬರ ಮೊಬೈಲ್ ನಂಬರ್ ತಿಳಿದುಕೊಂಡಿದ್ದ ಈತ ರಾತ್ರಿ ಹೊತ್ತಿನಲ್ಲಿ ಅಶ್ಲೀಲ ಮೆಸೇಜ್ ಕಳಿಸಿ ಮಾನಸಿಕ ಹಿಂಸೆ ನೀಡಿದ್ದ.
ಮಹಿಳೆಯು ಮಡಿಕೇರಿ ನಗರ ರಕ್ಷಣಾ ವೇದಿಕೆಯ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದರು. ಕಾರ್ಯಕರ್ತರ ಸೂಚನೆಯಂತೆ ಮಹಿಳೆಯ ಮೊಬೈಲ್ ನಿಂದ ಬುಧವಾರ ಬೆಳಿಗ್ಗೆ ಹಳೆ ಆರ್ ಟಿಒ ಕಚೇರಿಯ ಬಳಿ ಬರುವಂತೆ ಮೆಸೇಜ್ ಕಳಿಸಲಾಯಿತು. ಖುಷಿಯಿಂದ ಬಂದ ಕಾಮುಕನಿಗೆ ಕಾರ್ಯಕರ್ತರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದರು. ಈತನ ವಿರುದ್ಧ ಮಡಿಕೇರಿ ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಈತನು ಫೇಸ್ ಬುಕ್ ನಿಂದಲೂ ಮಹಿಳೆಯರಿಗೆ ಅಸಭ್ಯ ಮೆಸೇಜ್ ಕಳಿಸುತಿದ್ದಾನೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.












Click it and Unblock the Notifications