Yuva Nidhi Scheme: ಅತಿ ಚಿಕ್ಕ ಜಿಲ್ಲೆಯಲ್ಲಿ ಯುವನಿಧಿ ಫಲಾನುಭವಿಗಳು ಎಷ್ಟು
ಮಡಿಕೇರಿ, ಡಿಸೆಂಬರ್ 29: ಕರ್ನಾಟಕದ ಕಾಂಗ್ರೆಸ್ ಸರ್ಕಾರ 5ನೇ ಗ್ಯಾರಂಟಿ ಯೋಜನೆಯಾಗಿ 'ಯುವನಿಧಿ' ಜಾರಿಗೊಳಿಸಿದೆ. ಸರ್ಕಾರದ ಈ ಪ್ರಮುಖ ಗ್ಯಾರಂಟಿ ಯೋಜನೆಗೆ 2023ರ ಡಿಸೆಂಬರ್ 26ರಂದು ನೋಂದಣಿ ಆರಂಭಿಸಲಾಗಿತ್ತು. ಈಗ ಯೋಜನೆಯು ಯಶಸ್ವಿಯಾಗಿ ನಡೆಯುತ್ತಿದ್ದು, ನಿರುದ್ಯೋಗಿ ಯುವಕ/ ಯುವತಿಯರಿಗೆ ಸಹಾಯಕವಾಗಿದೆ.
'ಯುವನಿಧಿ' ಯೋಜನೆಯಡಿ ಡಿಪ್ಲೋಮಾ ಮತ್ತು ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ಉದ್ಯೋಗಭತ್ಯೆ ನೀಡಲಾಗುತ್ತದೆ. ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಗೆ ಜನವರಿ 12, 2023ರಂದು ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು.

ಕೊಡಗು ಜಿಲ್ಲೆಯಲ್ಲಿ 1,262 ಮಂದಿ ನೋಂದಣಿ: ಕೊಡಗು ಕರ್ನಾಟಕದ ಚಿಕ್ಕ ಜಿಲ್ಲೆ ಕರ್ನಾಟಕ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಜಾರಿಗೊಳಿಸಲಾಗಿರುವ 'ಯುವನಿಧಿ' ಯೋಜನೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯ ಫಲಾನುಭವಿಗಳಿಗೆ ಪ್ರತಿ ತಿಂಗಳು ನಿರುದ್ಯೋಗಿ ಪದವೀದರರಿಗೆ 3 ಸಾವಿರ ರೂ. ಮತ್ತು ಡಿಪ್ಲೋಮಾ ತೇರ್ಗಡೆಯಾದವರಿಗೆ 1500 ರೂ. ಎರಡು ವರ್ಷಗಳವರೆಗೆ ನೀಡಲಾಗುತ್ತದೆ.
2023 ರಲ್ಲಿ ಪದವಿ, ಡಿಪ್ಲೋಮಾ ಉತ್ತೀರ್ಣರಾದ ವಿದ್ಯಾರ್ಥಿಗಳು, ಪದವಿ ಡಿಪ್ಲೋಮಾ ನಂತರ ಕನಿಷ್ಠ 6 ತಿಂಗಳ ವರೆಗೆ ಸರ್ಕಾರಿ/ ಖಾಸಗಿ ಉದ್ಯೋಗ ಹೊಂದಿಲ್ಲದವರು, ಸ್ವಯಂ ಉದ್ಯೋಗ ಹೊಂದಿಲ್ಲದವರು, ಉನ್ನತ ವಿದ್ಯಾಭ್ಯಾಸ ಮುಂದುವರೆಸದೆ ಇರುವವರು, ರಾಜ್ಯದಲ್ಲಿ ವಾಸವಿರುವ ಕನಿಷ್ಠ 6 ವರ್ಷದವರೆಗೆ ಪದವಿ/ ಡಿಪ್ಲೋಮಾ ಉತ್ತೀರ್ಣರಾದವರಿಗೆ ಯುವನಿಧಿ ಸೌಲಭ್ಯ ದೊರೆಯುತ್ತಿದೆ.
ಕೊಡಗು ಜಿಲ್ಲೆಯಲ್ಲಿ ಡಿಸೆಂಬರ್ 23ಕ್ಕೆ ಕೊನೆಗೊಂಡಂತೆ 1,262 ಮಂದಿ ಯೋಜನೆಯಡಿ ಹೆಸರು ನೋಂದಾಯಿಸಿದ್ದಾರೆ. ತಾಲೂಕುವಾರು ಗಮನಿಸಿದಾಗ ಮಡಿಕೇರಿ 325, ಕುಶಾಲನಗರ 201, ಪೊನ್ನಂಪೇಟೆ 145, ಸೋಮವಾರಪೇಟೆ 363 ಮತ್ತು ವಿರಾಜಪೇಟೆಯಲ್ಲಿ 222 ಮಂದಿ ಹೆಸರು ನೋಂದಾಯಿಸಿದ್ದಾರೆ. 1,262 ಮಂದಿಯಲ್ಲಿ 1,133 ಮಂದಿಗೆ ಡಿಬಿಟಿ ಮೂಲಕ ಪ್ರತಿ ತಿಂಗಳು ಹಣ ಪಾವತಿ ಆಗುತ್ತಿದೆ.
ಯುವನಿಧಿಯ 1133 ಫಲಾನುಭವಿಗಳಲ್ಲಿ ಸಾಮಾನ್ಯ ವರ್ಗದಲ್ಲಿ 947 ಮಂದಿ ಸೌಲಭ್ಯ ಪಡೆಯುತ್ತಿದ್ದು, 418 ಮಂದಿ ಪುರುಷ ಮತ್ತು 529 ಮಂದಿ ಮಹಿಳೆಯರು. 128 ಪರಿಶಿಷ್ಟ ಅಭ್ಯರ್ಥಿಗಳಲ್ಲಿ 44 ಪುರುಷರು, 84 ಮಹಿಳೆಯರು. ಪರಿಶಿಷ್ಟ ಪಂಗಡದಲ್ಲಿ 41 ಮಂದಿ ಇದ್ದು, 15 ಪುರುಷ, 26 ಮಹಿಳೆಯರು ಇದ್ದಾರೆ. ಒಟ್ಟಾರೆ ಪದವಿ ವಿಭಾಗದಲ್ಲಿ 1,116 ಮಂದಿ ಯುವನಿಧಿ ಸೌಲಭ್ಯ ಪಡೆಯುತ್ತಿದ್ದಾರೆ.
ಡಿಪ್ಲೋಮಾ ವಿಭಾಗದಲ್ಲಿ ಸಾಮಾನ್ಯ ವರ್ಗದಲ್ಲಿ 15 ಮಂದಿ ಇದ್ದು, 13 ಪುರುಷ, 2 ಮಹಿಳೆಯರು. ಹಾಗೆಯೇ ಪರಿಶಿಷ್ಟ ಜಾತಿಯಲ್ಲಿ ಒಬ್ಬ ಮಹಿಳೆ, ಪರಿಶಿಷ್ಟ ಪಂಗಡದಲ್ಲಿ ಒಬ್ಬ ಪುರುಷ ಒಟ್ಟು ಡಿಪ್ಲೋಮಾ ವಿಭಾಗದಲ್ಲಿ 17 ಮಂದಿ ಯುವನಿಧಿ ಸೌಲಭ್ಯ ಪಡೆಯುತ್ತಿದ್ದಾರೆ. ಒಟ್ಟಾರೆ 1,133 ಮಂದಿ ಯುವನಿಧಿ ಸೌಲಭ್ಯ ಪಡೆಯುತ್ತಿದ್ದಾರೆ.
ಯಾವುದೇ ಪದವಿ, ಡಿಪ್ಲೋಮಾ, ಸ್ನಾತಕೋತ್ತರ ಪದವಿ ಉತ್ತೀರ್ಣರಾಗಿ ಸರ್ಕಾರಿ, ಖಾಸಗಿ, ಸ್ವಯಂ ಉದ್ಯೋಗ ಹೊಂದಿಲ್ಲದವರು ಮತ್ತು ಉನ್ನತ ವಿದ್ಯಾಭ್ಯಾಸ ಮುಂದುವರೆಸದೆ ಇರುವ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಳ್ಳಲು http://sevasindhugs.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಉಚಿತವಾಗಿ ಕರ್ನಾಟಕ ಒನ್, ಗ್ರಾಮ ಒನ್ ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳ ಮುಖಾಂತರವೂ ಅರ್ಜಿ ಸಲ್ಲಿಸಬಹುದು.
ಯೋಜನೆಗೆ ಚಾಲನೆ ನೀಡಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, "ಯಾವ ಸಮಾಜ ಹಸಿದವರಿಗೆ ಅನ್ನ ನೀಡುವದಿಲ್ಲವೋ ಅಂತಹ ಧರ್ಮದ ಮೇಲೆ ನಂಬಿಕೆ ಇಲ್ಲ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಅವರ ಜನ್ಮದಿನದಂದು ಯುವಕ/ ಯುವತಿಯರು ಸಾಮಾಜಿಕ, ಆರ್ಥಿಕವಾಗಿ ಭ್ರಮನಿರಸವಾಗಬಾರದೆಂಬ ಮಹತ್ವಾಕಾಂಕ್ಷೆಯೊಂದಿಗೆ ಯುವನಿಧಿ ಕಾರ್ಯಕ್ರಮ ಮೂಲಕ ಶಕ್ತಿ ತುಂಬುವ ಕಾರ್ಯ ಪ್ರಾರಂಭಿಸಲಾಗಿದೆ" ಎಂದು ಹೇಳಿದ್ದರು.












Click it and Unblock the Notifications