ಮಡಿಕೇರಿ : ಮುಖ್ಯಮಂತ್ರಿಗಳ ಭೇಟಿ, 80ಕ್ಕೂ ಅಧಿಕ ಮರಗಳಿಗೆ ಕತ್ತರಿ!
ಕೊಡಗು, ಜುಲೈ 18 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಡಿಕೇರಿಗೆ ಭೇಟಿ ನೀಡಲಿದ್ದಾರೆ. ಮುಖ್ಯಮಂತ್ರಿಗಳ ಆಗಮನಕ್ಕೂ ಮೊದಲೇ 80 ಕ್ಕೂ ಅಧಿಕ ಮರಗಳಿಗೆ ಕೊಡಲಿ ಪೆಟ್ಟು ಬಿದ್ದಿದೆ.
ಕೊಡಗು ಜಿಲ್ಲಾಧಿಕಾರಿಗಳ ಸೂಚನೆ ಅನ್ವಯ ಮುಖ್ಯಮಂತ್ರಿಗಳ ಒಂದು ದಿನದ ಭೇಟಿಯಾಗಿ ಹಲವು ಮರಗಳನ್ನು ಕತ್ತರಿಸಲಾಗಿದೆ. ಅರಣ್ಯ ಇಲಾಖೆಗೆ ಮಾಹಿತಿ ನೀಡದೇ ಮರಗಳನ್ನು ಕಡಿದಿರುವುದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜು.19ರ ಗುರುವಾರ ಎಚ್.ಡಿ.ಕುಮಾರಸ್ವಾಮಿ ಅವರು ಮಡಿಕೇರಿಗೆ ಭೇಟಿ ನೀಡಲಿದ್ದಾರೆ. ಮಳೆಯಿಂದ ಆಗಿರುವ ಅನಾಹುತ ಹಾಗೂ ಪರಿಹಾರ ನೀಡುವ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ನಂತರ ಕಾವೇರಿ ಉಗಮ ಸ್ಥಾನ ತಲಕಾವೇರಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಕುಮಾರಸ್ವಾಮಿ ಆಗಮಿಸುವ ರಸ್ತೆಗಳಲ್ಲಿ ಇದ್ದ ಅಪಾಯಕಾರಿ ಮರಗಳನ್ನು ಮುಂಜಾಗ್ರತೆ ಕ್ರಮವಾಗಿ ಕಡಿಯಲಾಗಿದೆ. ಒಂದೇ ದಿನದಲ್ಲಿ 80ಕ್ಕೂ ಅಧಿಕ ಮರಗಳನ್ನು ಜಿಲ್ಲಾಡಳಿತದ ಸೂಚನೆಯಂತೆ ತೆರವು ಮಾಡಲಾಗಿದೆ.
ಮಡಿಕೇರಿಯ ರಸ್ತೆಗಳಲ್ಲಿ ಹಲವು ಅಪಾಯಕಾರಿ ಮರಗಳಿವೆ. ಕೆಲವು ಮರಗಳು ಭಾರೀ ಮಳೆ, ಗಾಳಿಯಿಂದಾಗಿ ರಸ್ತೆಗೆ ಬಿದ್ದಿವೆ. ಯಾವ ಮರಗಳನ್ನು ಕತ್ತರಿಸಬೇಕು? ಎಂದು ಅರಣ್ಯ ಇಲಾಖೆ ಸಿಬ್ಬಂದಿ ಜೊತೆ ಚರ್ಚಿಸದೇ ಕಡಿಯಲಾಗಿದೆ ಎಂದು ಇಲಾಖೆಯ ಸಿಬ್ಬಂದಿಗಳು ಆರೋಪ ಮಾಡುತ್ತಿದ್ದಾರೆ.
ಮಡಿಕೇರಿಯಲ್ಲಿ ಕುಮಾರಸ್ವಾಮಿ ಅವರು ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಈ ಸಭೆ ನಡೆಯುವ ಸ್ಥಳದ ಸಮೀಪ ಅಗ್ನಿ ಶಾಮಕ ಠಾಣೆಯನ್ನು ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗುತ್ತಿದೆ. ಅದಕ್ಕಾಗಿ ಮರಗಳನ್ನು ತೆರವು ಮಾಡಲಾಗಿದೆ.
ಕೊಡಗು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. 'ಜಿಲ್ಲಾಡಳಿತದ ಸೂಚನೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಅಪಾಯಕಾರಿಯಾಗಿದ್ದ ಮರಗಳನ್ನು ಮಾತ್ರ ತೆರವು ಮಾಡಲಾಗಿದೆ' ಎಂದು ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications