ಗೌರಿ ಲಂಕೇಶ್ ಹತ್ಯೆ: ಮಡಿಕೇರಿಯಲ್ಲಿ ಮತ್ತೋರ್ವ ಆರೋಪಿ ಬಂಧನ
ಮಡಿಕೇರಿ, ಜುಲೈ 25: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿಯಲ್ಲಿ ಇನ್ನೋರ್ವ ವ್ಯಕ್ತಿಯನ್ನು ವಿಶೇಷ ತನಿಖಾ ದಳದ ಸಿಬ್ಬಂದಿ ಬಂಧಿಸಿದ್ದಾರೆ.
ಜು.23 ರಂದು ಮಡಿಕೇರಿಯಲ್ಲಿ ರಾಜೇಶ್(50) ಎಂಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಅವರನ್ನು ಆಗಸ್ಟ್ 6 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 22 ರಂದು ಹುಬ್ಬಳ್ಳಿಯಲ್ಲಿ ಗಣೇಶ್ ವಿಸ್ಕಿನ್ ಮತ್ತು ಅಮಿತ್ ರಾಮಚಂದ್ರ ಬಡ್ಡಿ ಎಂಬ ಇಬ್ಬರನ್ನು ವಿಶೇಷ ತನಿಖಾ ದಳದ ಪೊಲಿಸರು ಬಂಧಿಸಿದ್ದರು.

ಈ ಇಬ್ಬರು ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ ಎನ್ನಲಾಗುತ್ತಿದ್ದು, ಗೌರಿ ಹತ್ಯೆಗೆ ಇವರೇ ಶಸ್ತ್ರಾಸ್ತ್ರ ಪೂರೈಸಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.
ಘಟನೆಗೆ ಸಂಬಂಧಿಸಿದಂತೆ ರಾಜೇಶ್ ನನ್ನೂ ಸೇರಿ ಈವರೆಗೆ 11 ಜನರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇವರಲ್ಲಿ ಹೊಟ್ಟೆ ಮಂಜ ಅಲಿಯಾಸ್ ನವೀನ್ ಕುಮಾರ್ ಮತ್ತು ಪರಶುರಾಮ್ ವಾಘ್ಮೊರೆ ಪ್ರಮುಖ ಆರೋಪಿಗಳು ಎನ್ನಲಾಗಿದೆ.
ಹುಬ್ಬಳ್ಳಿಯ ಗಣೇಶ್ ವಿಸ್ಕಿನ್, ಅಮಿತ್ ರಾಮಚಂದ್ರ ಬಡ್ಡಿ, ಸುಳ್ಯದ ಮೋಹನ್ ನಾಯಕ್, ವಿಜಯಪುರದ ಶ್ರೀನಿವಾಸ ಭಂಡಾರಿ ಮತ್ತು ರಘುನಾಥ, ಕೆ ಟಿ ನವೀನ್ ಕುಮಾರ್, ಪರಶುರಾಮ ವಾಘ್ಮೊರೆ, ಅಮೋಲ್ ಕಾಳೆ, ಅಮಿತ್ ದೆಗ್ವೇಕರ್, ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್ ಮತ್ತು ರಾಜೇಶ್ ಇದುವರೆಗೂ ಬಂಧನಕ್ಕೊಳಗಾದ 11 ಆರೋಪಿಗಳು.
2017 ರ ಸೆಪ್ಟೆಂಬರ್ 5 ರಂದು ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಅವರ ಮನೆಯಲ್ಲೇ ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ಹತ್ಯೆಗೆ ಸಂಬಂಧಿಸಿದಂತೆ ರಾಜ್ಯದಾದ್ಯಂತ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.











Click it and Unblock the Notifications