ಕೊಡಗು; ಗಿರಿಜನರೊಟ್ಟಿಗೆ ಮಾನವ ಹಕ್ಕು ಆಯೋಗದ ಸಂವಾದ
ಮಡಿಕೇರಿ, ಫೆಬ್ರವರಿ 02: ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ಎಲ್. ನಾರಾಯಣಸ್ವಾಮಿ ಸೇರಿ ಕೊಡಗು ಜಿಲ್ಲೆಯಲ್ಲಿ ಹಾಡಿಯ ಜನರ ಜೊತೆ ಸಂವಾದ ನಡೆಸಿದರು. ಅವರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಅಧ್ಯಕ್ಷ ಎಲ್. ನಾರಾಯಣಸ್ವಾಮಿ, ಆಯೋಗದ ಸದಸ್ಯರಾದ ಎಸ್. ಕೆ. ವಂಟಿಗೋಡಿ ಮತ್ತು ಟಿ. ಶ್ಯಾಮ್ ಭಟ್ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳುಗೋಡು ಯರವ ಸಮುದಾಯ ವಸತಿ ರಹಿತ ಕುಟುಂಬದವರ ಹಾಡಿಗೆ ಭೇಟಿ ನೀಡಿ ಕುಟುಂಬದವರ ಜೊತೆ ಸಂವಾದ ನಡೆಸಿದರು.

ಹಾಡಿಯ ಜನರಿಗೆ ನಿವೇಶನ, ಮನೆ ಇಲ್ಲದಿರುವುದು, ಕುಡಿಯುವ ನೀರು, ವಿದ್ಯುತ್, ಸಾರಿಗೆ ಸಂಪರ್ಕ ಇಲ್ಲದಿರುವುದು, ಟಾರ್ಪಲ್ ಕಟ್ಟಿಕೊಂಡು ಜೀವನ ಸಾಗಿಸುತ್ತಿರುವುದನ್ನು ಗಮನಿಸಿ ನೋವು ವ್ಯಕ್ತಪಡಿಸಿದರು. ಹಾಡಿ ಜನರ ಮಕ್ಕಳನ್ನು ಕಡ್ಡಾಯವಾಗಿ ವಸತಿ ಶಾಲೆಗೆ ಸೇರಿಸಿ, ವ್ಯಾಸಂಗ ಮಾಡಿಸುವಂತೆ ಸಲಹೆ ನೀಡಿದರು.
ಹತ್ತಿರದಲ್ಲಿಯೇ ಏಕಲವ್ಯ ಮಾದರಿ ವಸತಿ ಶಾಲೆ ಇದ್ದು, ಅಲ್ಲಿಗೆ ಸೇರ್ಪಡೆ ಮಾಡಬೇಕು. ಶಿಕ್ಷಣದಿಂದ ಯಾರೂ ಸಹ ವಂಚಿತರಾಗಬಾರದು. ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ. ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುವಂತೆ ಅಧ್ಯಕ್ಷರು ಸಲಹೆ ಕೊಟ್ಟರು.
ಅಹವಾಲು ಸ್ವೀಕಾರ; ಮಾನವ ಹಕ್ಕು ಆಯೋಗದ ಅಧ್ಯಕ್ಷ ಎಲ್. ನಾರಾಯಣಸ್ವಾಮಿ ವಿರಾಜಪೇಟೆ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಅಹವಾಲು ಸ್ವೀಕರಿಸುವುದಕ್ಕೂ ಮೊದಲು ಮಾತನಾಡಿದ ಅವರು, "ಬಾಳುಗೋಡು ಯರವ ಕುಟುಂಬದವರು ವಾಸ ಮಾಡುತ್ತಿರುವುದನ್ನು ಗಮನಿಸಿ ಒಂದು ರೀತಿ ವಿಚಲಿತನಾದೆ. ಭಾರತ ದೇಶ ಚಂದ್ರಯಾನ ಉಡಾವಣೆ ಮಾಡಿ ಯಶಸ್ಸುಗಳಿಸಿದೆ. ವಿಶ್ವದ ಜಿಡಿಪಿಯಲ್ಲಿ 10 ರೊಳಗಿನ ಸ್ಥಾನವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಆದರೆ ವಾಸಕ್ಕೆ ಯೋಗ್ಯವಾದ ನಿವೇಶನ, ಮನೆ, ವಿದ್ಯುತ್ ಹಾಗೂ ಸಾರಿಗೆ ಸಂಪರ್ಕ ಹೊಂದದೆ ಇರುವ ಎಷ್ಟೋ ಕಡುಬಡ ಕುಟುಂಬಗಳಿದ್ದು, ಭಾರತ ವಿಕಾಸ ಹೊಂದಿದೆಯೇ? ಎಂಬುದನ್ನು ಪ್ರತಿಯೊಬ್ಬರೂ ಅವಲೋಕನ ಮಾಡಬೇಕಿದೆ" ಎಂದರು.
"ಆದಿವಾಸಿ ಜನರಿಗೆ ಬೇಕಿರುವ ನಿವೇಶನ, ಮನೆ, ದೀಪ, ಹತ್ತಿರದಲ್ಲಿ ಅಂಗನವಾಡಿ, ಶಾಲೆ, ಇಂತಹ ಕನಿಷ್ಠ ಮೂಲ ಸೌಲಭ್ಯ ಇಲ್ಲದಿರುವುದು ನಮ್ಮ ವ್ಯವಸ್ಥೆ ಯಾವ ಮಟ್ಟಕ್ಕೆ ಇದೆ ಎಂಬುದನ್ನು ಪ್ರತಿಯೊಬ್ಬರೂ ಆತ್ಮವಲೋಕನ ಮಾಡಬೇಕಿದೆ" ಎಂದು ಬೇಸರ ವ್ಯಕ್ತಪಡಿಸಿದರು.
"ಬಾಳುಗೋಡು ಯರವ ಹಾಡಿಯ ಜನರಿಗೆ ಕನಿಷ್ಠ ಮೂಲ ಸೌಲಭ್ಯವನ್ನಾದರೂ ಕಲ್ಪಿಸಬೇಕು. ಸರ್ಕಾರದ ವ್ಯವಸ್ಥೆಯಲ್ಲಿರುವವರಿಗೆ ಎಲ್ಲಾ ರೀತಿಯ ಸೌಲಭ್ಯವನ್ನು ಕಲ್ಪಿಸುತ್ತಿದೆ. ಆದರೆ ಇಂತಹ ವಸತಿರಹಿತ ನಿರ್ಗತಿಕ ಕುಟುಂಬಗಳಿಗೆ ಸೌಲಭ್ಯ ಇಲ್ಲದಿರುವುದು ಬೇಸರ ತರಿಸುತ್ತದೆ. ಒಂದು ಪೈಸೆಯೂ ಸಹ ಅವರ ಜೇಬಿನಲ್ಲಿ ಇರುವುದಿಲ್ಲ. ಇಂತಹ ನಿರ್ಗತಿಕರಿಗೆ ಸೌಲಭ್ಯ ಕಲ್ಪಿಸುವುದು ಪ್ರಥಮ ಆದ್ಯತೆ ಆಗಬೇಕು" ಎಂದರು.
ಅಹವಾಲು ಸ್ವೀಕಾರದ ವೇಳೆ ಯರವ ಸಮುದಾಯದ ಶೋಭಾ ಮಾತನಾಡಿ, "ಜಿಲ್ಲೆಯ ವಿವಿಧ ಭಾಗದ ಲೈನ್‍ಮನೆಗಳಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ದೂಡುತ್ತಿದ್ದೆವು. ಸದ್ಯ ಕಳೆದ 6 ವರ್ಷಗಳಿಂದ ಬಾಳುಗೋಡು ಪೈಸಾರಿ ಜಾಗದಲ್ಲಿ ಟಾರ್ಪಲ್ ಹೊದಿಕೆ ನಿರ್ಮಾಣ ಮಾಡಿ ಚಳಿ, ಮಳೆ, ಗಾಳಿಯನ್ನು ಎದುರಿಸಿ ವಾಸ ಮಾಡುತ್ತಿದ್ದೇವೆ. ನಮಗೆ ನಿವೇಶನ ಹಕ್ಕು ಪತ್ರ ನೀಡಿಲ್ಲ, ಮನೆ ಇಲ್ಲ, ರಾತ್ರಿ ವೇಳೆಯಲ್ಲಿ ಹಾವುಗಳ ಭಯದಿಂದ ಎಚ್ಚರವಾಗಿ ನಿದ್ರೆಯಿಲ್ಲದೆ ಪ್ರತಿನಿತ್ಯ ದಿನ ಕಳೆಯುತ್ತಿದ್ದು, ಬದುಕು ಸಂಕಷ್ಟವಾಗಿದೆ" ಎಂದು ಅಳಲು ತೋಡಿಕೊಂಡರು.
"ಆಹಾರ ಇಲಾಖೆಯಿಂದ ನೀಡುವ 5 ಕೆಜಿ ಅಕ್ಕಿ ಸಾಲುತ್ತಿಲ್ಲ, ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಕೂಲಿ ಕೆಲಸ ಮಾಡಿದರೆ ಮಾತ್ರ ಊಟ. ಇಲ್ಲದಿದ್ದಲ್ಲಿ ಉಪವಾಸದಿಂದ ಮಲಗಬೇಕಾದ ಪರಿಸ್ಥಿತಿ ಇದೆ. ಕುಡಿಯುವ ನೀರನ್ನು 1 ಕಿಮೀ ದೂರದಿಂದ ಹೊತ್ತುಕೊಂಡು ಬರುತ್ತಿದ್ದೇವೆ. ವಿದ್ಯುತ್ ಸಂಪರ್ಕ ಇಲ್ಲದೆ ಪರಿತಪಿಸುತ್ತಿದ್ದೇವೆ. ಕೂಡಲೇ ಕುಡಿಯುವ ನೀರು ಒದಗಿಸಬೇಕು. ಹಾಗೆಯೇ ನಿವೇಶನ ಹಕ್ಕುಪತ್ರ ದೊರೆಯಬೇಕು. ಜೊತೆಗೆ ಮನೆ ನಿರ್ಮಿಸಿಕೊಡಬೇಕು" ಎಂದು ಮನವಿ ಮಾಡಿದರು.
ಸಂವಾದ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮಾನವ ಹಕ್ಕು ಆಯೋಗದ ಸದಸ್ಯ ಎಸ್. ಕೆ. ವಂಟಿಗೋಡಿ, "ಇಂದಿನಿಂದಲೇ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತದೆ. ಕಂದಾಯ ಇಲಾಖೆಯಿಂದ ಜಾಗವನ್ನು ತಾಲ್ಲೂಕು ಪಂಚಾಯಿತಿಗೆ ಒದಗಿಸಲಾಗಿದ್ದು, ಲೇಔಟ್ (ಭೂ ನಕಾಶೆ) ತಯಾರಾದ ನಂತರ ಹಕ್ಕುಪತ್ರ ವಿತರಣೆಗೆ ಕ್ರಮವಹಿಸಲಾಗುತ್ತದೆ. ಈ ಕೆಲಸಗಳು ಇನ್ನು 20 ದಿನದಲ್ಲಿ ಆಗಬೇಕಿದೆ. ಇಲ್ಲಿನ ಸ್ಥಿತಿಗತಿ ಹಾಗೂ ಪ್ರಗತಿ ಸಂಬಂಧ ಆಗಾಗ ಮಾಹಿತಿ ಪಡೆಯಲಾಗುತ್ತದೆ" ಎಂದು ಹೇಳಿದರು.
ಐಟಿಡಿಪಿ ಇಲಾಖೆಯ ಅಧಿಕಾರಿ ಹೊನ್ನೇಗೌಡ ಮಾತನಾಡಿ, "ಮಕ್ಕಳ ವಿಧ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ವಸತಿ ಶಾಲೆಗೆ ಸೇರ್ಪಡೆಗೆ ಕ್ರಮವಹಿಸಲಾಗುವುದು. ಯರವ ಸಮುದಾಯದವರಿಗೆ ಮನೆ ನಿರ್ಮಿಸಿಕೊಡುವ ನಿಟ್ಟಿನಲ್ಲಿ ಅಗತ್ಯ ಪ್ರಸ್ತಾವನೆ ಸಲ್ಲಿಸಲಾಗುವುದು" ಎಂದು ಮಾನವ ಹಕ್ಕು ಆಯೋಗಕ್ಕೆ ತಿಳಿಸಿದರು.
ಬಾಳುಗೋಡುವಿನಲ್ಲಿ ಯರವ ಹಾಡಿಯಲ್ಲಿ 21 ಕುಟುಂಬಗಳಿದ್ದು, ಪ್ರತಿ ಕುಟುಂಬಕ್ಕೂ ಕನಿಷ್ಠ 5 ಸೆಂಟ್ ಜಾಗ ನೀಡಬೇಕು ಎಂದು ಮನವಿ ಮಾಡಲಾಯಿತು. ಕುರಿ, ಕೋಳಿ, ಹಂದಿ ಸಾಕಾಣಿಕೆಗೆ ಅಗತ್ಯ ಸಹಕಾರ ನೀಡುವಂತೆ ಕೋರಿದರು.












Click it and Unblock the Notifications