ಎಡೆಯಿಟ್ಟು ಹಿರಿಯರನ್ನು ಪ್ರಾರ್ಥಿಸಿದ ಕೊಡವರು

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಅಕ್ಟೋಬರ್, 31: ದೀಪಾವಳಿ ಅಮಾವಾಸ್ಯೆ ಹಿನ್ನಲೆಯಲ್ಲಿ ಭಾನುವಾರ ಬೆಳಗ್ಗಿನಿಂದ ರಾತ್ರಿವರೆಗೆ ಕೊಡಗಿನಾದ್ಯಂತ ಕೊಡವರು ತಮ್ಮ ಹಿರಿಯರಿಗೆ ಎಡೆಯಿಟ್ಟು ಪ್ರಾರ್ಥನೆ ಸಲ್ಲಿಸಿದರು.

ಇತರೆಡೆ ಆಚರಿಸುವ ಪಿತೃಪಕ್ಷದಂತೆ ಕೊಡವ ಸಂಪ್ರದಾಯದಲ್ಲಿಯೂ ಹಿರಿಯರಿಗೆ ಎಡೆಯಿಡುವ ಸಂಪ್ರದಾಯವಿದ್ದು ಇದನ್ನು ಗುರುಕಾರೋಣ ಎಂದು ಕರೆಯಲಾಗುತ್ತದೆ.

Kodavas celebrate Deepavali by 'Gurukarona'

ಕೊಡಗಿನಲ್ಲಿ ನೂರಾರು ಕೊಡವ ಕುಟುಂಬಗಳಿದ್ದು, ತಮ್ಮ ಐನ್‍ಮನೆ(ಹಿರಿಯಮನೆ)ಯಲ್ಲಿ ಕುಟುಂಬಸ್ಥರೆಲ್ಲರೂ ಸೇರಿ ಸ್ವರ್ಗಸ್ಥರಾದ ಹಿರಿಯರಿಗೆ ಎಡೆ(ಮೀದಿ)ಯಿಟ್ಟು ಪೂಜೆ ಸಲ್ಲಿಸಿ ಪ್ರಾರ್ಥಿಸುವ ಸಂಪ್ರದಾಯವಿದೆ.

ಈ ಸಂಪ್ರದಾಯ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಕೊಡಗಿನಲ್ಲಿ ಇರುವವರು, ಹೊರಗೆ ಹೋಗಿ ನೆಲೆಸಿದವರು ಸಾಮಾನ್ಯವಾಗಿ ಈ ಸಂದರ್ಭ ತಮ್ಮ ಊರಿಗೆ ಆಗಮಿಸಿ ಹಿರಿಯಮನೆ(ಐನ್‍ಮನೆ)ಯಲ್ಲಿ ಸೇರುತ್ತಾರೆ. ಬಳಿಕ ಭಕ್ಷ್ಯಬೋಜನ(ಕೊಡಗಿನ ಸಂಪ್ರದಾಯಿಕ ಅಡುಗೆ)ಮಾಡಿ, ಎಡೆಯಿಡುತ್ತಾರೆ.

ಈ ಸಂದರ್ಭ ಹಿರಿಯರಿಗೆ ಪ್ರಿಯವಾಗಿದ್ದ ತಿಂಡಿಗಳು, ಮದ್ಯ ಮೊದಲಾದವುಗಳನ್ನು ಬಡಿಸಲಾಗುತ್ತದೆ. ಈ ಎಡೆಯಿಡುವ ಕಾರ್ಯಕ್ರಮ ಕೆಲವರು ಐನ್‍ಮನೆಯಲ್ಲಿ ನಡೆಸಿದರೆ ಇನ್ನು ಕೆಲವರು ಹಿರಿಯರ ಪ್ರಾರ್ಥನೆಗೆಂದೇ ಕಟ್ಟಲಾದ ಕಟ್ಟಡವಾದ ಕೈಮಡದಲ್ಲಿ ನಡೆಸುತ್ತಾರೆ.

ಬಳಿಕ ಕುಟುಂಬಸ್ಥರೆಲ್ಲರೂ ಒಂದೆಡೆ ಕಲೆತು ಉಭಯಕುಶಲೋಪರಿ ನಡೆಯುತ್ತದೆ. ಬಳಿಕ ಬೋಜನ ನಡೆಯುತ್ತದೆ. ಎಲ್ಲರೂ ಒಂದೆಡೆ ಕಲೆತು ಖುಷಿ ಪಡುತ್ತಾರೆ.

ದೀಪಾವಳಿ ಅಮಾವಾಸ್ಯೆಯಂದೇ ಎಲ್ಲರೂ ಗುರುಕಾರೋಣ ನಡೆಸುವುದಿಲ್ಲ. ವರ್ಷಕ್ಕೊಮ್ಮೆ ಅವರಿಗೆ ಅನುಕೂಲವಾದ ದಿನಗಳಲ್ಲಿ ಕುಟುಂಬಸ್ಥರು ತೀರ್ಮಾನಿಸಿ ದಿನಾಂಕ ನಿಗದಿ ಮಾಡುತ್ತಾರೆ. ಈ ಬಾರಿ ರಜೆಗಳು ಸಾಲಾಗಿ ಬಂದಿದ್ದರಿಂದ ಹೆಚ್ಚಿನ ಕುಟುಂಬಗಳು ದೀಪಾವಳಿ ಅಮಾವಾಸ್ಯೆಯಲ್ಲೇ ಗುರುಕಾರೋಣ ನಡೆಸಿರುವುದು ಗಮನಾರ್ಹವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Kodava community celebrated Deepavali by 'Gurukarona' on Sunday (Oct 30) Ain Mane (traditional ancestral house) belonging to the Mukkatira family members celebrate this 'Gurukarona'for remembering elder persons of family
Please Wait while comments are loading...