ಕೊಡವ ಹಾಕಿ ಉತ್ಸವಕ್ಕೆ ಸಜ್ಜಾದ ಕೊಡಗು: ಎಷ್ಟು ದಿನ? ಎಷ್ಟು ತಂಡ?
ಮಡಿಕೇರಿ, ಮಾರ್ಚ್ 27: ಕಳೆದ ಒಂದು ವರ್ಷದಿಂದ ಹಾಕಿ ಪ್ರೇಮಿಗಳು ಮತ್ತು ಆಟಗಾರರು ಕಾಯುತ್ತಿದ್ದ ಕೊಡವ ಹಾಕಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಹಾಕಿ ಉತ್ಸವಕ್ಕಾಗಿ ಕೊಡಗು ಅದರಲ್ಲೂ ಹಾಕಿ ಆಯೋಜಕ ಮುದ್ದಂಡ ಕುಟುಂಬ ಸರ್ವ ರೀತಿಯಲ್ಲಿಯೂ ಸನ್ನದ್ಧವಾಗಿದೆ. ಈಗಾಗಲೇ ಪಂದ್ಯಾವಳಿಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಮಾ.28ರಿಂದ ಆರಂಭವಾಗಿ ಏ.27ರವರೆಗೆ ಪಂದ್ಯಾವಳಿ ನಡೆಯಲಿದೆ. ಇದನ್ನು ಪಂದ್ಯಾವಳಿಗಿಂತ ಹೆಚ್ಚಾಗಿ ಉತ್ಸವದಂತೆ ಜನ ನೋಡುತ್ತಿರುವುದರಿಂದ ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲಿ ಮುನ್ನಡೆಯುತ್ತಿದೆ.
ಇನ್ನು ಈ ಬಾರಿ ನಡೆಯುವ ಮುದ್ದಂಡ ಕಪ್ ಹಾಕಿ ಉತ್ಸವಕ್ಕೆ ಸಂಬಂಧಿಸಿದಂತೆ ಮುದ್ದಂಡ ಹಾಕಿ ಹಬ್ಬದ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ ಅವರು ಹಲವು ರೀತಿಯ ಮಾಹಿತಿಗಳನ್ನು ನೀಡಿದ್ದಾರೆ. ಅದರಂತೆ ಹಾಕಿ ಪಂದ್ಯಾವಳಿ ನಡೆಯುವ ಮಡಿಕೇರಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯಲಿದ್ದು, ಈ ಬಾರಿ ಕೊಡವ ಕುಟುಂಬಗಳ ದಾಖಲೆಯ 396 ತಂಡಗಳು ನೋಂದಾಯಿಸಿಕೊಂಡಿವೆ.

ಪಂದ್ಯಾವಳಿಯ ವಿಜೇತ ತಂಡಕ್ಕೆ ರೂ.5 ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ 3 ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ, ಸೆಮಿಫೈನಲ್‌ಗೆ ಬಂದ ಎರಡು ತಂಡಗಳಿಗೆ ತಲಾ 1 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಕೊಡವ ಹಾಕಿ ಉತ್ಸವದ ಜನಕರಾದ ಕರಡ ಗ್ರಾಮದ ಪಾಂಡಂಡ ಕುಟುಂಬದ ಐನ್'ಮನೆಯಲ್ಲಿ ಮುದ್ದಂಡ ಹಾಕಿ ಉತ್ಸವದ ಕ್ರೀಡಾಜ್ಯೋತಿಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಕೊಡವ ಹಾಕಿ ಹಬ್ಬದ ಜನಕ ದಿ.ಪಾಂಡಂಡ ಕುಟ್ಟಪ್ಪ ಅವರ ಪತ್ನಿ ಲೀಲ ಕುಟ್ಟಪ್ಪ ಉದ್ಘಾಟಿಸಿದ್ದು, ಇದುವರೆಗೆ ಹಾಕಿ ಉತ್ಸವ ಆಯೋಜಿಸಿದ್ದ 24 ಕುಟುಂಬಗಳನ್ನು ಸ್ಮರಿಸುವ ಮತ್ತು ಗೌರವದಿಂದ ಕಾಣುವ ಉದ್ದೇಶದಿಂದ ಎಲ್ಲಾ ಐನ್'ಮನೆಗಳಿಗೆ ಮ್ಯಾರಥಾನ್ ಮೂಲಕ ಕ್ರೀಡಾಜ್ಯೋತಿಯನ್ನು ಕೊಂಡೊಯ್ಯುತ್ತಿರುವುದು ಈ ಬಾರಿಯ ವಿಶೇಷ.

ಜಿಲ್ಲೆಯಾದ್ಯಂತ ಸಂಚರಿಸುತ್ತಿರುವ ಕ್ರೀಡಾಜ್ಯೋತಿ
ಈಗಾಗಲೇ ಪಾಂಡಂಡ ಕುಟುಂಬದ ಐನ್ ಮನೆಯ ನಂತರ ಕಿರುಗೂರು ಚೆಪ್ಪುಡಿರ, ಅಲಮೇಂಗಡ, ಟಿ.ಶೆಟ್ಟಿಗೇರಿ- ಒಂಟಿಯಂಗಡಿ ಮಚ್ಚಮಾಡ, ಚೆಕ್ಕೇರ, ಕಳ್ಳಿಚಂಡ, ಕುಂದ ಮನೆಯಪಂಡ, ನಾಂಗಾಲ ಕುಪ್ಪಂಡ, ವಿರಾಜಪೇಟೆ ಕಾವಾಡಿ ನೆಲ್ಲಮಕ್ಕಡ, ಚೆಂಬೆಬೆಳ್ಳೂರು ಈಶ್ವರ ದೇವಾಲಯ, ಮಂಡೇಪAಡ, ಕುಕ್ಲೂರು ತಾತಂಡ, ವಿರಾಜಪೇಟೆ ಕೊಡವ ಸಮಾಜ, ಅರಮೇರಿ ಮುದ್ದಂಡ, ಐಚೆಟ್ಟಿರ, ಕಾಕೋಟುಪರಂಬು ಮಂಡೇಟಿರ, ಬಲ್ಲಚಂಡ, ಕರಡ ಕೋಡಿರ, ಬಾವಲಿ ಬಿದ್ದಂಡ ಐನ್ ಮನೆಗಳಿಗೆ ಕೊಡಗಿನ ಮ್ಯಾರಥಾನ್ ಪಟುಗಳು ಕ್ರೀಡಾಜ್ಯೋತಿಯೊಂದಿಗೆ ಸಾಗಿದ್ದು, ಗೌರವ ಸಲ್ಲಿಸಲಾಗಿದೆ ಎಂದು ಹೇಳಿದರು.
ಮಾ.27ರಂದು ಬಾವಲಿ ಮಾದಂಡ, ಕಲಿಯಂಡ, ನೆಲ್ಜಿ ಮಾಳೆಯಂಡ, ಅಪ್ಪಚೆಟ್ಟೋಳಂಡ, ನಾಪೋಕ್ಲು ಕುಲ್ಲೇಟಿರ, ಬಿದ್ದಾಟಂಡ, ಕೊಳಕೇರಿ ಕುಂಡ್ಯೋಳಂಡ, ಮಡಿಕೇರಿ ಶಾಂತೆಯಂಡ ಮೂಲಕ ಮಾ.28ರಂದು ಜನರಲ್ ತಿಮ್ಮಯ್ಯ ವೃತ್ತ ತಲುಪಲಿದೆ. ನಂತರ ಬೆಳಿಗ್ಗೆ 9ಗಂಟೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಿಂದ ಮುಖ್ಯ ರಸ್ತೆಯ ಮೂಲಕ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನಕ್ಕೆ ಬೃಹತ್ ಮೆರವಣಿಗೆಯ ಮೂಲಕ ಕ್ರೀಡಾಜ್ಯೋತಿಯನ್ನು ಕೊಂಡೊಯ್ಯಲಾಗುವುದು ಎಂದು ತಿಳಿಸಿದ್ದಾರೆ.

ಮೈದಾನದಲ್ಲಿ ಸೆಣಸಾಟ ನಡೆಸಲಿರುವ ಮಹಿಳಾ ತಂಡ
ಮಾ.28ರಂದು ಉದ್ಘಾಟನಾ ಸಮಾರಂಭದ ಪ್ರಯುಕ್ತ ಪ್ರದರ್ಶನ ಪಂದ್ಯ ಮಧ್ಯಾಹ್ನ 12.30 ಗಂಟೆಗೆ ಕೊಡಗು ಜಿಲ್ಲಾಡಳಿತ ಹಾಗೂ ಆಯೋಜಕ ಕುಟುಂಬ ಮತ್ತು ಕೊಡವ ಹಾಕಿ ಅಕಾಡೆಮಿ ಇಲೆವೆನ್ ಹಾಗೂ ಕರ್ನಾಟಕ ಇಲೆವೆನ್ ತಂಡದ ನಡುವೆ ನಡೆಯಲಿದೆ. ಮೈದಾನದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಮಂದಿ ಕುಳಿತುಕೊಳ್ಳಬಹುದಾದ ಗ್ಯಾಲರಿ ನಿರ್ಮಾಣ ಮಾಡಲಾಗಿದ್ದು, 35 ಪುಡ್ ಸ್ಟಾಲ್‌ಗಳು ಇರಲಿದೆ.
ಬೆಳ್ಳಿ ಮಹೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಮುದ್ದಂಡ ಹಾಕಿ ಉತ್ಸವದಲ್ಲಿ ಮಹಿಳಾ ತಂಡಗಳ ನಡುವೆ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಈಗಾಗಲೇ 40 ತಂಡಗಳು ನೋಂದಾಯಿಸಿಕೊಂಡಿವೆ. ನೋಂದಣಿಯ ಕೊನೆಯ ದಿನಾಂಕ ಏ.10 ಆಗಿರುವುದರಿಂದ ಮತ್ತಷ್ಟು ತಂಡಗಳು ಸೇರ್ಪಡೆಗೊಳ್ಳಲಿವೆ. ಮೂರನೇ ಮೈದಾನದಲ್ಲಿ ಮಹಿಳಾ ಹಾಕಿ ಪಂದ್ಯಾವಳಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ವಿಜೇತರಾದ ಮಹಿಳಾ ತಂಡಕ್ಕೆ ರೂ.2 ಲಕ್ಷ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 1 ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಸೆಮಿಫೈನಲ್ ಸಂದರ್ಭ ಭಾರತೀಯ ಮಹಿಳಾ ಹಾಕಿ ತಂಡದ ನಾಯಕಿ ಲಾಲ್ ರಿಮ್ ಸಿಯಾಮಿ ಅವರು ಆಗಮಿಸಿದ ಹಾಕಿ ಕ್ರೀಡೆಯ ಕುರಿತು ಮಾಹಿತಿ ನೀಡಲಿದ್ದಾರೆ. ಭಾರತೀಯ ಪುರುಷರ ಹಾಕಿ ತಂಡದ ನಾಯಕ ಹಾಗೂ ಒಲಂಪಿಯನ್ ಮನ್ ಪ್ರೀತ್ ಸಿಂಗ್ ಕೂಡ ಪಂದ್ಯಾವಳಿಯ ಸಂದರ್ಭ ಪಾಲ್ಗೊಳ್ಳಲಿದ್ದಾರೆ. ಸೆಮಿ ಫೈನಲ್ ಪಂದ್ಯಾವಳಿಗೆ ಹಿರಿಯ ರಾಜಕರಣಿ ಅಜಯ್ ಮಕೆನ್ ಆಗಮಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಕೊಡವ, ಕೊಡವೇತರರನ್ನು ಆಹ್ವಾನಿಸಿದ ಆಯೋಜಕರು
ಮುದ್ದಂಡ ಹಾಕಿ ಹಬ್ಬದ ಉಪಾಧ್ಯಕ್ಷ ಡೀನ್ ಬೋಪಣ್ಣ ಮಾತನಾಡಿ, ಪಂದ್ಯಾವಳಿ ವೀಕ್ಷಣೆಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಸೂಕ್ತವಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ವಿಧಾನ ಪರಿಷತ್ ಸದಸ್ಯ ಸುಜಾಕುಶಾಲಪ್ಪ ಅವರ ಅನುದಾನದಲ್ಲಿ 1,500 ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
ದಿಲೀಪ್ ನಾಚಪ್ಪ ಹಾಗೂ ಯಲದಾಳು ಮನೋಜ್ ಬೋಪಯ್ಯ ಅವರ ಜಾಗದಲ್ಲಿ 1,000 ವಾಹನದ ನಿಲುಗಡೆ ವ್ಯವಸ್ಥೆ ಮಾಡಲಾಗಿದ್ದು, ಸುಮಾರು 2,500 ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರೆ, ಮುದ್ದಂಡ ಒಕ್ಕದ ಅಧ್ಯಕ್ಷ ಮುದ್ದಂಡ ಬಿ.ದೇವಯ್ಯ ಮಾತನಾಡಿ, ಮುದ್ದಂಡ ಕಪ್ ಹಾಕಿ ಉತ್ಸವವು ಜಿಲ್ಲೆಯಲ್ಲಿ ದಸರಾ ಹಬ್ಬದಂತೆ ನಡೆಯಲಿದ್ದು, ಕೊಡವ ಜನಾಂಗ ಹಾಗೂ ಕೊಡವೇತರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.












Click it and Unblock the Notifications