ಕೊಡಗು ಜಿಲ್ಲೆಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣ
ಮಡಿಕೇರಿ, ಜೂನ್ 22; ಕೊಡಗು ಜಿಲ್ಲೆಯ ವೈದ್ಯಕೀಯ ಕ್ಷೇತ್ರಕ್ಕೆ ಸಂಸದರಿಂದ ಮಹತ್ವದ ಕೊಡುಗೆ ಘೋಷಣೆಯಾಗಿದೆ. ಜಿಲ್ಲೆಯಲ್ಲಿ ಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣಗೊಳ್ಳಲಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಮಂಗಳವಾರ ಸಂಸದರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. "ಪ್ರತಿ ನಿಮಿಷಕ್ಕೆ 1000 ಲೀಟರ್ ಆಕ್ಸಿಜನ್ ಉತ್ಪಾದನೆ ಮಾಡುವ ಘಟಕ ನಿರ್ಮಾಣವಾಗಲಿದ್ದು, ಇದಕ್ಕೆ 1.50 ಕೋಟಿ ರೂ. ವೆಚ್ಚವಾಗಲಿದೆ" ಎಂದರು.
"ಈ ಘಟಕವು ಮುಂದಿನ ಜುಲೈ 15ರೊಳಗಾಗಿ ನಿರ್ಮಾಣಗೊಳ್ಳಲಿದ್ದು ರಾಷ್ಟ್ರೀಯ ಹೆದ್ದಾರಿ ನಿಗಮವು ಇದರ ನಿರ್ಮಾಣ ಮಾಡಲಿದೆ. ನಿಗಮ ಈಗಾಗಲೇ ದೇಶಾದ್ಯಂತ ಇಂತಹ 1200 ಘಟಕಗಳನ್ನು ಸ್ಥಾಪಿಸಲಿದೆ" ಎಂದು ತಿಳಿಸಿದರು.

"ಪುಟ್ಟ ಜಿಲ್ಲೆಯಾದ ಕೊಡಗಿನ ಅಗತ್ಯತೆ ಮನಗಂಡು ಪ್ರಧಾನಿ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲಾ ಅಗತ್ಯತೆಗಳನ್ನು ಪೂರೈಸುತ್ತಿದ್ದಾರೆ. ಸ್ಥಳೀಯ ಶಾಸಕರಾದ ಕೆ. ಜಿ. ಬೋಪಯ್ಯ, ಎಂ. ಪಿ. ಅಪ್ಪಚ್ಚು ರಂಜನ್, ಎಂ. ಪಿ. ಸುನೀಲ್ ಸುಬ್ರಹ್ಮಣಿ ಬೇಡಿಕೆಯ ಧ್ವನಿಗೆ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಕ್ಕಿದೆ" ಎಂದು ಪ್ರತಾಪ್ ಸಿಂಹ ಹೇಳಿದರು.
"ಜಿಲ್ಲೆಯಲ್ಲಿ 13 ಸಾವಿರ ಲೀಟರ್ ಉತ್ಪಾದನಾ ಸಾಮರ್ಥ್ಯದ ಆಕ್ಸಿಜನ್ ಪ್ಲಾಂಟ್ ಈಗಾಗಲೇ ಇದ್ದು, ಈ ಘಟಕ ಸ್ಥಾಪನೆ ಆದರೆ ಇಲ್ಲಿಯೇ ನಿಮಿಷಕ್ಕೆ 1 ಸಾವಿರ ಲೀಟರ್ ಆಕ್ಸಿಜನ್ ಉತ್ಪಾದನೆ ಮಾಡಬಹುದು. ಇದರಿಂದ ಬೇರೆ ಊರುಗಳಿಂದ ಆಕ್ಸಿಜನ್ ಬರಲಿ ಎಂದು ಕಾಯುವುದು ತಪ್ಪಲಿದೆ" ಎಂದರು.
"ಮುಂದೆ ಸೋಮವಾರಪೇಟೆಯಲ್ಲೂ ಘಟಕ ಸ್ಥಾಪನೆಯಾದರೆ ಕೊಡಗಿನ ಆಕ್ಸಿಜನ್ ಬೇಡಿಕೆಯನ್ನು ಇಲ್ಲೇ ಪೂರೈಸಿಕೊಳ್ಳಲು ಸಾಧ್ಯವಾಗುತ್ತದೆ" ಎಂದು ಸಂಸದರು ತಿಳಿಸಿದರು.












Click it and Unblock the Notifications