ಸೈನಿಕ ಶಾಲೆ ವಿದ್ಯಾರ್ಥಿ ಸಾವು: ಕೊಲೆ ಆರೋಪ ಹೊರಿಸಿದ ಪೋಷಕರು
ಮಡಿಕೇರಿ, ಜೂನ್ 25: ಶನಿವಾರ ಸಂಭವಿಸಿದ ಕೊಡಗಿನ ಕುಶಾಲನಗರದ ಕೂಡಿಗೆಯಲ್ಲಿರುವ ಸೈನಿಕ ಶಾಲೆಯ ವಿದ್ಯಾರ್ಥಿಯ ಅನುಮಾನಾಸ್ಪದ ಸಾವಿನ ಪ್ರಕರಣ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ.
ಸೈನಿಕ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಚಿಂಗಪ್ಪ(14) ಅನುಮಾನಾಸ್ಪದವಾಗಿ ಸಾವನ್ನಪ್ಪಿದಾತ. ಈತ ಸೋಮವಾರಪೇಟೆ ತಾಲೂಕಿನ ಮಾದಾಪುರ ಗ್ರಾಮದ ಮೂವತ್ತೊಕ್ಲು ಗ್ರಾಮದ ನಿವಾಸಿ ಹಾಗೂ ಅದೇ ಶಾಲೆಯಲ್ಲಿ ಕೋಚ್ ಆಗಿರುವ ಎನ್.ಟಿ.ಪೂವಯ್ಯ ಎಂಬುವವರ ಪುತ್ರ.

ಶೌಚಾಲಯದಲ್ಲಿ ಕುಸಿದು ಬಿದ್ದಿದ್ದ
ಶನಿವಾರ ಸಂಜೆ ವಿದ್ಯಾರ್ಥಿ ಚಿಂಗಪ್ಪ ಪ್ರಯೋಗಾಲಯದ ಶೌಚಾಲಯದಲ್ಲಿ ಕುಸಿದು ಬಿದ್ದಿದ್ದ. ಇದನ್ನು ನೋಡಿದ ಇತರೆ ವಿದ್ಯಾರ್ಥಿಗಳು ಶಿಕ್ಷಕರಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಶಾಲಾ ಆಂಬ್ಯುಲೆನ್ಸ್ ನಲ್ಲಿ ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು. ಅಲ್ಲಿದ್ದ ವೈದ್ಯಾಧಿಕಾರಿ ಡಾ. ರವಿಚಂದನ್ ಪರಿಶೀಲಿಸಿದಾಗ ಚಿಂಗಪ್ಪ ಅದಾಗಲೇ ಮೃತಪಟ್ಟಿರುವುದು ಖಚಿತವಾಗಿತ್ತು.
ವಿದ್ಯಾರ್ಥಿ ಚಿಂಗಪ್ಪನ ತಂದೆ ಅದೇ ಶಾಲೆಯಲ್ಲಿ ಹಾಕಿ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರೂ ಅವರಿಗೆ ಸರಿಯಾದ ಮಾಹಿತಿ ನೀಡದೆ ಜತೆಗೆ ಶೌಚಾಲಯದಲ್ಲಿ ಕುಸಿದು ಬಿದ್ದಿರುವ ವಿಚಾರವನ್ನು ತಿಳಿಸದೆ ಮುಚ್ಚಿಟ್ಟು, ನಿಮ್ಮ ಮಗ ಶಾಲೆಯಲ್ಲಿ ಕಾಣುತ್ತಿಲ್ಲ ಹುಡುಕಿಕೊಂಡು ಬನ್ನಿ ಎಂದು ಹೇಳಿ ಅವರು ಹೋಗುತ್ತಿದ್ದಂತೆ ಶಾಲೆಯಿಂದ ಶಾಲಾ ವಾಹನದಲ್ಲಿ ವಿದ್ಯಾರ್ಥಿ ಚಿಂಗಪ್ಪನ ಶವವನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ ಎನ್ನುವುದು ಮೃತ ವಿದ್ಯಾರ್ಥಿಯ ತಂದೆ ಪೂವಯ್ಯ ಅವರ ಆರೋಪವಾಗಿದೆ.

ಪೋಷಕರು, ಸಂಬಂಧಿಕರಿಂದ ಪ್ರತಿಭಟನೆ
ಈ ನಡುವೆ ವಿದ್ಯಾರ್ಥಿ ಚಿಂಗಪ್ಪ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಪೋಷಕರು ಹಾಗೂ ಸಂಬಂಧಿಕರು ಮತ್ತು ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಆಸ್ಪತ್ರೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾರ್ಥಿ ಚಿಂಗಪ್ಪನ ಸಾವು ಅಸಹಜ ಸಾವಲ್ಲ. ಇದು ಕೊಲೆ ಎಂದು ಆರೋಪಿಸಿ, ಈ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಕೂಡಿಗೆ ಆಸ್ಪತ್ರೆಗೆ ಜಿಲ್ಲಾಧಿಕಾರಿಗಳು ಹಾಗೂ ಸೈನಿಕ ಶಾಲಾ ಪ್ರಾಂಶುಪಾಲರು ಕೂಡಲೇ ಆಗಮಿಸಬೇಕು ಅಲ್ಲಿಯವರೆಗೆ ಶವವನ್ನು ತೆಗೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಅಲ್ಲದೆ ಸೈನಿಕ ಶಾಲೆ ಸಿಬ್ಬಂದಿಗಳ ವಿರುದ್ದ ಧಿಕ್ಕಾರ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೊಂದೆಡೆ ವಿದ್ಯಾರ್ಥಿ ಚಿಂಗಪ್ಪನಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಕೊಂದಿದ್ದಾರೆ ಎಂದು ಸೈನಿಕ ಶಾಲೆಯ ಉಪ ಪ್ರಾಂಶುಪಾಲರು ಸೇರಿದಂತೆ ಐವರ ವಿರುದ್ದ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಮೃತ ವಿದ್ಯಾರ್ಥಿ ತಂದೆ ಎನ್.ಟಿ.ಪೂವಯ್ಯ ದೂರು ನೀಡಿದ್ದಾರೆ.

ನಾಲ್ವರ ವಿರುದ್ಧ ಪ್ರಕರಣ ದಾಖಲು
ಪೂವಯ್ಯ ಅವರ ದೂರಿನ ಮೇರೆಗೆ ಠಾಣಾಧಿಕಾರಿ ನವೀನ್ ಗೌಡ ಅವರು ಸೈನಿಕ ಶಾಲೆ ಉಪ ಪ್ರಾಂಶುಪಾಲರಾದ ಸೀಮಾ ತ್ರಿಪಾಠಿ, ಕನ್ನಡ ಶಿಕ್ಷಕ ಮಂಜಪ್ಪ, ಕಂಪ್ಯೂಟರ್ ಶಿಕ್ಷಕ ಗೋವಿಂದರಾಜು, ವಾರ್ಡನ್ ಸಿಬ್ಬಂದಿ ಮ್ಯಾಥ್ಯೂ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಡಿವೈಎಸ್ಪಿ ಮುರುಳೀಧರ್ ನೇತೃತ್ವದಲ್ಲಿದಲ್ಲಿ ಠಾಣಾಧಿಕಾರಿ ನವೀನ್ ಗೌಡ ಹಾಗೂ ಸಿಬ್ಬಂದಿ ಸೈನಿಕ ಶಾಲೆಗೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

ಮೃತ ವಿದ್ಯಾರ್ಥಿ ತಂದೆ ನೀಡಿದ ದೂರಿನಲ್ಲೇನಿದೆ?
ಶನಿವಾರ ಮದ್ಯಾಹ್ನ 2ಗಂಟೆಗೆ ದಾದಾ ಮಾಸ್ಟರ್ ಮಗ ನಿಮ್ಮ ಶಾಲೆಯಲ್ಲಿ ಕಾಣಿಸುತ್ತಿಲ್ಲ. ಸಂಬಂಧಿಕರ ಮನೆಗೆ ಹೋಗಿ ನೋಡಿ ಬನ್ನಿ ಎಂದು ಹೇಳಿ ಕಳುಹಿಸಿದರು.
ನಂತರ ನಾನು ಎಲ್ಲ ಕಡೆ ವಿಚಾರಿಸಿ ಹಿಂತಿರುಗುವಾಗ ಆಸ್ಪತ್ರೆ ಬಳಿ ಜನಾರ್ಧನ್ ಮತ್ತು ಸುನೀಲ್‍ಕುಮಾರ್ ಮಗ ಮೃತಪಟ್ಟಿರುವ ವಿಷಯ ತಿಳಿಸಿದರು. ಆಗ ಹೋಗಿ ಅಲ್ಲಿ ನೋಡಿದಾಗ ಸೈನಿಕ ಶಾಲೆಯ ಯಾವುದೇ ಸಿಬ್ಬಂದಿ ಇರಲಿಲ್ಲ. ಈ ಹಿಂದೆ ಚಿಂಗಪ್ಪ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿರುವ ಬಗ್ಗೆ ತಮ್ಮ ಬಳಿ ಅಳಲು ತೋಡಿಕೊಂಡಿದ್ದನು. ಈ ಕುರಿತು ನಾನು ಉಪ ಪ್ರಾಂಶುಪಾಲರ ಬಳಿ ವಿಚಾರಿಸಿದಾಗ ಬೈದು ಕಳುಹಿಸಿದ್ದರು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಕೆಮಿಕಲ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡನೆ?
ವಿದ್ಯಾರ್ಥಿ ಚಿಂಗಪ್ಪ ಯಾವುದೋ ರಾಸಾಯನಿಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ಆದರೆ ಮರಣೋತ್ತರ ಪರೀಕ್ಷೆಯ ವರದಿಗಳು ಬಂದ ನಂತರವಷ್ಟೆ ಸಾವು ಆಕಸ್ಮಿಕವೋ? ಆತ್ಮಹತ್ಯೆಯೋ? ಕೊಲೆಯೋ ಎಂಬುದು ತಿಳಿಯ ಬೇಕಿದೆ.
ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಊಹಾಪೋಹಗಳು ಅಂತೆ ಕಂತೆಗಳ ಸುದ್ದಿಗಳು ಕೇಳಿ ಬರುತ್ತಿವೆ. ಅದು ಏನೇ ಇರಲಿ, ಅಲ್ಲೇ ಇದ್ದ ಅವರ ತಂದೆಗೆ ಮಾಹಿತಿ ನೀಡದೆ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿರುವುದು ಅನುಮಾನಗಳನ್ನು ಹುಟ್ಟು ಹಾಕಿದೆ.












Click it and Unblock the Notifications