ಕೊಡಗು; ಜಮ್ಮಾ ಹಿಡುವಳಿದಾರರಿಗೆ ಸಮಸ್ಯೆ ತಂದ ಹೊಸ ಆದೇಶ
ಮಡಿಕೇರಿ, ಮಾರ್ಚ್ 10; ಕೊಡಗು ಜಿಲ್ಲೆಯ ಜಮ್ಮಾ ಹಿಡುವಳಿದಾರರಿಗೆ ತಮ್ಮ ಹಕ್ಕು ಪಡೆಯಲು ಜಿಲ್ಲಾಡಳಿತದ ಹೊಸ ಆದೇಶ ಸಮಸ್ಯೆಯಾಗಿದೆ. ಈ ಆದೇಶ ಹಿಂಪಡೆಯಬೇಕು ಎಂದು ಕಾಂಗ್ರೆಸ್‌ನ ಪ್ರಮುಖರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಇತ್ತೀಚೆಗೆ ಜಿಲ್ಲಾಧಿಕಾರಿಗಳ ಮೌಖಿಕ ಆದೇಶದ ಅನ್ವಯ ಮಡಿಕೇರಿ ತಹಶೀಲ್ದಾರ್ 5/3/2020 ರಂದು ಆದೇಶವೊಂದನ್ನು ಹೊರಡಿಸಿದ್ದಾರೆ. ಇದರಲ್ಲಿ ನೋಂದಾಯಿತವಲ್ಲದ ದಸ್ತಾವೇಜುಗಳಂತೆ ಆಸ್ತಿಯ ಹಕ್ಕು ಬದಲಾವಣೆ ಮಾಡದಂತೆ ಸೂಚಿಸಲಾಗಿದೆ.
ಇದು ಕೊಡಗಿನ ಜಮ್ಮಾ ಹಿಡುವಳಿದಾರರಿಗೆ ತಮ್ಮ ಜಾಗದ ಹಕ್ಕು ಪಡೆಯಲು ಮಾರಕವಾಗಿರುವುದರಿಂದ ಇದರ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಸದರಿ ಆದೇಶವನ್ನು ಹಿಂಪಡೆಯುವಂತೆ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನೀರಾ ಮೈನಾ ನಿಯೋಗದ ಜೊತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಕೊಡಗಿನ ಕಂದಾಯ ದಾಖಲೆಗಳು ಇತರ ಜಿಲ್ಲೆಗಳ ದಾಖಲೆಗಳಿಗೆ ಹೋಲಿಸಿದರೆ ವಿಭಿನ್ನವಾಗಿದ್ದು ಪಟ್ಟೆದಾರ ಎಂಬ ಹೆಸರಿನಲ್ಲಿ ಸಂಪೂರ್ಣ ಕುಟುಂಬದ ದಾಖಲೆ ಇರುತ್ತದೆ. ಕುಟುಂಬದಲ್ಲಿ ನೂರಾರು ಸದಸ್ಯರು ಇದ್ದು ಹಿಂದಿನ ಸರ್ಕಾರಿ ಸುತ್ತೋಲೆಯಂತೆ (ಸುತ್ತೋಲೆ ಸಂಖ್ಯೆ ಕಂ.ಇ.211/ಮು.ನೋ.ಮು/99 ತಾರೀಕು.12-05-1999) ಭಾಗವೊಂದರ ರೂ. 250 ಮುದ್ರಾಂಕ ಶುಲ್ಕ ಪಾವತಿಸಿ ನೋಂದಾಯಿತವಲ್ಲದ ದಸ್ತಾವೇಜು ಸ್ವೀಕರಿಸಿ ಖಾತೆ ವರ್ಗಾವಣೆ ಮಾಡಲಾಗುತ್ತಿತ್ತು.
ತದನಂತರ ಎಲ್ಲಾ ಕುಟುಂಬಸ್ಥರ ಒಪ್ಪಿಗೆ ಸಹಿ ಪಡೆದು ಅವರ ಫೋಟೋ, ಆಧಾರ್ ಕಾರ್ಡ್ ಪ್ರತಿ ಪಡೆದು ಪಟ್ಟೆದಾರರ ಮಕ್ಕಳ ಒಪ್ಪಿಗೆ ಪಡೆದು ಹಕ್ಕುದಾರರ ಹೆಸರಿಗೆ ವರ್ಗ ಮಾಡಲಾಗುತ್ತಿತ್ತು.
ಆದರೆ, ಈಗ ತಹಶೀಲ್ದಾರ್ ಹೊರಡಿಸಿದ ಆದೇಶದಂತೆ ಪಟ್ಟೆದಾರರ ಅಥವಾ ಅವರ ಮಕ್ಕಳು ಉಪ ನೋಂದಾವಣಿ ಅಧಿಕಾರಿಗಳ ಮೂಲಕ ನೋಂದಾವಣಿ ಮಾಡಿದರೆ ಮಾತ್ರ ಖಾತೆ ವರ್ಗಾವಣೆ ಆಗಲಿದೆ.
ತಮ್ಮ ಸ್ವಾಧೀನದಲ್ಲಿ ಇಲ್ಲದ ಜಮೀನನ್ನು ಪಟ್ಟದಾರರಾಗಲಿ ಅವರ ಮಕ್ಕಳಾಗಲಿ ನೋಂದಾಯಿಸಿ ಕೊಡಲು ಮುಂದೆ ಬರುವುದಿಲ್ಲ. ಅಲ್ಲದೆ ಹಣಕ್ಕೆ ಕೂಡ ಬೇಡಿಕೆ ಇಡುವ ಸಾಧ್ಯತೆ ಇದೆ.
ಆದ್ದರಿಂದ ಸದರಿ ವಿಷಯದ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಈ ಆದೇಶವನ್ನು ಹಿಂಪಡೆಯಲು ಮನವಿ ಮಾಡಲಾಗಿದೆ. ಸಮಸ್ಯೆ ಬಗ್ಗೆ ವಿವರಣೆ ಪಡೆದ ಜಿಲ್ಲಾಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.












Click it and Unblock the Notifications