ಬಾಲಿವುಡ್ ಕ್ಯಾಮರಾಮೆನ್ ಸದ್ಯ ಫುಲ್‌ಟೈಮ್ ಬ್ಯುಸಿನೆಸ್‌ಮೆನ್: ಕೊಡಗಿನ ದಂಪತಿಯ ವಿಶೇಷ ಸಾಧನೆ
ಮಡಿಕೇರಿ, ಆಗಸ್ಟ್ 09: ಕೊಡಗಿನ ಕಾಫಿ ಘಮಲನ್ನು ದೇಶ ವಿದೇಶಗಳಿಗೆ ಹರಡುವ ಕಾರ್ಯದಲ್ಲಿ ಕೊಡಗಿನ ದಂಪತಿ ಆಶಿತ್‌ದೇಚಮ್ಮ ಮತ್ತು ಶಿವುಸುಬ್ಬಯ್ಯ ನಿರತರಾಗಿದ್ದಾರೆ. ತಾವು ಬೆಳೆದ ಕಾಫಿಗೆ ತಾವೇ ಮಾರುಕಟ್ಟೆ ಸೃಷ್ಟಿಸಿ ಆನ್ ಲೈನ್ ಮೂಲಕ ವಿವಿಧ ಬ್ರಾಂಡ್ ಗಳಲ್ಲಿ ಗುಣಮಟ್ಟದ ಕಾಫಿಪುಡಿಯನ್ನು ಮಾರಾಟ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಹಾಗೆನೋಡಿದರೆ ಕೊಡಗಿನಲ್ಲಿ ಬೆಳೆಗಾರರು ಕಾಫಿ, ಕರಿಮೆಣಸು, ಏಲಕ್ಕಿಯನ್ನು ಕೊಯ್ಲು ಮಾಡಿ ಒಣಗಿಸಿ ವ್ಯಾಪಾರಸ್ಥರಿಗೆ ಮಾರಾಟ ಮಾಡಿ ಕೈತೊಳೆದುಕೊಳ್ಳುತ್ತಾನೆ. ಆದರೆ ಇವರಿಗೆಲ್ಲ ಭಿನ್ನ ಎನ್ನುವಂತೆ ತಮ್ಮ ಮನೆಯಿಂದಲೇ ಕಾಫಿ ಮತ್ತು ಏಲಕ್ಕಿ, ಕರಿಮೆಣಸನ್ನು ವಿವಿಧ ಬ್ರ್ಯಾಂಡ್‌ಗಳಲ್ಲಿ ತಯಾರು ಮಾಡಿ ಆನ್‌ಲೈನ್ ಮೂಲಕ ಮಾರಾಟ ಮಾಡುವಲ್ಲಿ ಚೆಟ್ಟಳ್ಳಿಯ ಮಲ್ಕೋಡು ತೋಟದ ಮಾಲೀಕ ಐಚೆಟ್ಟಿರ ಆಶಿತ್‌ದೇಚಮ್ಮ ಮತ್ತು ಶಿವುಸುಬ್ಬಯ್ಯರವರು ಯಶಸ್ವಿಯಾಗಿದ್ದಾರೆ.

ಒಂದೆರಡು ದಶಕಗಳ ಹಿಂದೆ ಕಾಫಿ ಬೋರ್ಡ್‌ಗೆ ಬೆಳೆಗಾರರು ತಾವು ಬೆಳೆದ ಕಾಫಿಯನ್ನು ಮಾರಾಟ ಮಾಡುತ್ತಿದ್ದರು. ಚೀಲ(50ಕೆಜಿ)ವೊಂದಕ್ಕೆ ಇಂತಿಷ್ಟು ಹಣ ನಿಗದಿ ಮಾಡಿ ಕೊಡಲಾಗುತ್ತಿತ್ತಲ್ಲದೆ, ಬಳಿಕ ಅದರ ಮೇಲೆ ಮೂರು ತಿಂಗಳಿಗೋ ಆರು ತಿಂಗಳಿಗೋ ಬೋನಸ್ ಹಣ ಸಿಗುತ್ತಿತ್ತು. ಆದರೆ ಯಾವಾಗ ಕಾಫಿ ಬೋರ್ಡ್‌ನ ಕಪಿ ಮುಷ್ಠಿಯಿಂದ ಕಾಫಿಯನ್ನು ಬಿಡುಗಡೆ ಮಾಡಿ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ವ್ಯವಸ್ಥೆ ಬಂತೋ ಇಲ್ಲಿನ ಚಿತ್ರಣವೇ ಬದಲಾಗಿ ಹೋಯಿತು. ಕಾಫಿಯನ್ನು ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಯಿತು. ಜೊತೆ ಜೊತೆಯಲ್ಲೇ ಮೋಸ ಮಾಡುವವರು ಹುಟ್ಟಿಕೊಂಡರು.
ತಮ್ಮ ಊರಿನಿಂದಲೇ ಕಾಫಿ ಮಾರಾಟ
ಕೊಡಗಿನಲ್ಲಿ ಕಾಫಿ ಬೆಳೆಗಾರರ ಪೈಕಿ ಯಾರು ಕೂಡ ಕಾಫಿಯನ್ನು ಪುಡಿಮಾಡಿ ಮಾರಾಟ ಮಾಡುವುದಿಲ್ಲ. ಆದರೆ ಆ ಕೆಲಸವನ್ನು ಇದೀಗ ತಮ್ಮ ಪುಟ್ಟ ಗ್ರಾಮದಲ್ಲಿಯೇ ಮಾಡಿ ಆನ್‌ಲೈನ್ ಮಾರಾಟ ಮಾಡುವ ಕೆಲಸವನ್ನು ದಂಪತಿ ಮಾಡುತ್ತಾ ಬಂದಿದ್ದು ಅದರಲ್ಲಿ ಯಶಸ್ಸು ಕಾಣತೊಡಗಿದ್ದಾರೆ. ಸದ್ಯ ಅವರು ಆರೆಂಜ್ ತೀಲ್ ಮಾರ್ನಿಂಗ್ ಮಿಸ್ಟ್ ಹಾಗೂ ಮಲಾರ್ ಎಂಬ ಕಾಫಿಪೌಡರ್ ಪುಡಿ ಹಾಗೂ ದಿ ಗ್ರೇ ಹಾರ್ನ್‌ಬಿಲ್ಲ್ ಎಂಬ ಬ್ರ್ಯಾಂಡಿನಡಿ ಕರಿಮೆಣಸು ಹಾಗೂ ಏಲಕ್ಕಿಯನ್ನು ಪ್ಯಾಕಿಂಗ್ ಮಾಡಿ ಆನ್‌ಲೈನ್ ಮಾರುಕಟ್ಟೆಯಲ್ಲಿ ಒದಗಿಸುತ್ತಿದ್ದಾರೆ.

ತಮ್ಮ ಮಲ್ ಕೋಡು ತೋಟದಲ್ಲಿನ ಕಾಫಿಯನ್ನು ಗುಣಮಟ್ಟ ಅನುಸಾರ ಕೊಯ್ಲು ಮಾಡಿ, ಒಣಗಿಸಿ, ಸಂಗ್ರಹಿಸಿ ಅರೆಬಿಕಾ, ರೋಬಸ್ಟಾಗೆ ಶೇ.10ರಷ್ಟು ಚಿಕೋರಿ ಮಿಶ್ರಣ ಮಾಡಿ ರೋಬಸ್ಟಾವನ್ನು ಆರೆಂಜ್ ತೀಲ್ ಎಂಬ ಹೆಸರಿನ ಬ್ರ್ಯಾಂಡ್‌ನಡಿ, ಅರೇಬಿಕಾವನ್ನು ಮಾರ್ನಿಂಗ್ ಮಿಸ್ಟ್ ಎಂಬ ಬ್ರ್ಯಾಂಡ್‌ನಡಿ ಅಲ್ಲದೆ ಪ್ರೀಮಿಯಂ ಗ್ರೇಡ್ ಅರೇಬಿಕಾವನ್ನು ಮಲಾರ್ ಎಂಬ ಬ್ರ್ಯಾಂಡ್‌ನಲ್ಲಿ ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದಾರೆ. ಇನ್ನು ಏಲಕ್ಕಿ ಮತ್ತು ಕರಿಮೆಣಸನ್ನು ದಿ ಗ್ರೇ ಹಾರ್ನ್‌ಬಿಲ್ಲ್ ಎಂಬ ಬ್ರ್ಯಾಂಡ್‌ನಡಿ ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ.
ಹೊಸ ಸಾಹಸಕ್ಕೆ ಕೈ ಹಾಕಿದ ದಂಪತಿ
ಕಾಫಿಯನ್ನು ಹುರಿದು ಪುಡಿ ಮಾಡಿ, ಪ್ಯಾಕಿಂಗ್ ಮಾಡಲು ಆಧುನಿಕ ತಂತ್ರಜ್ಞಾನವನ್ನು ಬಳಸಿರುವ ಅವರು ಶಿವುಸುಬ್ಬಯ್ಯ ಅವರು ಹೆಚ್ಚಿನ ಕೆಲಸವನ್ನು ತಾವೇ ಮುಂದೆ ನಿಂತು ಮಾಡುತ್ತಿದ್ದು ಇದಕ್ಕೆ ಪತ್ನಿ ಆಶಿತ್‌ದೇಚಮ್ಮ ಅವರು ಸಹಕರಿಸುತ್ತಿದ್ದು, ಆನ್‌ಲೈನ್ ಮಾರುಕಟ್ಟೆ ನಿರ್ವಹಣೆಯನ್ನು ಅವರೇ ನೋಡಿಕೊಳ್ಳುತ್ತಿದ್ದಾರೆ. ಇದೀಗ ಸಿಂಗಾಪುರ್‌ನ ಶಾಪ್ ಮ್ಯಾಟಿಕ್ ಆನ್ ಲೈನ್ ಮಾರುಕಟ್ಟೆ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಆನ್‌ಲೈನ್‌ನಲ್ಲಿ ಕಾಫಿ ಪುಡಿಯನ್ನು ಪಡೆಯಲು ಆಪೇಕ್ಷಿಸುವವರಿಗೆ ಪೋಸ್ಟಲ್ ಮೂಲಕ ರವಾನಿಸುತ್ತಿದ್ದಾರೆ.

ಇಷ್ಟಕ್ಕೂ ಕೊಡಗು ಜಿಲ್ಲೆಯ ಪುಟ್ಟ ಗ್ರಾಮದಲ್ಲಿ ಅದು ತಮ್ಮ ತೋಟದಲ್ಲೇ ಕುಳಿತು ಆನ್‌ಲೈನ್‌ನಲ್ಲಿ ಕಾಫಿ ಪುಡಿಯನ್ನು ಮಾರಾಟ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಆದರೂ ಅಂತಹದೊಂದು ಸಾಹಸಕ್ಕೆ ಕೈಹಾಕಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಶಿವುಸುಬ್ಬಯ್ಯರವರ ಬಗ್ಗೆ ಹೇಳುವುದಾದರೆ ಅವರು ಹೊಟೇಲ್ ಮ್ಯಾನೇಜ್‌ಮೆಂಟ್ ಬಗ್ಗೆ ವ್ಯಾಸಂಗ ಮಾಡಿದವರು. ಓದು ಮುಗಿದ ಮೇಲೆ ಪೂನಾದ ಫಿಲಂ ಅಂಡ್ ಟೆಲಿವಿಷನ್ ಆಫ್ ಇಂಡಿಯಾದ ಫೋಟೋಗ್ರಫಿಯ ಉನ್ನತ ಪದವಿಯಲ್ಲಿ ಗೋಲ್ಡ್ ಮೆಡಲ್ ಪಡೆದು ಮುಂಬೈನ ಫಿಲಂ ಇಂಡಸ್ಟ್ರಿಯಲ್ಲಿ 12ವರ್ಷಗಳ ಕಾಲ ಸೇವೆಸಲ್ಲಿಸಿದರು.
ಮುನ್ನಾಬಾಯಿ ಎಂಬಿಬಿಎಸ್, ದೇವದಾಸ್ ಸೇರಿದಂತೆ ಸುಮಾರು 36ಕ್ಕೂ ಹೆಚ್ಚು ಬಾಲಿವುಡ್ ಸಿನಿಮಾಗಳಲ್ಲಿ ಸಹಾಯಕ ಕ್ಯಾಮರಾಮೆನ್ ಆಗಿ ಕೆಲಸ ಮಾಡಿದರು. ಆದರೆ ಅದ್ಯಾಕೋ ತವರಿನ ಸೆಳೆತ ಹೆಚ್ಚಾಗಿ ಕೊಡಗಿಗೆ ಹಿಂತಿರುಗಿದ ಅವರು ಸೋಮವಾರಪೇಟೆ ತಾಲೂಕಿನ ಕೂಡ್ಲೂರು ಚೆಟ್ಟಳ್ಳಿಯ ಮಲ್ ಕೋಡ್ ತೋಟದ ಅಭಿವೃದ್ಧಿಯತ್ತ ಗಮನಹರಿಸಿದರಲ್ಲದೆ, ಕೊಡಗಿನ ಉತ್ಪನ್ನಗಳನ್ನೇ ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಯೋಜನೆ ರೂಪಿಸಿದರು.
ಸದ್ಯ ಅದರಲ್ಲಿ ಯಶಸ್ಸು ಕೂಡ ಆಗಿದ್ದಾರೆ. ಈಗ ಕೊಡಗಿನ ಕಾಫಿ, ಕರಿಮೆಣಸು, ಏಲಕ್ಕಿಯ ಸುವಾಸನೆ ದೇಶವಿದೇಶಗಳಲ್ಲಿ ಪ್ರಚುರಪಡಿಸುವ ಕಾರ್ಯ ಅವರಿಂದಾಗುತ್ತಿದ್ದು, ಇತರರಿಗೆ ಮಾದರಿಯಾಗಿದ್ದಾರೆ. ಮಾಹಿತಿಗಾಗಿ 08276-266629, 9449239325, 9480172994 ಸಂಪರ್ಕಿಸಬಹುದಾಗಿದೆ.












Click it and Unblock the Notifications