ಕೊಡಗು ಜಿಲ್ಲೆಯ ಏರ್‌ಸ್ಟ್ರಿಪ್ ಯೋಜನೆ ಕುರಿತು ಚರ್ಚೆ
ಮಡಿಕೇರಿ, ಫೆಬ್ರವರಿ 22; ಕರ್ನಾಟಕ ಸರ್ಕಾರ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸಲು 2022-23ನೇ ಸಾಲಿನ ಬಜೆಟ್‌ನಲ್ಲಿ ಹೆಲಿಪೋರ್ಟ್ ಯೋಜನೆ ಘೋಷಣೆ ಮಾಡಿತ್ತು. ಇದರಲ್ಲಿ ಕೊಡಗು ಜಿಲ್ಲೆಯಲ್ಲಿ ಏರ್‌ಸ್ಟಿಪ್ (ವಿಮಾನಪಥ)ವೂ ಹಸೇರಿತ್ತು.
ಈ ಯೋಜನೆ ಕುರಿತು ಈಗ ಮತ್ತೆ ಚರ್ಚೆಗಳು ಆರಂಭವಾಗಿವೆ. ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಮಂಥರ್ ಗೌಡ ಕೊಡಗು ಜಿಲ್ಲೆಯ ಕುಶಾಲನಗರದ ಸಮೀಪ ಉದ್ದೇಶಿತ ಏರ್ ಸ್ಟ್ರಿಪ್ (ವಿಮಾನ ಪಥ) ನಿರ್ಮಾಣದ ಕುರಿತು ಸಚಿವರ ಜೊತೆ ಚರ್ಚಿಸಿದರು.

ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು ಹಾಗೂ ಕೈಗಾರಿಕಾ ಮೂಲ ಸೌಲಭ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆಯೂ ಚರ್ಚೆ ನಡೆಸಲಾಗಿದೆ.
ಭೂಮಿ ಹಸ್ತಾಂತರ ಪ್ರಕ್ರಿಯೆ: ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್. ಎಸ್. ಭೋಸರಾಜು ಕೆಲವು ದಿನಗಳ ಹಿಂದೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಜೊತೆ ಕೊಡಗು ಏರ್ ಸ್ಟ್ರಿಪ್ ಯೋಜನೆಗೆ ಭೂಮಿ ಹಸ್ತಾಂತರ ಮಾಡುವ ಕುರಿತು ಸಭೆ ನಡೆದಿತ್ತು.
ಸಭೆಯಲ್ಲಿ ಮಾತನಾಡಿದ್ದ ಸಚಿವ ಕೃಷ್ಣ ಬೈರೇಗೌಡರು, "ಕೊಡಗು ಜಿಲ್ಲೆಯಲ್ಲಿಏರ್ ಸ್ಟ್ರಿಪ್ ನಿರ್ಮಾಣಕ್ಕೆ ಅಗತ್ಯವಿರುವ ಜಾಗವನ್ನು ಜಿಲ್ಲಾಡಳಿತಕ್ಕೆ ವರ್ಗಾವಣೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ" ಎಂದು ಹೇಳಿದ್ದರು.
ಈ ಯೋಜನೆ ಕುರಿತು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಎಂ. ಆರ್. ರವಿ ಅವರು ಸಹ ಸಭೆ ನಡೆಸಿದ್ದರು. ಕೊಡಗು ಜಿಲ್ಲೆಯಲ್ಲಿ ಸಣ್ಣ ವಿಮಾನ ನಿಲ್ದಾಣ ಸ್ಥಾಪಿಸಬೇಕು ಎಂದು ಹಲವು ವರ್ಷಗಳಿಂದ ಪ್ರಯತ್ನಗಳು ನಡೆದಿವೆ. 2018 ರಲ್ಲಿ ಪ್ರವಾಹ ಬಂದಿತ್ತು. ಎಲ್ಲಾ ಗಮನದಲ್ಲಿಟ್ಟುಕೊಂಡು ಹೆಲಿಪೋರ್ಟ್ ನಿರ್ಮಾಣ ಮಾಡುವಲ್ಲಿ ಕ್ರಮವಹಿಸಬೇಕಿದೆ ಎಂದು ಹೇಳಿದ್ದರು.
ಹೆಲಿಪೋರ್ಟ್ ನಿರ್ಮಾಣ ಸಂಬಂಧ ಈ ಹಿಂದೆ ಕೆ.ನಿಡುಗಣೆ ಬಳಿ 4 ಎಕರೆಗಿಂತ ಹೆಚ್ಚು ಜಾಗ ಗುರುತಿಸಲಾಗಿತ್ತು, ಸದ್ಯ ಆ ಸ್ಥಳದಲ್ಲಿ ಮನೆ ನಿರ್ಮಾಣ ಆಗಿರುವುರಿಂದ ಕೊಡಗು ಜಿಲ್ಲಾ ಕೇಂದ್ರದಲ್ಲಿ ಜಾಗ ಇಲ್ಲದಿರುವುದರಿಂದ ಕೂಡಿಗೆ ಸೈನಿಕ ಶಾಲೆ ಬಳಿ ಗುರುತಿಸಲಾಗಿರುವ ಜಾಗದಲ್ಲಿ ಹೆಲಿಪೋರ್ಟ್ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ.
ಯೋಜನೆಗಾಗಿ ಕೃಷಿ ಇಲಾಖೆ ಭೂಮಿಯನ್ನು ಸರ್ಕಾರದ ಮಟ್ಟದಲ್ಲಿ ಅನುಮತಿ ಪಡೆದು ನಿಗಮಕ್ಕೆ ಹಸ್ತಾಂತರಿಸಬೇಕಿದೆ. ಕೊಡಗು ಜಿಲ್ಲೆಯಲ್ಲಿ ಮಿನಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರವನ್ನು ಜಿಲ್ಲಾಡಳಿತ ನೀಡಲಿದೆ.












Click it and Unblock the Notifications