ಕೊಡಗಿನಲ್ಲಿ ತಗ್ಗಿದ ಮಳೆ: ಮತ್ತೆ ವರುಣನ ಅಬ್ಬರ ಬಿರುಸುಗೊಳ್ಳುವುದು ಯಾವಾಗ ?
ಮಡಿಕೇರಿ, ಜುಲೈ 05: ಪ್ರವಾಹದಿಂದ ಸಂಕಷ್ಟ ಎದುರಾಗುತ್ತದೆ ಎಂದು ಭಯಗೊಂಡಿದ್ದ ಜನರ ಮುಖದಲ್ಲೀಗ ನೆಮ್ಮದಿ ಮೂಡಿದೆ. ಈಗ ಕೊಡಗು ಜಿಲ್ಲೆಯಾದ್ಯಂತ ಮಳೆ ಅಬ್ಬರ ಕಡಿಮೆಯಾಗಿದೆ. ಆದರೆ ಇದೀಗ ಹೊಸ ಮಳೆ ಪುನರಸ್ಸು ಮಳೆ ಆರಂಭವಾಗಿದ್ದು, ಧಾರಾಕಾರವಾಗಿ ಸುರಿಯಬಹುದೆಂಬ ನಿರೀಕ್ಷೆಯಿದೆ. ಹಾಗೇನಾದರೂ ಮುಂದಿನ ದಿನಗಳಲ್ಲಿ ಭಾರೀ ಮಳೆ ಸುರಿದರೆ ಕೆಆರ್ ಎಸ್ ಜಲಾಶಯ ಬಹುಬೇಗ ಭರ್ತಿಯಾಗುವ ಸಾಧ್ಯತೆಯಿದೆ.
ಕೆಲವು ದಿನಗಳ ಹಿಂದೆ ಕೊಡಗು ಸೇರಿದಂತೆ ಹಾಸನ ಚಿಕ್ಕಮಗಳೂರು ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿದ ಕಾರಣ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿತ್ತು. ಹೀಗಾಗಿ ತಳ ಸೇರಿದ್ದ ಕೆಆರ್ ಎಸ್, ಹೇಮಾವತಿ ಮತ್ತು ಹಾರಂಗಿ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿತ್ತು. ಅದರಲ್ಲೂ ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ 100 ಅಡಿ ದಾಟಿರುವುದು ಖುಷಿ ತಂದಿದೆ. ಈ ಬಾರಿ ಮುಂಗಾರು ಆರಂಭದಲ್ಲಿಯೇ ಬಿರುಸು ಪಡೆದಿರುವುದು ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ ಏರಿಕೆ ಆಗಲು ಕಾರಣವಾಗಿದೆ.

ಹಾಗೆನೋಡಿದರೆ ಮಲೆನಾಡಿನಲ್ಲಿ ಜುಲೈ ಮತ್ತು ಆಗಸ್ಟ್ ತಿಂಗಳನ್ನು ನಡು ಮಳೆಗಾಲದ ಅವಧಿ ಎಂದೇ ಹೇಳಲಾಗುತ್ತದೆ. ಈ ಸಮಯದಲ್ಲಿ ಭಾರೀ ಮಳೆ ಸುರಿಯುವುದು, ಪ್ರವಾಹ ಏರ್ಪಡುವುದು ಸಾಮಾನ್ಯವಾಗಿರುತ್ತದೆ. ಈ ವೇಳೆ ಪುನರಸ್ಸು, ಪುಷ್ಯ ಮತ್ತು ಆಶ್ಲೇಷ ಮಳೆಗಳು ಎಡೆ ಬಿಡದೆ ಸುರಿಯುತ್ತವೆ. ಈ ಸಂದರ್ಭ ಪ್ರವಾಹ, ಭೂಕುಸಿತ ಸೇರಿದಂತೆ ಹಲವು ಅನಾಹುತಗಳು ಜನರನ್ನು ಇನ್ನಿಲ್ಲದಂತೆ ಕಾಡುತ್ತದೆ. ಭಾರೀ ಮಳೆ ಇನ್ನು ಮುಂದೆ ಸುರಿಯುವ ಕಾರಣ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರಲಿದ್ದು ಅದು ಜಲಾಶಯಗಳನ್ನು ತಲುಪಿದರೆ ಬಹುಬೇಗ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳು ಭರ್ತಿಯಾಗುವ ಸಾಧ್ಯತೆಯಿದೆ.
ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚು ಮಳೆ
ಧಾರಾಕಾರವಾಗಿ ಒಮ್ಮೆಲೆ ಮಳೆ ಸುರಿದರೆ ಅದರಿಂದ ಸಾಕಷ್ಟು ತೊಂದರೆಗಳು ಆಗಲಿವೆ. ಬದಲಿಗೆ ನಿಧಾನವಾಗಿ ಒಂದೇ ಸಮನೆ ಮಳೆ ಸುರಿದರೆ ಇದರಿಂದ ಯಾವುದೇ ತೊಂದರೆಯಾಗದೆ ನದಿಗಳಲ್ಲಿ ನೀರಿನ ಪ್ರಮಾಣವೂ ಇಳಿಕೆಯಾಗುವುದಿಲ್ಲ. ಹಲವು ದಶಕಗಳ ಹಿಂದೆ ಮಳೆ ಒಂದೇ ಸಮನೆ ಸುರಿಯುತ್ತಿತ್ತು. ಬಿಡುವು ನೀಡುತ್ತಿರಲಿಲ್ಲ. ಹೀಗಿ ಸುರಿಯುತ್ತಿದ್ದ ಮಳೆಯಿಂದ ಯಾವುದೇ ಹಾನಿಯಾಗುತ್ತಿರಲಿಲ್ಲ. ಆದರೀಗ ಆಗಾಗ್ಗೆ ಬಿಡುವು ನೀಡಿ ಬಳಿಕ ಒಮ್ಮೆಲೆ ಮಳೆ ಸುರಿಯುವುದರಿಂದ ಪ್ರವಾಹ ಸೇರಿದಂತೆ ಹಲವು ಅನಾಹುತಗಳು ಸಂಭವಿಸುತ್ತಿವೆ.
ಕಳೆದ ಕೆಲವು ದಿನಗಳಿಂದ ಕೊಡಗಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಆದರೆ ಜುಲೈ 5ರಿಂದ ಪುನರಸ್ಸು ಮಳೆ ಆರಂಭವಾಗಿದ್ದು, ಜುಲೈ 18ರವರೆಗೆ ಮಳೆ ಇರಲಿದೆ. ಈ ಮಳೆ ಯಾವ ರೀತಿ ಸುರಿಯಲಿದೆ ಎಂಬುದು ಬಹುಮುಖ್ಯವಾಗಿದೆ. ಇದೀಗ ಕೊಡಗಿನಲ್ಲಿ ಸರಾಸರಿ ಮಳೆ ಕಡಿಮೆಯಾಗಿದ್ದರೂ ಇಲ್ಲಿ ತನಕ ಸುರರಿದ ಮಳೆಯ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಾಗಿರುವುದು ಖುಷಿ ತಂದಿದೆ. ಕಳೆದ ವರ್ಷ ಜನವರಿಯಿಂದ ಈ ವೇಳೆಗೆ ಕೇವಲ 343.50 ಆಗಿತ್ತು. ಆದರೆ ಈ ವರ್ಷ 950.48 ಮಿ.ಮೀ ಸುರಿದಿದೆ. ಅಂದರೆ ಕಳೆದ ವರ್ಷಕ್ಕಿಂತ ಸುಮಾರು ಆರು ನೂರಕ್ಕೂ ಹೆಚ್ಚು ಮಿ.ಮೀ ಮಳೆ ಆಗಿರುವುದು ಸಮಾಧಾನ ತಂದಿದೆ.

ಕೊಡಗಿನ ತಾಲೂಕುವಾರು ಮಳೆ ಪ್ರಮಾಣ
ಕೊಡಗಿನಲ್ಲಿ ತಾಲೂಕುವಾರು ಮಳೆಯ ಪ್ರಮಾಣ ನೋಡಿದ್ದೇ ಆದರೆ ಮಡಿಕೇರಿ ತಾಲ್ಲೂಕಿನಲ್ಲಿ ಜನವರಿಯಿಂದ ಇಲ್ಲಿಯವರೆಗಿನ ಮಳೆ 1375.02 ಮಿ.ಮೀ, ವಿರಾಜಪೇಟೆ ತಾಲ್ಲೂಕಿನಲ್ಲಿ 981.40 ಮಿ.ಮೀ. ಪೊನ್ನಂಪೇಟೆ ತಾಲ್ಲೂಕಿನಲ್ಲಿ ಮಳೆ 957.12 ಮಿ.ಮೀ., ಸೋಮವಾರಪೇಟೆ ತಾಲ್ಲೂಕಿನಲ್ಲಿ 769.36 ಮಿ.ಮೀ. ಕುಶಾಲನಗರ ತಾಲ್ಲೂಕಿನಲ್ಲಿ 669.50 ಮಿ.ಮೀ. ಮಳೆಯಾಗಿದೆ. ಇನ್ನು ಮೂರು ತಿಂಗಳ ಅವಧಿಯಲ್ಲಿ ಸುಮಾರು 2000 ಮಿ.ಮೀ. ಕ್ಕಿಂತ ಹೆಚ್ಚು ಮಳೆ ಸುರಿದರೆ ನೆಮ್ಮದಿಯುಸಿರು ಬಿಡಬಹುದೇನೋ.
ಕೊಡಗಿನಲ್ಲಿ ಅತಿಹೆಚ್ಚು ಮಳೆ ತಲಕಾವೇರಿ, ಭಾಗಮಂಡಲ, ಶಾಂತಳ್ಳಿ, ವ್ಯಾಪ್ತಿಯಲ್ಲಿ ಸುರಿಯುತ್ತಿದೆ. ಜಿಲ್ಲೆಯ ಕೆಲವು ಕಡೆಗಳಲ್ಲಿ ಸುರಿಯುವ ಮಳೆ ನೀರು ಕಾವೇರಿ ನದಿಗೆ ಸೇರದೆ, ದಕ್ಷಿಣ ಕನ್ನಡ ಮತ್ತು ಕೇರಳದ ಕಡೆಗೆ ಹರಿದು ಹೋಗುತ್ತದೆ. ಜಿಲ್ಲೆಯಲ್ಲಿ ಬಿದ್ದ ಮಳೆಯ ಎಲ್ಲ ನೀರು ಕಾವೇರಿ ನದಿಗೆ ಹರಿದು ಬರುವುದಿಲ್ಲ ಹೀಗಾಗಿ ಜಲಾಶಯ ಭರ್ತಿಗೆ ಕಾಯಲೇ ಬೇಕಾಗಿದೆ.
ಹಾರಂಗಿ ಭರ್ತಿಗೆ 14 ಅಡಿ ಬಾಕಿ
ಇನ್ನು ಕೊಡಗಿನಲ್ಲಿರುವ ಪುಟ್ಟ ಜಲಾಶಯ ಚಿಕ್ಲಿಹೊಳೆ ಭರ್ತಿಯಾಗಿದ್ದರೆ, ಮತ್ತೊಂದು ಹಾರಂಗಿ ಜಲಾಶಯ ಭರ್ತಿಯಾಗಲು ಇನ್ನು ಸುಮಾರು 14 ಅಡಿಯಷ್ಟು ಬಾಕಿಯಿದೆ. ಇದೀಗ ಗರಿಷ್ಠ 2,859 ಅಡಿಗಳ ಜಲಾಶಯದಲ್ಲಿ 2845.87 ಅಡಿಯಷ್ಟು ನೀರಿದೆ. ಇದರ ಒಳಹರಿವು 5048 ಕ್ಯುಸೆಕ್ ನಷ್ಟಿದೆ. ಹಾರಂಗಿ ಜಲಾಶಯ ಭರ್ತಿಯಾದ ನಂತರ ಹೆಚ್ಚುವರಿ ನೀರು ಕಾವೇರಿ ನದಿಯನ್ನು ಸೇರಲಿದೆ. ಮಡಿಕೇರಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾದರೆ ಅದರ ನೀರು ಹಾರಂಗಿ ಜಲಾಶಯವನ್ನು ತಲುಪಲಿದೆ.

ಉಳಿದಂತೆ ಉತ್ತರ ಕೊಡಗಿನ ಮತ್ತು ದಕ್ಷಿಣ ಕೊಡಗಿನ ಕೆಲವು ಪ್ರದೇಶಗಳ ನೀರು ಕಾವೇರಿಗೆ ಹರಿದರೆ, ಉತ್ತರ ಕೊಡಗಿನ ಶ್ರೀಮಂಗಲ, ಬಾಳಲೆ, ಸೇರಿದಂತೆ ಹಲವು ಪ್ರದೇಶಗಳ ನೀರು ಲಕ್ಷ್ಮಣ ತೀರ್ಥ ನದಿಯನ್ನು ಸೇರಲಿದೆ. ಅಂತಿಮಗಾಗಿ ಎಲ್ಲ ನದಿಗಳ ನೀರು ಕಾವೇರಿಯನ್ನು ಸೇರಲಿವೆ. ಒಟ್ಟಾರೆಯಾಗಿ ಕೊಡಗಿನಲ್ಲಿ ಮಳೆ ಬಿರುಸುಗೊಳ್ಳುತ್ತಿದ್ದಂತೆಯೇ ಕಾವೇರಿ ನದಿ ಧುಮ್ಮಿಕ್ಕಿ ಹರಿಯಲಿದ್ದು ಹೆಚ್ಚಿನ ಪ್ರಮಾಣದಲ್ಲಿ ನೀರು ಕೆಆರ್ ಎಸ್ ಜಲಾಶಯವನ್ನು ತಲುಪಲಿದೆ.











Click it and Unblock the Notifications