ಕೊಡಗು: ಮೇ 16ರಂದು ಮಿನಿ ಉದ್ಯೋಗ ಮೇಳ, ವಿವರ
ಮಡಿಕೇರಿ, ಮೇ 15: ಕೊಡಗು ಜಿಲ್ಲೆಯಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಪ್ರಮುಖವಾದ ಮಾಹಿತಿ ಇದೆ. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಮೇ 16ರಂದು ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ. ಅಗತ್ಯ ದಾಖಲೆಗಳ ಜೊತೆ ಆಸಕ್ತ, ಅರ್ಹ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದು.
ಮೇ 16ರ ಬೆಳಗ್ಗೆ 10.30 ರಿಂದ ಮಧ್ಯಾಹ್ನ 3 ಗಂಟೆಯ ತನಕ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳ ನಡೆಯಲಿದೆ. ಈ ಉದ್ಯೋಗ ಮೇಳದಲ್ಲಿ ವಿವಿಧ ಖಾಸಗಿ ಕಂಪನಿಗಳು ಪಾಲ್ಗೊಳ್ಳಲಿದ್ದು, ತಮ್ಮಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ.

ಉದ್ಯೋಗ ಮೇಳದಲ್ಲಿ ಕಲ್ಯಾಣಿ ಮೋಟಾರ್ಸ್, ಮಡಿಕೇರಿ, ಪೆಂಟಾಟೆಕ್, ಮಡಿಕೇರಿ, ಇಬ್ಬನಿ ರೆಸಾರ್ಟ್ ಮಡಿಕೇರಿ ಹಾಗೂ ಕ್ಲಬ್‍ಮಹೀಂದ್ರ ರೆಸಾರ್ಟ್ ಮಡಿಕೇರಿ ಇವರು ತಮ್ಮ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಲಿದ್ದಾರೆ.
ಖಾಲಿ ಇರುವ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಈ ಉದ್ಯೋಗಮೇಳದಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೋಮಾ ಪದವಿ ಹಾಗೂ ಸ್ನಾತಕೋತರ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಭಾಗವಹಿಸಬಹುದು.
ಉದ್ಯೋಗ ಮೇಳಕ್ಕೆ ಆಗಮಿಸುವ ಅಭ್ಯರ್ಥಿಗಳು ವಿದ್ಯಾರ್ಹತೆಯ ಮೂಲ ದಾಖಲಾತಿಗಳು, ಅನುಭವ ಪ್ರಮಾಣ ಪತ್ರ (ಅನ್ವಯಿಸುವವರಿಗೆ ಮಾತ್ರ) ಹಾಗೂ ಸ್ವ-ವಿವರಗಳ ಪ್ರತಿಗಳೊಂದಿಗೆ ಹಾಜರಾಗುವಂತೆ ಜಿಲ್ಲಾ ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಕರೆ ಮಾಡಲು ದೂರವಾಣಿ ಸಂಖ್ಯೆ 8296020826.
ಅಂಗನವಾಡಿಗಳಿಗೆ ನೇಮಕ: ಸರ್ಕಾರದ ಆದೇಶದಂತೆ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ನೇಮಕಾತಿಯ ಪರಿಷ್ಕೃತ ಮಾರ್ಗಸೂಚಿಯಂತೆ ಕೊಡಗು ಜಿಲ್ಲಾಧಿಕಾರಿ ಅವರ ಅನುಮೋದನೆಯಂತೆ ಕೊಡಗು ಜಿಲ್ಲೆಯ ಮಡಿಕೇರಿ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇರುವ 12 ಅಂಗನವಾಡಿ ಕಾರ್ಯಕರ್ತೆ, ಮಿನಿ ಅಂಗನವಾಡಿ ಕಾರ್ಯಕರ್ತೆ 1 ಮತ್ತು 32 ಸಹಾಯಕಿ ಹುದ್ದೆ ಸೇರಿದಂತೆ ಒಟ್ಟು 45 ಹುದ್ದೆಯನ್ನು ಗೌರವಧನದ ಆಧಾರದ ಮೇಲೆ ಭರ್ತಿ ಮಾಡಲಾಗುತ್ತಿದೆ.
ಅಭ್ಯರ್ಥಿಗಳು https://karnemakaone.kar.nic.in/abcd/ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಹ ಹೆಣ್ಣು ಮಕ್ಕಳು ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳು ಅರ್ಜಿಯನ್ನು ಜೂನ್ 6ರ ಸಂಜೆ 5.30ರೊಳಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಮಡಿಕೇರಿ ಇವರನ್ನು ಸಂಪರ್ಕಿಸಬಹುದು. ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಆನ್‍ಲೈನ್‍ನಲ್ಲಿ ಸಲ್ಲಿಸಿದ ಅರ್ಜಿಯನ್ನು ಮಾತ್ರ ಪರಿಗಣಿಸಲಾಗುವುದು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ನೇಮಕಾತಿಯ ಮಾರ್ಗಸೂಚಿ/ ನಿಬಂಧನೆಗಳನ್ನು ಸ್ಪಷ್ಟವಾಗಿ ಓದಿಕೊಂಡು ನೀಡಲಾಗಿರುವ ಸೂಚನೆಯಂತೆ ಅರ್ಜಿಗಳನ್ನು ಭರ್ತಿ ಮಾಡಿ ಅವಶ್ಯಕ ದೃಢೀಕೃತ ದಾಖಲೆಗಳನ್ನು ಡಿಜಿ ಲಾಕರ್ ಬಳಸಿ ಸ್ಕ್ಯಾನ್ ಮಾಡಿ ಸಲ್ಲಿಸುವುದು.
ಆನ್‍ಲೈನ್ ಮೂಲಕವೇ ಎಲ್ಲಾ ಅಗತ್ಯ ದಾಖಲಾತಿಗಳನ್ನು ಸಲ್ಲಿಸುವುದು. ನಂತರ ಸಲ್ಲಿಸುವ ದಾಖಲಾತಿಗಳನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿ ಸಲ್ಲಿಸುವ ಅಭ್ಯಥಿಗಳಿಗೆ ಜೂನ್ 9ಕ್ಕೆ 19 ವರ್ಷ ಪೂರ್ಣಗೊಂಡಿರಬೇಕು ಹಾಗೂ 35 ವರ್ಷ ಮೀರಿರಬಾರದು. ವಿಕಲಚೇತನರಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಎಸ್‍ಎಸ್‍ಎಲ್‍ಸಿಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಓದಿರಬೇಕು. ಅಂಗನವಾಡಿ ಸಹಾಯಕಿ ಹುದ್ದೆಗೆ ಕನಿಷ್ಠ ವಿದ್ಯಾರ್ಹತೆ ಎಸ್‍ಎಸ್‍ಎಲ್‍ಸಿ ಅಥವಾ ತತ್ಸಮಾನ ತರಗತಿಯಲ್ಲಿ ಉತ್ತೀರ್ಣವಾಗಿರಬೇಕು.












Click it and Unblock the Notifications