ಕೊಡಗು ಪ್ರವಾಸಿಗರ ಗಮನಕ್ಕೆ: ಅನಧಿಕೃತ ಪ್ರವೇಶ ನಿರ್ಬಂಧ
ಮಡಿಕೇರಿ, ಮೇ 27: ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಮಳೆ ಆರಂಭವಾಗಿದೆ. ಕೊಡಗು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆ ಆರ್ಭಟಿಸುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರವಾಸ ಕೈಗೊಳ್ಳುವ ಜನರು ಹೆಚ್ಚು. ಕೊಡಗು ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಮಹತ್ವದ ಮಾಹಿತಿಯೊಂದಿದೆ. ಜಿಲ್ಲೆ ನದಿ, ಜಲಪಾತ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಅನಧಿಕೃತ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ವಿಪತ್ತು ನಿರ್ವಹಣಾ ಕಾಯ್ದೆ, 2005ಕಲಂ 34 (ಸಿ)ರಲ್ಲಿ ಉಲ್ಲೇಖಿಸಿರುವಂತೆ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 152 ಮತ್ತು 163 ರಲ್ಲಿ ದತ್ತವಾದ ಅಧಿಕಾರದಂತೆ ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಅನಧಿಕೃತ ಪ್ರವೇಶ ನಿಷೇಧಿಸಲಾಗಿದೆ.

ಕೊಡಗು ಜಿಲ್ಲೆಯಾದ್ಯಂತ ಇರುವ ಜಲಪಾತಗಳು, ಝರಿ, ನದಿ, ತೊರೆ, ಸಾರ್ವಜನಿಕ ಕೆರೆಗಳು, ಅಣೆಕಟ್ಟು, ಜಲಾಶಯದ ಪ್ರದೇಶಗಳಲ್ಲಿ ಸಾರ್ವಜನಿಕರು, ಪ್ರವಾಸಿಗರು ಅನಧಿಕೃತವಾಗಿ ನೀರಿನಲ್ಲಿ ಇಳಿಯುವುದು, ಈಜುವುದು, ಸಾಹಸ ಚಟುವಟಿಕೆ ನಡೆಸುವುದನ್ನು ಮುಂದಿನ ಆದೇಶದವರೆಗೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಆದೇಶಿಸಿದ್ದಾರೆ.
ಈ ಆದೇಶದ ಉಲ್ಲಂಘನೆಯು ವಿಪತ್ತು ನಿರ್ವಹಣಾ ಕಾಯ್ದೆ, 2005 ಸೆಕ್ಷನ್ 51(ಬಿ) ಮತ್ತು ಸಂಬಂಧಿತ ನಿಯಮ, ಕಾಯ್ದೆಗಳ ವಿವಿಧ ಕಲಂಗಳಡಿಯಲ್ಲಿ ದಂಡನೀಯವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಎಷ್ಟು ಮಳೆ?; ಕೊಡಗು ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24ಗಂಟೆ ಅವಧಿಯಲ್ಲಿ ಸರಾಸರಿ 126.79 ಮಿ. ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗಿನ ಮಳೆ 449.84 ಮಿ. ಮೀ. ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 325.40 ಮಿ. ಮೀ. ಮಳೆಯಾಗಿತ್ತು.
ಜಿಲ್ಲಾಡಳಿತದ ಮಾಹಿತಿಯಂತೆ ಮಡಿಕೇರಿ ತಾಲ್ಲೂಕಿನಲ್ಲಿ ಸರಾಸರಿ ಮಳೆ 143.30 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 657.83 ಮಿ. ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 445.27 ಮಿ. ಮೀ. ಮಳೆಯಾಗಿತ್ತು.
ವಿರಾಜಪೇಟೆ ತಾಲ್ಲೂಕಿನಲ್ಲಿ ಸರಾಸರಿ ಮಳೆ 155.30 ಮಿ. ಮೀ. ಆಗಿದೆ. ಜನವರಿಯಿಂದ ಇಲ್ಲಿಯವರೆಗಿನ ಮಳೆ 500.80 ಮಿ. ಮೀ. ಆಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 246.10 ಮಿ.ಮೀ. ಮಳೆಯಾಗಿತ್ತು.
ಪೊನ್ನಂಪೇಟೆ ತಾಲ್ಲೂಕಿನಲ್ಲಿ ಸರಾಸರಿ 120.28 ಮಿ. ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗಿನ ಮಳೆ 420.96 ಮಿ. ಮೀ. ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 333.15 ಮಿ.ಮೀ. ಮಳೆಯಾಗಿತ್ತು.
ಸೋಮವಾರಪೇಟೆ ತಾಲ್ಲೂಕಿನಲ್ಲಿ ಸರಾಸರಿ ಮಳೆ 112.65 ಮಿ. ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗಿನ ಮಳೆ 316.54 ಮಿ. ಮೀ. ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 251 ಮಿ. ಮೀ. ಮಳೆಯಾಗಿತ್ತು. ಕುಶಾಲನಗರ ತಾಲ್ಲೂಕಿನಲ್ಲಿ ಸರಾಸರಿ ಮಳೆ 102.40 ಮಿ. ಮೀ. ಮಳೆಯಾಗಿದೆ.
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಹಾಲಿ ನೀರಿನ ಮಟ್ಟ 2834.70 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 63.60 ಮಿ. ಮೀ., ಡ್ಯಾಂಗೆ ನೀರಿನ ಒಳಹರಿವು 1693 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ 100 ಕ್ಯುಸೆಕ್.












Click it and Unblock the Notifications