ಮಡಿಕೇರಿ; ಗಾಂಧೀಜಿ ಸ್ಮಾರಕ ಭವನ ನಿರ್ಮಾಣಕ್ಕೆ ಭೂಮಿ ಪೂಜೆ
ಮಡಿಕೇರಿ, ಅಕ್ಟೋಬರ್ 18: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸ್ಮಾರಕ ಭವನ ನಿರ್ಮಾಣಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್. ಎಸ್. ಬೋಸರಾಜು ಭೂಮಿ ಪೂಜೆ ಮಾಡಿದರು. ದೆಹಲಿಯ ರಾಜ್‍ಘಾಟ್ ಮಾದರಿಯಲ್ಲಿ ಮಡಿಕೇರಿಯಲ್ಲೂ ಗಾಂಧಿ ಭವನ ನಿರ್ಮಿಸಬೇಕೆಂದು ಸರ್ವೋದಯ ಸಮಿತಿ ಸೇರಿದಂತೆ ನೂರಾರು ಜನರು ಹೋರಾಟ ನಡೆಸುತ್ತಿದ್ದರು.
ಜಿಲ್ಲಾಡಳಿತ ಕೊಡಗು, ಜಿಲ್ಲಾ ಪಂಚಾಯತಿ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಾಗೂ ಸರ್ವೋದಯ ಸಮಿತಿ ಸಹಕಾರದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಚಿವರು ಶಾಸಕ ಡಾ. ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಎಂ. ಪಿ. ಸುಜಾ ಕುಶಾಲಪ್ಪ ಅವರ ಜೊತೆಗೆ ಗಾಂಧಿ ಮಂಟಪದಲ್ಲಿ ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಸಚಿವರು, "ಮಹಾತ್ಮ ಗಾಂಧೀಜಿ ಅವರ ಸ್ಮಾರಕ ಉದ್ಯಾನವನದಲ್ಲಿ ಪೂಜ್ಯ ಗಾಂಧೀಜಿಯವರ ಚಿತಾಭಸ್ಮವಿಟ್ಟು ಶಾಶ್ವತವಾದ ಸ್ಮಾರಕ ನಿರ್ಮಿಸಲು ಉದ್ದೇಶಿಸಲಾಗಿದ್ದು, ಆ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ 50 ಲಕ್ಷ ರೂ. ಬಿಡುಗಡೆ ಮಾಡಿದೆ" ಎಂದರು.
ಹಲವಾರು ವರ್ಷಗಳ ಬೇಡಿಕೆ; ಸಚಿವ ಎನ್. ಎಸ್. ಬೋಸರಾಜು ಮಾತನಾಡಿ, "ಗಾಂಧಿ ಸ್ಮಾರಕ ಭವನ ಪೂರ್ಣಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು. ಯಾವುದೇ ಕಾಮಗಾರಿಗಳು ಅರ್ಧಕ್ಕೆ ಸ್ಥಗಿತಗೊಳ್ಳಬಾರದು" ಎಂದು ಮನವಿ ಮಾಡಿದರು.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, "ಮಹಾತ್ಮ ಗಾಂಧೀಜಿಯವರ ಸ್ಮಾರಕ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು. ಸ್ಮಾರಕ ಉದ್ಯಾನವನವನ್ನು ಅಚ್ಚುಕಟ್ಟಾಗಿ ನಿರ್ಮಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು" ಎಂದು ಹೇಳಿದರು.
ಮಾಜಿ ಸಚಿವ ಹಾಗೂ ಸರ್ವೋದಯ ಸಮಿತಿ ಕಾರ್ಯಕಾರಿ ಸದಸ್ಯ ಎಂ. ಸಿ. ನಾಣಯ್ಯ ಮಾತನಾಡಿ, "ಮಹಾತ್ಮ ಗಾಂಧೀಜಿ ಅವರು ಮಡಿಕೇರಿಗೆ ಭೇಟಿ ನೀಡಿ ಗಾಂಧಿ ಮೈದಾನದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದು, ಈ ಸ್ಥಳಕ್ಕೆ ಗಾಂಧಿ ಮೈದಾನ ಎಂದು ಹೆಸರು ಬಂದಿದೆ" ಎಂದು ತಿಳಿಸಿದರು.
"ಈ ನಿಟ್ಟಿನಲ್ಲಿ ಗಾಂಧೀಜಿ ಅವರ ಚಿತಾಭಸ್ಮವನ್ನಿಟ್ಟು ಶಾಶ್ವತವಾದ ಸ್ಮಾರಕ ಉದ್ಯಾನವನ ನಿರ್ಮಿಸುವಲ್ಲಿ ಹಲವು ವರ್ಷಗಳಿಂದ ಪ್ರಯತ್ನಗಳು ನಡೆದಿದ್ದು, ಈ ಸ್ಮಾರಕ ಉದ್ಯಾನವನ ಕಾಮಗಾರಿಯನ್ನು ಆದಷ್ಟು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತಾಗಬೇಕು" ಎಂದು ಸಲಹೆ ಮಾಡಿದರು.
ಸರ್ವೋದಯ ಸಮಿತಿ ನಿಕಟ ಪೂರ್ವ ಅಧ್ಯಕ್ಷ ಟಿ. ಪಿ. ರಮೇಶ್ ಮಾತನಾಡಿ, "ಜಿಲ್ಲಾಡಳಿತ ಸಹಕಾರದಲ್ಲಿ ಸರ್ವೋದಯ ಸಮಿತಿ ವತಿಯಿಂದ ಕಳೆದ 65 ವರ್ಷಗಳಿಂದ ಸರ್ವಧರ್ಮ ಪ್ರಾರ್ಥನೆ ಮಾಡಿಕೊಂಡು ಬರಲಾಗಿದೆ. ಕಳೆದ ವರ್ಷ 50 ಲಕ್ಷ ರೂ. ಬಿಡುಗಡೆಯಾಗಿದ್ದು, ಸ್ಮಾರಕ ಉದ್ಯಾನವನ ಕಾಮಗಾರಿಗೆ ಯಾವುದೇ ತೊಂದರೆಯಾಗದಂತೆ ಗಮನಹರಿಸಬೇಕು" ಎಂದು ಕೋರಿದರು.
ಮಹಾತ್ಮ ಗಾಂಧೀಜಿ ಹುತಾತ್ಮರಾದಾಗ ಅವರ ಅಂತಿಮ ದರ್ಶನಕ್ಕೆ ತೆರಳಿದ ಕೊಡಗು ಜಿಲ್ಲೆಯ ಸರ್ವೋದಯ ಸಮಿತಿಯ ಮುಖಂಡರು ಕೊಡಗಿಗೆ ತಂದಿದ್ದ ಗಾಂಧೀಜಿಯವರ ಚಿತಾಭಸ್ಮವನ್ನು ಜಿಲ್ಲಾಡಳಿತದ ವಶದಲ್ಲಿ ಜಿಲ್ಲಾ ಖಜಾನೆಯಲ್ಲಿ ಇರಿಸಲಾಗಿದೆ. ಅಂದಿನಿಂದ ಇಂದಿನವರೆಗೆ ಚಿತಾಭಸ್ಮವನ್ನು ಶಾಶ್ವತವಾಗಿ ಒಂದೆಡೆ ಇರಿಸಿ ಗೌರವ ಸಲ್ಲಿಸಲು ಸಾಧ್ಯವಾಗಿರಲಿಲ್ಲ.
ಜಿಲ್ಲಾ ಖಜಾನೆಯಿಂದ ಪ್ರತಿವರ್ಷ ಅವರ ಪುಣ್ಯಸ್ಮರಣೆ ದಿನದಂದು ಚಿತಾಭಸ್ಮವನ್ನು ಸರ್ಕಾರಿ ಗೌರವದೊಂದಿಗೆ ಮೆರವಣಿಗೆಯಲ್ಲಿ ತಂದು ಗೌರವ ಸಲ್ಲಿಸಿ ಪುನಃ ಜಿಲ್ಲಾ ಖಜಾನೆಗೆ ತೆಗೆದುಕೊಂಡು ಹೋಗಲಾಗುತ್ತಿತ್ತು.
ಕರ್ನಾಟಕ ಸರ್ಕಾರ ಬಜೆಟ್‌ನಲ್ಲಿ ಗಾಂಧಿ ಮೈದಾನದಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ 50 ಲಕ್ಷ ರೂ. ಅನುದಾನ ಘೋಷಣೆ ಮಾಡಿತ್ತು. ಆದರೆ ಜಾಗದ ದಾಖಲೆಗಳ ಸಮಸ್ಯೆಯಿಂದಾಗಿ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಗಲಿಲ್ಲ. ಬಳಿಕ ಕೊಡಗು ಜಿಲ್ಲಾಧಿಕಾರಿಯಾಗಿ ಆಗಮಿಸಿದ್ದ ಡಾ. ಬಿ. ಸಿ. ಸತೀಶ್ 32 ಸೆಂಟ್ ಜಾಗವನ್ನು ಗಾಂಧಿ ಭವನಕ್ಕಾಗಿ ಮಂಜೂರು ಮಾಡಿದ್ದರು.












Click it and Unblock the Notifications