Monsoon in Kodagu: ಮಳೆಯಲಿ ಜೊತೆಯಲಿ..ಇದು ಕೊಡಗಿನವರ ಮಳೆಗಾಲದ ಬದುಕು
ಮಡಿಕೇರಿ, ಜುಲೈ 07: ಮಳೆಗಾಲ ಎಂದಾಕ್ಷಣ ಕೊಡಗಿನ ಜನರಲ್ಲಿ ಸಣ್ಣಗಿನ ನಡುಕ ಹುಟ್ಟುತ್ತದೆ. ತೋಟದ ನಡುವೆ, ನದಿ ತಟದ ಪ್ರದೇಶಗಳಲ್ಲಿ, ಬೆಟ್ಟಗುಡ್ಡಗಳ ತಪ್ಪಲಲ್ಲಿ ಮನೆ ಕಟ್ಟಿಕೊಂಡು ಜೀವನ ನಡೆಸುವವರೆಲ್ಲರೂ ಭಯದಲ್ಲಿಯೇ ಜೀವನ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗಿನ ವರ್ಷಗಳಲ್ಲಿ ಯಾವಾಗ? ಯಾವ ರೀತಿಯಲ್ಲಿ ಮಳೆ ಸುರಿಯುತ್ತದೆ ಎನ್ನುವುದನ್ನು ಹೇಳಲಾಗದ ಪರಿಸ್ಥಿತಿವುಂಟಾಗಿದೆ. ವಾರಾನುಗಟ್ಟಲೆ ಸುರಿಯುವ ಮಳೆ ಒಮ್ಮೆಲೆ ಸುರಿದು ಸಂಕಷ್ಟವನ್ನು ತಂದೊಡ್ಡುತ್ತಿದೆ. ಹೀಗಾಗಿ ಸದಾ ಎಚ್ಚರಿಕೆಯಲ್ಲಿಯೇ ದಿನಗಳನ್ನು ಕಳೆಯ ಬೇಕಾಗಿದೆ.
ಹಿಂದಿನ ಕಾಲದಲ್ಲಿ ಸುರಿಯುತ್ತಿದ್ದ ಮಳೆಗೂ ಈಗ ಸುರಿಯುವ ಮಳೆಗೂ ವ್ಯತ್ಯಾಸ ಕಾಣುತ್ತಿದೆ. ಮೊದಲೆಲ್ಲ ಜಿಟಿ ಜಿಟಿ ಸುರಿಯುತ್ತಾ ಮಳೆ ವೇಗ ಪಡೆದುಕೊಳ್ಳುತ್ತಿತ್ತು. ಜುಲೈ ತಿಂಗಳ ಹೊತ್ತಿಗೆ ಎಲ್ಲೆಂದರರಲ್ಲಿ ಅಂತರ್ಜಲಗಳು ಹೆಚ್ಚಾಗಿ ನೀರಾಗಿ ಹರಿಯಲಾರಂಭಿಸುತ್ತಿದ್ದವು. ಇದರಿಂದ ಮಳೆ ಕಡಿಮೆಯಾದರೂ ಜಲ ನೀರು ನದಿಗಳನ್ನು ಸೇರುತ್ತಿದ್ದರಿಂದ ನದಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರಲಿಲ್ಲ. ಆದರೀಗ ಒಮ್ಮೆಲೆ ಮಳೆ ಸುರಿದಾಗ ನೀರು ಕೂಡ ಎಲ್ಲೆಂದರಲ್ಲಿ ಹರಿದು ಬರುತ್ತದೆ. ಮಳೆ ಕಡಿಮೆಯಾಗುತ್ತಿದ್ದಂತೆಯೇ ನದಿಗಳಲ್ಲಿ ನೀರಿನ ಪ್ರಮಾಣವೂ ಕಡಿಮೆಯಾಗಿ ಬಿಡುತ್ತಿದೆ.

ಇನ್ನು ಮಳೆಗಾಲದಲ್ಲಿ ರಸ್ತೆಗಳು ಕೆಸರುಮಯವಾಗಿ ಓಡಾಡುವುದೇ ಕಷ್ಟವಾಗುತ್ತದೆ. ಇದರ ಜತೆಗೆ ಬೆಟ್ಟಗುಡ್ಡ, ಕಂದಕಗಳಲ್ಲಿ ಮನೆ ಮಾಡಿಕೊಂಡಿರುವವರಲ್ಲಿಗೆ ವಾಹನಗಳೇ ತೆರಳುವುದಿಲ್ಲ. ಕೆಲವು ಕಡೆಗಳಲ್ಲಿ ನದಿ ತುಂಬಿ ಹರಿದಾಗ ಸಂಪರ್ಕವೇ ಕಡಿತಗೊಳ್ಳುತ್ತದೆ. ಆಗಾಗ್ಗೆ ಮರಗಳು ಬೀಳುವುದು, ವಿದ್ಯುತ್ ಕಂಬಗಳು ಮುರಿಯುವುದು ಹೀಗೆ ಹಲವು ಸಮಸ್ಯೆಗಳಿಂದಾಗಿ ವಿದ್ಯುತ್ ಕೈಕೊಡುತ್ತದೆ. ಮಳೆಯಲ್ಲಿಯೇ ಗದ್ದೆ ತೋಟಗಳಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ. ಹೀಗೆ ಹತ್ತಾರು ಜಂಜಾಟಗಳ ನಡುವೆ ಇಲ್ಲಿನವರ ಬದುಕು ಸಾಗುತ್ತದೆ.
ಮಳೆಗಾಲದಲ್ಲಿ ನಡೆಯುವ ವಿಶೇಷ ಆಚರಣೆ
ಇದೆಲ್ಲದರ ನಡುವೆ ಕೊಡಗಿನ ಮಳೆಗಾಲ ಮತ್ತು ಮಳೆಗಾಲದಲ್ಲಿ ಆಚರಿಸಲ್ಪಡುವ ಆಚರಣೆಗಳು, ತಿನಿಸುಗಳು, ಕೃಷಿ ಚಟುವಟಿಕೆ ಎಲ್ಲವೂ ಭಿನ್ನವಾಗಿರುತ್ತವೆ. ಬಹುಶಃ ಇಲ್ಲಿನವರು ಮಳೆಗಾಲದಲ್ಲಿ ಏನೇ ಸಂಕಷ್ಟ ಅನುಭವಿಸಿದರೂ ಅದರಾಚೆಗೆ ಮಳೆಗಾಲವನ್ನು ಧೈರ್ಯವಾಗಿ ಮತ್ತು ಖುಷಿಯಿಂದಲೇ ಎದುರಿಸುತ್ತಾರೆ. ಮೊದಲೇ ಶೀತ ಪ್ರದೇಶವಾಗಿರುವ ಕೊಡಗಿನಲ್ಲಿ ಮಳೆಯೂ ಸುರಿಯುತ್ತಿದ್ದರೆ ಇಡೀ ಮನೆಗಳು ತಣ್ಣಗಿರುತ್ತವೆ. ಜತೆಗೆ ಇಲ್ಲಿನ ನೀರು ಕೂಡ ಫ್ರಿಡ್ಜ್ ನಲ್ಲಿಟ್ಟಂತೆ ಇರುತ್ತದೆ. ಶೀತದಲ್ಲಿಯೇ ಬದುಕು ನಡೆಸಬೇಕಾಗಿರುವುದರಿಂದ ಮೈಬೆಚ್ಚಗೆ ಆಗುವ ಮತ್ತು ಶೀತವನ್ನು ಕಡಿಮೆ ಮಾಡುವ ಗಿಡಮೂಲಿಕೆಗಳನ್ನು ಬಳಸುವುದು ಇಲ್ಲಿನ ಮತ್ತೊಂದು ವಿಶೇಷ.
ಮಳೆಗಾಲದಲ್ಲಿ ಸುತ್ತಮುತ್ತಲ ಪ್ರದೇಶಗಳಲ್ಲಿ ಸಿಗುವ ಗಿಡಮೂಲಿಕೆಗಳನ್ನು ಬಳಸಿ ಆಹಾರ ಪದಾರ್ಥಗಳನ್ನು ತಯಾರಿಸಿ ಮನೆಮಂದಿಯೆಲ್ಲ ಸೇವಿಸುತ್ತಾರೆ. ಈ ಆಹಾರ ಸೇವನೆಯೂ ಒಂದು ಆಚರಣೆಯಾಗಿದೆ. ನಡು ಮಳೆಗಾಲದಲ್ಲಿಯೇ ಇಲ್ಲಿ ಭತ್ತದ ಕೃಷಿ ಆರಂಭವಾಗುತ್ತದೆ. ಬೆಳಗ್ಗಿನಿಂದ ರಾತ್ರಿವರೆಗೆ ಮಳೆ ನಡುವೆ ಕೆಸರು ನೀರು ತುಂಬಿದ ಗದ್ದೆಯಲ್ಲಿ ಸೊಂಟ ಬಗ್ಗಿಸಿ ನಾಟಿ ನೆಡುವುದು ಸುಲಭದ ಕೆಲಸವಲ್ಲ. ಅದನ್ನು ಮಾಡಬೇಕಾದರೆ ದೈಹಿಕವಾಗಿ ಶಕ್ತಿ ಬೇಕು. ಇಂತಹ ಶಕ್ತಿಯನ್ನು ಇಲ್ಲಿನ ಸ್ಥಳೀಯ ಆಹಾರ ನೀಡುತ್ತವೆ.
ಆಚರಣೆ ಹಿಂದೆ ವೈಜ್ಞಾನಿಕ ಕಾರಣಗಳಿವೆ
ಇವತ್ತು ಮೊದಲಿಗೆ ಹೋಲಿಸಿದರೆ ಭತ್ತದ ಕೃಷಿ ಕಡಿಮೆಯಾಗಿದೆ. ಜತೆಗೆ ಎತ್ತುಗಳಿಂದ ಉಳುಮೆ ಮಾಡುವವರು ಕಡಿಮೆಯಾಗಿದ್ದಾರೆ. ಟ್ರ್ಯಾಕ್ಟರ್ ಮತ್ತು ಟಿಲ್ಲರ್ ಮೂಲಕ ಉಳುಮೆ ಮಾಡಿ ಯಂತ್ರದ ಮೂಲಕ ನಾಟಿಯನ್ನು ಕೆಲವೆಡೆ ಮಾಡಿದರೂ ಇನ್ನು ಕೆಲವು ಕಡೆಗಳಲ್ಲಿ ಜನರೇ ನಾಟಿ ನೆಡುತ್ತಾರೆ. ಈ ನಾಟಿ ಕಾರ್ಯವನ್ನು ಸಡಗರ ಸಂಭ್ರಮದಿಂದ ಮಾಡುತ್ತಾರೆ. ಇದರ ಜತೆಗೆ ಹಿಂದಿನ ಕಾಲದ ಹಿರಿಯರು ಆಚರಿಸಿಕೊಂಡು ಬಂದಿರುವ ಆಚರಣೆಯನ್ನು ಇವತ್ತಿಗೂ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಈ ಆಚರಣೆಗಳ ಹಿಂದೆ ವೈಜ್ಞಾನಿಕ ಕಾರಣಗಳು ಇರುವುದನ್ನು ತಳ್ಳಿಹಾಕಲಾಗದು.

ಮಳೆಗಾಲದಲ್ಲಿ ಆಯಾಯ ಸಂದರ್ಭಕ್ಕೆ ತಕ್ಕಂತೆ ಸುತ್ತಮುತ್ತಲಿದ್ದ ಗಿಡಮೂಲಿಕೆಗಳಲ್ಲಿನ ಔಷಧೀಯ ಗುಣಗಳನ್ನು ಗಮನಿಸಿ ಅದನ್ನು ಬಳಸಲು ಆರಂಭಿಸಿದ್ದರಲ್ಲದೆ, ಅದರ ಸೇವನೆಗೆ ಅನುಕೂಲವಾಗುವಂತೆ ಆಚರಣೆಯನ್ನು ಜಾರಿ ಮಾಡಿದರು. ಅದು ಹಾಗೆಯೇ ಮುಂದುವರೆದು ಇಂದಿಗೂ ಅಚರಣೆಯಲ್ಲಿದೆ. ಕೆಲವು ದಶಕಗಳ ಹಿಂದಕ್ಕೆ ಹೋದರೆ ಮಳೆಗಾಲ ಎನ್ನುವುದು ಕೊಡಗಿನವರ ಪಾಲಿಗೆ ಒಂದು ರೀತಿಯ ಚಾಲೆಂಜ್ ಆಗಿತ್ತು. ಸುರಿಯುವ ಮಳೆಯಲ್ಲಿಯೇ ಎಲ್ಲವನ್ನೂ ಮಾಡಬೇಕಾಗಿತ್ತು. ಹೊರಗಿನ ಪ್ರಪಂಚದ ಸಂಪರ್ಕದಿಂದ ದೂರವಾಗಿ ಭತ್ತದ ಕೃಷಿಯಲ್ಲಿಯೇ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದ ಜನ ಭತ್ತದ ಕೃಷಿ ನಡುವೆ ಎಲ್ಲರೂ ಒಟ್ಟಾಗಿ ಸೇರಿ ಕೃಷಿ ಕಾರ್ಯ ಮಾಡುವ ಮೂಲಕ ದೊಡ್ಡನಾಟಿಯಂದು ಒಂಡೆಡೆ ಕಲೆತು ನಾಟಿ ಮಾಡಿ ಬಳಿಕ ಅದರಲ್ಲಿ ಓಟ ಏರ್ಪಡಿಸಿ ಗೆದ್ದವರನ್ನು ಅಭಿನಂದಿಸಿ, ಸೋತವರಲ್ಲಿ ಆತ್ಮವಿಶ್ವಾಸ ತುಂಬಿ ಮನರಂಜನೆ ಪಡೆಯುತ್ತಿದ್ದರು.
ವಿಕೋಪಗಳಿಲ್ಲದೆ ಮಳೆಗಾಲ ಕಳೆಯಲು ಪ್ರಾರ್ಥನೆ
ಮಳೆಗಾಲದಲ್ಲಿ ಕೆಲಸದ ನಡುವೆ ಪೇಟೆ ಪಟ್ಟಣಗಳತ್ತ ಮುಖ ಮಾಡಲು ಸಾಧ್ಯವಾಗದ ಕಾಲವಿತ್ತು. ಅವತ್ತಿನ ದಿನಗಳಲ್ಲಿ ಶರೀರವನ್ನು ಶೀತದಿಂದ ರಕ್ಷಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕಾಗಿತ್ತು. ಹೀಗಾಗಿ ಅವತ್ತು ಎಲ್ಲೆಡೆಯೂ ಸುಲಭವಾಗಿ ಬೆಳೆಯುತ್ತಿದ್ದ ಗಿಡಮೂಲಿಕೆಗಳಲ್ಲಿರುವ ಆರೋಗ್ಯಕಾರಿ ಗುಣ ಮತ್ತು ರುಚಿಯನ್ನು ಅರಿತು ಅವುಗಳನ್ನು ಬಳಕೆ ಮಾಡುತ್ತಾ ಬಂದರು. ಅದು ಇಂದಿಗೂ ಮುಂದುವರೆದಿದೆ. ಮಳೆಗಾಲದ ತಿನಿಸಾಗಿ ತಮ್ಮ ಸುತ್ತಮುತ್ತ ಸಿಗುವ ಏಡಿ, ಅಣಬೆ, ಬಿದಿರು ಕಣಿಲೆ, ಮರದಲ್ಲಿ ಬೆಳೆಯುವ ಕೆಸದ ಪತ್ರೊಡೆ, ನಾಟಿಕೋಳಿಯನ್ನು ಹೆಚ್ಚು ಹೆಚ್ಚಾಗಿ ಸೇವಿಸುತ್ತಿದ್ದರು. ಅದು ಈಗಲೂ ನಡೆಯುತ್ತಿದೆ.
ಯಾವತ್ತಾದರೂ ಒಂದು ದಿನ ಕೊಡಗಿಗೆ ತೆರಳಿ ಮಳೆಗೆ ಮೈಕೊಟ್ಟು, ಚಳಿಗೆ ಬೆಚ್ಚಗಿನ ಕಾಫಿ ಹೀರಿದಾಗ ಹಾಯೆನಿಸುತ್ತದೆ. ಆದರೆ ಬಿಡುವಿಲ್ಲದ ಮಳೆಗೆ ಮೈಕೊಟ್ಟು ನಿತ್ಯ ಕೆಲಸ ಕಾರ್ಯಗಳನ್ನು ಮಾಡುವುದು ಸುಲಭವೇನಲ್ಲ. ಆದರೂ ಧಾರಾಕಾರ ಮಳೆ ಸುರಿದರೂ ಅದನ್ನು ಎದುರಿಸಿ ತಮ್ಮ ದಿನ ನಿತ್ಯದ ಕೆಲಸ ಕಾರ್ಯಗಳಲ್ಲಿ ಇಲ್ಲಿನವರು ತೊಡಗಿಸಿಕೊಳ್ಳುತ್ತಾರೆ. ಇದು ಇಲ್ಲಿನವರಿಗೆ ಅಭ್ಯಾಸವಾಗಿ ಹೋಗಿದೆ. ಈಗೀಗ ಮಳೆಗಾಲವನ್ನು ಎದುರಿಸುವುದಕ್ಕಿಂತ ಮಳೆಗಾಲದಲ್ಲಿ ನಡೆಯುವ ದುರಂತಗಳನ್ನು ಎದುರಿಸುವುದೇ ಕಷ್ಟವಾಗಿ ಪರಿಣಮಿಸಿದೆ. ಯಾವುದೇ ಪ್ರಾಕೃತಿಕ ವಿಕೋಪವಿಲ್ಲದೆ ಮಳೆಗಾಲ ಕಳೆದರೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ.












Click it and Unblock the Notifications