ದಿಡ್ಡಳ್ಳಿ ಆದಿವಾಸಿಗಳ ಸಮಸ್ಯೆಗಿಲ್ಲವೆ ಪರಿಹಾರ?
ದಿಡ್ಡಿಳ್ಳಿ ಆದಿವಾಸಿಗಳ ಸಮಸ್ಯೆಗೆ ಪರಿಹಾರ ಸಿಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಸರ್ಕಾರ ಆದಿವಾಸಿಗಳಿಗಾಗಿ ಪ್ರತ್ಯೇಕ ನಿವೇಶನ ನೀಡಿದ್ದರೂ ದಿಡ್ಡಳ್ಳಿಯಿಂದ ಆದಿವಾಸಿಗಳು ಕದಲುವ ಸೂಚನೆ ಸಿಕ್ಕುತ್ತಿಲ್ಲ.
ಮಡಿಕೇರಿ, ಮೇ 05: ಮಡಿಕೇರಿ ಸಿದ್ದಾಪುರ ಬಳಿಯ ದಿಡ್ಡಳ್ಳಿ ಅರಣ್ಯ ಪ್ರದೇಶದ ಈ ಹಿಂದೆ ತೆರವುಗೊಳಿಸಿದ ಅರಣ್ಯ ಪ್ರದೇಶದಲ್ಲಿ ಮತ್ತೆ ಗುಡಿಸಲು ನಿರ್ಮಿಸುವ ಕಾರ್ಯವನ್ನು ಆದಿವಾಸಿಗಳು ಮಾಡಿದ್ದು, ಈಗಾಗಲೇ ನೂರಾರು ಗುಡಿಸಲುಗಳು ತಲೆಯೆತ್ತಿವೆ. ಅವುಗಳನ್ನು ತೆರವುಗೊಳಿಸಲು ಹೋದ ಸಂದರ್ಭ ಗಿರಿಜನ ನಾಯಕಿ ಮುತ್ತಮ್ಮ ಎಂಬುವರು ಮರವೇರಿ ಪ್ರತಿಭಟನೆ ನಡೆಸಿರುವುದು ಸುದ್ದಿಗೆ ಗ್ರಾಸವಾಗಿದೆ.
ಈಕೆ ಸುಮಾರು ಐದು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದು, ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಇದೇ ಮುತ್ತಮ್ಮ ಈ ಹಿಂದೆ ಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ದಿಡ್ಡಳ್ಳಿಯಲ್ಲಿ ಗುಡಿಸಲು ತೆರವುಗೊಳಿಸಿ ಪೊಲೀಸ್ ಕಾವಲು ಹಾಕಲಾಗಿತ್ತು. ಇದೀಗ ಮತ್ತೆ ಸುಮಾರು ಇನ್ನೂರಕ್ಕೂ ಹೆಚ್ಚು ಗುಡಿಸಲುಗಳನ್ನು ನಿರ್ಮಿಸಲಾಗಿದ್ದು, ಸಮಸ್ಯೆಗೆ ಪರಿಹಾರ ಸಿಗುವ ಬದಲು ದಿನದಿಂದ ದಿನಕ್ಕೆ ಸಮಸ್ಯೆ ಜಟಿಲವಾಗುತ್ತಿದೆ.[ದಿಡ್ಡಳ್ಳಿ ಅರಣ್ಯದಲ್ಲಿ ಮತ್ತೆ ತಲೆ ಎತ್ತಿದ ಗುಡಿಸಲು!]

ಈಗಾಗಲೇ ದಿಡ್ಡಳ್ಳಿ ಹೊರತು ಪಡಿಸಿ ಬೇರೆಡೆಗಳಲ್ಲಿ ನಿವೇಶನ ನೀಡುವ ಪ್ರಕ್ರಿಯೆ ನಡೆದಿದ್ದು, ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆಗೆ ಬೇಕಾದ ಸಿದ್ಧತೆಗಳು ನಡೆಯುತ್ತಿದ್ದರೂ ಯಾವುದೂ ತ್ವರಿತವಾಗಿ ನಡೆಯದ ಕಾರಣ ಕಳೆದ ಆರು ತಿಂಗಳಿನಿಂದ ಸಮಸ್ಯೆ ಸಮಸ್ಯೆಯಾಗಿಯೇ ಮುಂದುವರೆದಿದೆ.
ಕೆಲವರು ಆದಿವಾಸಿಗಳ ಈ ಸಮಸ್ಯೆಯನ್ನು ಮುಂದಿಟ್ಟುಕೊಂಡು ರಾಜಕೀಯವಾಗಿ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆಯೇ ಹೊರತು ಒಂದೆಡೆ ಕುಳಿತು ಎಲ್ಲರೂ ಒಟ್ಟಾಗಿ ಸೇರಿ ಸಮಸ್ಯೆಗೆ ಪರಿಹಾರ ಹುಡುಕು ಪ್ರಯತ್ನವನ್ನು ಮಾಡುತ್ತಿಲ್ಲ. ಖುದ್ದು ಕಂದಾಯ ಸಚಿವರೇ ಹಾಡಿಗೆ ಬಂದು ಹೋದರೂ ಸಮಸ್ಯೆ ಬಗೆಹರಿದಿಲ್ಲ ಎಂದರೆ ಈ ಪ್ರಕರಣ ಇನ್ನೆಷ್ಟು ದಿನ ಹೀಗೆಯೇ ಮುಂದುವರೆಯಬೇಕು ಎನ್ನುವುದು ಪ್ರಶ್ನೆಯಾಗಿದೆ.[ದಿಡ್ಡಳ್ಳಿ ಗುಂಡಿನ ದಾಳಿ ಪ್ರಕರಣ:ಆರೋಪಿ ಬಂಧನ]

ಇಷ್ಟಕ್ಕೂ ಆದಿವಾಸಿಗಳು ಈ ಜಾಗದಲ್ಲಿ ತಲತಲಾಂತರದಿಂದ ಇದ್ದವರಲ್ಲ. ಎಲ್ಲೆಲ್ಲೋ ಇದ್ದವರನ್ನು ಇಲ್ಲಿಗೆ ಕರೆಯಿಸಿ ದಿಢೀರ್ ಆಗಿ ಗುಡಿಸಲು ನಿರ್ಮಿಸಲು ಕುಮ್ಮಕ್ಕು ಕೊಟ್ಟವರೂ ಇದ್ದಾರೆ. ಅಷ್ಟೇ ಅಲ್ಲ ಆದಿವಾಸಿಗಳಿಂದ ಇದಕ್ಕಾಗಿ ಹಣ ಪಡೆದವರೂ ಇದ್ದಾರೆ. ತೋಟದ ಲೈನ್ ಮನೆಗಳಲ್ಲಿ, ಬಾಡಿಗೆ ಮನೆಗಳಲ್ಲಿ ಮತ್ತೆಲ್ಲೋ ಕಾಡಿನ ನಡುವೆ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿದ್ದ ಆದಿವಾಸಿಗಳು ಇಲ್ಲಿಗೆ ಬಂದು ಹೋರಾಟ ನಡೆಸುತ್ತಿದ್ದಾರೆ.
ಈಗಾಗಲೇ ಮಕ್ಕಳೊಂದಿಗೆ ಬೀಡು ಬಿಟ್ಟು ಪ್ಲಾಸ್ಟಿಕ್ ಹೊದಿಕೆಯ ಬಿಡಾರ ಹೂಡಿರುವ ಇವರು ಮಳೆ ಬಂದರೆ ಸಂಕಷ್ಟದಲ್ಲಿ ದಿನದೂಡಬೇಕಾಗುತ್ತದೆ. ಕೆಲವರು ಇದನ್ನರಿತು ಈ ಹೋರಾಟವೇ ಬೇಡವೆಂದು ಜಿಲ್ಲಾಡಳಿತ ಗುರುತಿಸಿದ ಜಾಗವಿರುವ ಬಸವನಳ್ಳಿಗೆ ತೆರಳಿ ಅಲ್ಲಿ ವಾಸ್ತವ್ಯ ಹೂಡಲು ತಯಾರಿಯಲ್ಲಿದ್ದಾರೆ. ಅರಣ್ಯ ಪ್ರದೇಶದಲ್ಲಿ ಮತ್ತೊಮ್ಮೆ ಗುಡಿಸಲು ನಿರ್ಮಾಣ ಮಾಡಿರುವ ಆದಿವಾಸಿಗಳಿಗೆ ಅಲ್ಲಿಂದ ತೆರಳುವಂತೆ ಸೂಚನೆಯನ್ನು ಈಗಾಗಲೇ ನೀಡಿದ್ದರೂ ಕೆಲವರು ಹಠಕ್ಕೆ ಬಿದ್ದು ಗುಡಿಸಲು ನಿರ್ಮಾಣದಲ್ಲಿ ಮುಂದಾಗಿದ್ದಾರೆ.[ಆದಿವಾಸಿ ಗುಡಿಸಿಲಿನ ಮೇಲೆ ಗುಂಡಿನ ದಾಳಿ: ಕೊಡಗಿನಲ್ಲಿ ನಕ್ಸಲರ ಅಟ್ಟಹಾಸ?!]
ಕೂಡಲೇ ಸರ್ಕಾರ ಈ ಬಗ್ಗೆ ಗಮನಹರಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಅಗತ್ಯವಿದೆ. ಇಲ್ಲದೆ ಹೋದರೆ ಆದಿವಾಸಿಗಳು ಯಾರದ್ದೋ ರಾಜಕೀಯ ದುರುದ್ದೇಶಕ್ಕೆ ಬಲಿಯಾಗಿ ಬದುಕನ್ನೇ ನರಕ ಮಾಡಿಕೊಳ್ಳಬೇಕಾಗಬಹುದೇನೋ?












Click it and Unblock the Notifications