Kodagu landslide: ಪ್ರವಾಹ, ವಿಪತ್ತು ಪ್ರದೇಶಗಳಿಗೆ ಸಿದ್ದರಾಮಯ್ಯ ಖುದ್ದು ಭೇಟಿ, ಆರ್ಥಿಕ ನೆರವು
ಕೊಡಗು, ಆಗಸ್ಟ್ 02: ಭಾರೀ ಮಳೆಯಿಂದಾಗಿ ಕೊಡುಗು ಜಿಲ್ಲೆ ವ್ಯಾಪ್ತಿಯಲ್ಲಿ ಭೂಕುಸಿತ ಸಂಭವಿಸಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ₹746 ಕೋಟಿ ಮತ್ತು ಮಡಿಕೇರಿ ಜಿಲ್ಲಾ ಪಿಡಿ ಖಾತೆಯಲ್ಲಿ ₹46 ಕೋಟಿ ಹಣ ಇದೆ. ಅಗತ್ಯಬಿದ್ದರೆ ಇನ್ನೂ ಹೆಚ್ಚಿನ ಆರ್ಥಿಕ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಯಲ್ಲಿ ಭೂ ಕುಸಿತ ಸಂಭವಿಸಿದ ಮತ್ತು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧಿಕಾರಿಗಳಿಂದ ಮಾಹಿತಿ ಪಡೆಯುವ ಜೊತೆಗೆ ಸಂತ್ರಸ್ತರಿಂದ ಸಮಸ್ಯೆ, ಅಹವಾಲು ಆಲಿಸಿದರು.

ಪೊನ್ನಂಪೇಟೆ ತಾಲ್ಲೂಕಿನ ಶ್ರೀಮಂಗಲ ಕುಟ್ಟದ ಗುಡ್ಡ ಕುಸಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ ನಂತರ ಸುದ್ದಿಗೋಷ್ಠಿ ನಡೆಸಿ ಸಿದ್ದರಾಮಯ್ಯ ಅವರು ಮಾತನಾಡಿದರು. ಮಳೆ ಬೀಳುತ್ತಲೇ ಇರುವುದರಿಂದ ಭೂ ಕುಸಿತದ ಪ್ರದೇಶವನ್ನು ಸರಿ ಪಡಿಸಲು ಕಷ್ಟ ಆಗುತ್ತಿದೆ. ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಬೇಕು ಎನ್ನುವುದು ನಮ್ಮ ನಿಲುವಾಗಿದೆ. ಈ ಬಗ್ಗೆ ಅರಣ್ಯ ಸಚಿವರ ಜೊತೆ ಮತ್ತೊಮ್ಮೆ ಚರ್ಚಿಸಿ ಅಂತಿಮ ತೀರ್ಮಾನ ಮಾಡಲಾಗುವುದು ಎಂದರು.
ಆಸ್ತಿಪಾಸ್ತಿ ಹಾನಿಯ ಲೆಕ್ಕ ಕೊಟ್ಟ ಸಿಎಂ ಸಿದ್ದರಾಮಯ್ಯ
ಗುಡ್ಡ ಕುಸಿತದ ಪರಿಣಾಮ ಸುಮಾರು 20ಕ್ಕೂ ಹೆಚ್ಚು ಕುಟುಂಬಗಳು ಸಂಪರ್ಕ ಕಳೆದುಕೊಂಡಿವೆ. ತುರ್ತಾಗಿ ತೂಗು ಸೇತುವೆ, ರಸ್ತೆ ನಿರ್ಮಾಣದ ಜೊತೆಗೆ ಇತರೆ ದುರಸ್ತಿ ಕಾರ್ಯಗಳನ್ನು ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಡಗು ಜಿಲ್ಲೆಯಲ್ಲಿ 20 ಕಡೆ ಭೂ ಕುಸಿತ ಆಗಿದೆ. ಬಹುತೇಕ ಕಡೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಭೂಮಿ ಜಾರಿದೆ. ಅದೃಷ್ಠವಶಾತ್ ಪ್ರಾಣ ಹಾನಿ ಆಗಿಲ್ಲ. ಹಲವರು ಗಾಯಗೊಂಡಿದ್ದಾರೆ.

67 ಮನೆಗಳು ಪೂರ್ಣಹಾನಿ ಆಗಿವೆ. 176 ಮನೆಗಳು ಭಾಗಶಃ ಹಾನಿ ಆಗಿವೆ. 24 ಗಂಟೆಗಳ ಒಳಗೆ ಪೂರ್ಣ ಮತ್ತು ಭಾಗಶಃ ಹಾನಿ ಆಗಿರುವ ಘಟನೆಗಳೂ ನಡೆದಿವೆ ಎಂದು ಅವರು ವಿವರಿಸಿದರು.
ಒಂದು ಲಕ್ಷದ 20 ಸಾವಿರ ರೂಪಾಯಿ ಜೊತೆಗೆ ಮನೆ ಕಟ್ಟಿ ಕೊಡಲಾಗುವುದು. ಭಾಗಶಃ ಹಾನಿ ಆಗಿರುವ ಮನೆಗಳಿಗೆ 50 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು. ಇದರಲ್ಲಿ 43 ಸಾವಿರ ರಾಜ್ಯ ಸರ್ಕಾರದ ಹಣ. ಈಗಾಗಲೇ ಸಂತ್ರಸ್ಥರ ಖಾತೆಗೆ ಹಣ ವರ್ಗಾವಣೆ ಆಗಿದೆ.
ಜಿಲ್ಲೆ ವ್ಯಾಪ್ತಿಯಲ್ಲಿ 16 ಜಾನವಾರು ಸತ್ತಿವೆ. ತಲಾ 35 ಸಾವಿರ ಪರಿಹಾರ ನೀಡಿದ್ದೇನೆ. 14 ಪರಿಹಾರ ಕ್ಯಾಂಪ್ ಗಳನ್ನು ತೆರೆಯಲಾಗಿದೆ. 10 ಕ್ಯಾಂಪ್ ಗಳಲ್ಲಿ 186 ಮಂದಿ ಇದ್ದಾರೆ. ತೋರಾ ಕ್ಯಾಂಪ್ ನಲ್ಲಿ ಇರುವವರ ಜೊತೆ ನಾನೇ ನೇರವಾಗಿ ಮಾತನಾಡಿದ್ದೇನೆ ಎಂದರು.
2,708 ವಿದ್ಯುತ್ ಕಂಬ ಧರೆಗೆ
28 ಹೆಕ್ಟೇರ್ ನಲ್ಲಿ ತೋಟಗಾರಿಕಾ ಬೆಳೆ ಹಾನಿಯಾಗಿದೆ. ಕಾಫಿ ಬೋರ್ಡ್ ಮತ್ತು ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ. 2,708 ವಿದ್ಯುತ್ ಕಂಬಗಳು ಬಿದ್ದು ಹೋಗಿವೆ. 150 ಬಿಟ್ಟು ಉಳಿದೆಲ್ಲಾವನ್ನೂ ಮತ್ತೆ ಅಳವಡಿಸಲಾಗಿದೆ. ಹಾಳಾಗಿದ್ದ 47 ಟ್ರಾನ್ಸ್ ಫಾರ್ಮರ್ ಗಳನ್ನೂ ಹೊಸದಾಗಿ ಅಳವಡಿಸಲಾಗಿದೆ ಎಂದು ಖುದ್ದು ಸಿದ್ದರಾಮಯ್ಯನವರೇ ಹಾನಿಯ ಲೆಕ್ಕ ಕೊಟ್ಟರು.
ಅತ್ಯಧಿಕ ಪ್ರಮಾಣದಲ್ಲಿ ರಸ್ತೆಗಳು ಹಾನಿ
344 ಕಿಮೀ ಉದ್ದದ ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ ರಸ್ತೆಗಳು ಹಾನಿ ಆಗಿವೆ. ಇವೆಲ್ಲವನ್ನೂ ಆದ್ಯತೆ ಮೇಲೆ ಸರಿಪಡಿಸಲು ಸೂಚಿಸಲಾಗಿದೆ. ಈ ಬಾರಿ ವಾಡಿಕೆಗಿಂತ ಶೇ50 ರಷ್ಟು ಹೆಚ್ಚು ಮಳೆಯಾಗಿದೆ. ಮುಂಜಾಗ್ರತಾ ಕ್ರಮಗಳ ಜೊತೆಗೆ ಅನಾಹುತದ ಬಳಿಕ ಪರಿಹಾರ ಕಾರ್ಯಗಳನ್ನು ತುರ್ತಾಗಿ ನಡೆಸಲಾಗುತ್ತಿದೆ.
ಭೂ ಕುಸಿತದ ದುರಸ್ತಿ ಕಾರ್ಯವನ್ನು ಡಿಸೆಂಬರ್ ಒಳಗೆ ಪೂರ್ಣಗೊಳಿಸಲು ಸ್ಪಷ್ಟ ಸೂಚನೆ ನೀಡಲಾಗಿದೆ. ಶಿರಾಡಿ ಘಾಟಿಗೆ ಭೇಟಿ ನೀಡಿ ಅನಾಹುತಗಳನ್ನು ಪರಿಶೀಲನೆ ನಡೆಸುತ್ತೇನೆ. ಭೂಕುಸಿತ ಪ್ರದೇಶಗಳಲ್ಲಿ ಶಾಶ್ವತ ಪರಿಹಾರಕ್ಕೆ ಜಿಎಸ್‌ಐ ವರದಿ ನೋಡಿ ನಂತರ ತೀರ್ಮಾನಿಸಲಾಗುವುದು.
ಮುಖ್ಯಮಂತ್ರಿ @siddaramaiah ಅವರು ಪೊನ್ನಂಪೇಟೆ ತಾಲ್ಲೂಕಿನ ಶ್ರೀಮಂಗಲ ಕುಟ್ಟದ ಗುಡ್ಡ ಕುಸಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ, ಬಳಿಕ ಅಧಿಕಾರಿಗಳು ಮತ್ತು ಸ್ಥಳೀಯರ ಜೊತೆ ಚರ್ಚಿಸಿದರು.
— CM of Karnataka (@CMofKarnataka) August 2, 2024
ಗುಡ್ಡ ಕುಸಿತದ ಪರಿಣಾಮ ಸುಮಾರು 20ಕ್ಕೂ ಹೆಚ್ಚು ಕುಟುಂಬಗಳು ಸಂಪರ್ಕ ಕಳೆದುಕೊಂಡಿದ್ದು, ತುರ್ತಾಗಿ ತೂಗು ಸೇತುವೆ, ರಸ್ತೆ ನಿರ್ಮಾಣದ ಜೊತೆಗೆ… pic.twitter.com/5ewn9zU228
ಜಿಲ್ಲಾ ಉಸ್ತುವಾರಿ ಸಚಿವರಾದ ಬೋಸ್ ರಾಜು, ಶಾಸಕರಾದ ಪೊನ್ನಣ್ಣ, ಮಂಥರ್ ಗೌಡ ಹಾಗೂ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications