ಕೊಡಗು: ಗುರುವಾರ ಬೆಳಗ್ಗೆ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ
ಮಡಿಕೇರಿ, ಅಕ್ಟೋಬರ್ 16: ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ತುಲಾ ಸಂಕ್ರಮಣ ಮತ್ತು ಕಾವೇರಿ ತೀರ್ಥೋದ್ಭವ-2024ಕ್ಕೆ ತಯಾರಿ ನಡೆದಿದೆ. ಅಕ್ಟೋಬರ್ 17ರ ಗುರುವಾರ ಬೆಳಗ್ಗೆ 7 ಗಂಟೆ 40 ನಿಮಿಷಕ್ಕೆ ಸಲ್ಲುವ ತುಲಾ ಲಗ್ನದಲ್ಲಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ನಡೆಯಲಿದ್ದು, ಇದನ್ನು ವೀಕ್ಷಿಸಲು ಸಾವಿರಾರು ಭಕ್ತರು ಆಗಮಿಸಲಿದ್ದಾರೆ. ಕೊಡಗು ಜಿಲ್ಲಾಡಳಿತ ತಲಕಾವೇರಿಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಭಕ್ತರಿಗೆ ತೊಂದರೆಯಾಗದಂತೆ ಕ್ರಮ ಕೈಗೊಂಡಿದೆ.
ನಾಡಿನ ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ನಡೆಯುವ ತುಲಾ ಸಂಕ್ರಮಣ ಮತ್ತು ಕಾವೇರಿ ತೀರ್ಥೋದ್ಭವಕ್ಕೆ ಕರ್ನಾಟಕ ಮಾತ್ರವಲ್ಲ ವಿವಿಧ ಜಿಲ್ಲೆ ಮತ್ತು ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ಈ ಬಾರಿ ಹಗಲು ಹೊತ್ತಿನಲ್ಲಿ ಕಾವೇರಿ ತೀರ್ಥೋದ್ಭವವಾಗಲಿದ್ದು, ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆ ಇದೆ.

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ವತಿಯಿಂದ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಗುರುವಾರ ಬೆಳಗ್ಗೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 7 ಗಂಟೆ 40 ನಿಮಿಷಕ್ಕೆ ಸಲ್ಲುವ ತುಲಾ ಲಗ್ನದಲ್ಲಿ ಶ್ರೀ ಮೂಲ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವದ ನೆರವೇರಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿದೆ.
ದೇವಾಲಯಕ್ಕೆ ಗುರುವಾರ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್. ಎಸ್. ಭೋಸರಾಜು, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ. ಎಸ್. ಪೊನ್ನಣ್ಣ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಡಾ. ಮಂತರ್ ಗೌಡ ಮುಂತಾದವರು ಆಗಮಿಸಲಿದ್ದಾರೆ.
ಜಿಲ್ಲಾಡಳಿತದಿಂದ ತಯಾರಿ: ಗುರುವಾರ ತುಲಾ ಸಂಕ್ರಮಣ ಜಾತ್ರೆಗೆ ಆಗಮಿಸುವ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಕೊಡಗು ಜಿಲ್ಲಾಡಳಿತ ಅಗತ್ಯ ಸೌಲಭ್ಯಗಳನ್ನು ಮಾಡಿಕೊಂಡಿದೆ. ಜಿಲ್ಲಾಧಿಕಾರಿ ವೆಂಕಟ್ ರಾಜಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಸಿದ್ಧತೆ ಪರಿಶೀಲನೆ ನಡೆಸಿದ್ದಾರೆ.
ಭಕ್ತರಿಗಾಗಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಮಡಿಕೇರಿ, ಭಾಗಮಂಡಲ, ತಲಕಾವೇರಿಗೆ ಹೋಗುವ ರಸ್ತೆ ಬದಿಯಲ್ಲಿ ರಸ್ತೆಗೆ ವಾಲಿದ್ದ ಮರಗಳನ್ನು ತೆರವುಗೊಳಿಸಿ, ಸುಗಮ ಸಾರಿಗೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ತಲಕಾವೇರಿ ಜಾತ್ರೆಯ ಹಿನ್ನೆಲೆಯಲ್ಲಿ ಭಾಗಮಂಡಲ-ತಲಕಾವೇರಿಗೆ ಹಾಗೂ ತಲಕಾವೇರಿಯಿಂದ-ಭಾಗಮಂಡಲಕ್ಕೆ 15 ಬಸ್‍ಗಳು ಓಡಾಡಲಿದ್ದು, ಭಕ್ತಾಧಿಗಳು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ ಎಂದು ಮಡಿಕೇರಿ ಕೆಎಸ್‍ಆರ್‌ಟಿಸಿ ಘಟಕದ ವ್ಯವಸ್ಥಾಪಕ ಮೆಹಬೂಬ್ ಅಲಿ ಹೇಳಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಈ ಬಾರಿ ಹೆಚ್ಚಿನ ಮಳೆಯಾಗಿರುವ ಹಿನ್ನೆಲೆ ರಸ್ತೆಗಳು ಹಾಳಾಗಿತ್ತು. ರಸ್ತೆ ಗುಂಡಿಯನ್ನು ಮುಚ್ಚುವ ಕಾರ್ಯ ಪೂರ್ಣಗೊಳಿಸಲಾಗಿದೆ. ಗುರುವಾರದ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆಯಿಂದ ಜಿಲ್ಲಾ ಮಟ್ಟದಲ್ಲಿ ಬಂದೋಬಸ್ತ್ ಮಾಡಲಾಗಿದ್ದು, ಅಗತ್ಯ ಪೊಲೀಸರನ್ನು ನಿಯೋಜಿಸಲಾಗಿದೆ.
ತಲಕಾವೇರಿ ತುಲಾ ಸಂಕ್ರಮಣ ತೀರ್ಥೋದ್ಭವ ಹಿನ್ನೆಲೆಯಲ್ಲಿ ದೇವಾಲಯದಲ್ಲ ವಿಶೇಷ ಪೂಜೆ, ತಾಯಿ ಕಾವೇರಿ ಮಾತೆಯ ಭಕ್ತಿಗೀತೆಗಳ ಗೀತಾ ಗಾಯನ ಕಾರ್ಯಕ್ರಮ ನಡೆಯಲಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಪೆಂಡಾಲ್ ನಿರ್ಮಾಣ ಮಾಡಲಾಗಿದೆ. ಭಕ್ತಾಧಿಗಳ ಪ್ರಸಾದ ವಿನಿಯೋಗಕ್ಕೆ ಅಗತ್ಯ ಸಿದ್ಧತೆಗಳು ನಡೆದಿವೆ.
ಮದ್ಯ ಮಾರಾಟ ನಿಷೇಧ: ತುಲಾ ಸಂಕ್ರಮಣ ಜಾತ್ರೆ ಹಿನ್ನಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಅಬಕಾರಿ ಕಾಯ್ದೆ 1965ರ ಕಲಂ 21ರಲ್ಲಿ ಪ್ರದತ್ತವಾಗಿರುವ ಅಧಿಕಾರದಂತೆ ಅಕ್ಟೋಬರ್, 16ರ ಬೆಳಗ್ಗೆ 6 ಗಂಟೆಯಿಂದ ಅಕ್ಟೋಬರ್, 17ರ ಮಧ್ಯರಾತ್ರಿ 12 ಗಂಟೆಯವರೆಗೆ ತಲಕಾವೇರಿ, ಭಾಗಮಂಡಲ ಮತ್ತು ಚೇರಂಬಾಣೆ ಗ್ರಾಮದ ಸುತ್ತಮುತ್ತ 20 ಕಿ. ಮೀ. ವ್ಯಾಪ್ತಿಯಲ್ಲಿರುವ ಎಲ್ಲಾ ರೀತಿಯ ಮದ್ಯದ ಅಂಗಡಿ, ಬಾರ್, ಹೊಟೇಲ್ ಮತ್ತು ಕ್ಲಬ್‍ಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಭಾಗಮಂಡಲದಲ್ಲಿರುವ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಪವಿತ್ರ ತೀರ್ಥೋದ್ಭವ ನಡೆಯಲಿದ್ದು, ಈ ಸಮಯದಲ್ಲಿ ದೇವಾಲಯಕ್ಕೆ ಬರುವ ಭಕ್ತಾಧಿಗಳು, ಯಾಥ್ರಾರ್ಥಿಗಳು ಶ್ರೀ ಕಾವೇರಿಯ ಪವಿತ್ರ ತೀರ್ಥವನ್ನು ಶೇಖರಿಸಿಕೊಂಡು ಹೋಗಲು ಪ್ಲಾಸ್ಟಿಕ್ ಬಿಂದಿಗೆ, ಪ್ಲಾಸ್ಟಿಕ್ ಬಾಟಲ್ ಮತ್ತು ಪ್ಲಾಸ್ಟಿಕ್ ಕ್ಯಾನ್‍ಗಳನ್ನು ಬಳಕೆ ಮಾಡುತ್ತಾರೆ.
ನಿಷೇಧಿತ ಪ್ಲಾಸ್ಟಿಕ್‍ಗಳನ್ನು ನಿರ್ಭಂದಿಸುವಂತೆ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ, ಬೆಂಗಳೂರು ಇವರ ಆದೇಶದದಲ್ಲಿ ಸೂಚಿಸಿದ್ದಾರೆ. ಆದ್ದರಿಂದ ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳು ಪವಿತ್ರ ತೀರ್ಥವನ್ನು ಶೇಖರಿಸಲು ಪ್ಲಾಸ್ಟಿಕ್ ಉತ್ಪನ್ನಗಳನ್ನು ಕಲ್ಯಾಣಿ ಮತ್ತು ಪವಿತ್ರ ಕುಂಡಿಕೆಯ ಬಳಿ ಬಳಸದಂತೆ ನಿರ್ಭಂದಿಸಲಾಗಿದೆ.












Click it and Unblock the Notifications