ಉತ್ತರ ಪ್ರದೇಶ ಚುನಾವಣೆ: ಬಬಿತಾ ಫೋಗಟ್ ವಿರುದ್ಧ ಎಫ್‌ಐಆರ್
ಬಾಘ್‌ಪತ್, ಜನವರಿ 25: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಗ, ಚುನಾವಣಾ ಆಯೋಗದ ಮಾರ್ಗಸೂಚಿಗಳು ಹಾಗೂ ಕೋವಿಡ್ ನಿಯಮಗಳನ್ನು ಮೀರಿರುವ ಕಾರಣ ಕುಸ್ತಿಪಟು ಬಬಿತಾ ಫೋಗಟ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ದೇಶದಲ್ಲಿ ಕೋವಿಡ್ ಪ್ರಕರಣಗಳು ಏರಿಕೆ ಮಟ್ಟದಲ್ಲಿರುವ ಕಾರಣ ಭಾರತೀಯ ಚುನಾವಣಾ ಆಯೋಗವು ರ‍್ಯಾಲಿ ಮತ್ತು ರೋಡ್ ಶೋಗಳ ಮೇಲಿನ ನಿಷೇಧವನ್ನು ಜನವರಿ 31ರವರೆಗೆ ವಿಸ್ತರಿಸಿ ಶನಿವಾರ ಆದೇಶಿಸಿತ್ತು. ಆದರೆ ಇದರ ಬೆನ್ನಲ್ಲೇ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಪ್ರಕರಣ ನಡೆದಿದೆ.
ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯು 7 ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದ ಮತದಾನವು ಫೆಬ್ರವರಿ 10, ಎರಡನೇ ಹಂತ ಫೆಬ್ರವರಿ 14, ಮೂರನೇ ಹಂತ ಫೆಬ್ರವರಿ 20, ನಾಲ್ಕನೇ ಹಂತ ಫೆಬ್ರವರಿ 23, ಐದನೇ ಹಂತ ಫೆಬ್ರವರಿ 27, ಮಾರ್ಚ್ 3ರಂದು ಆರನೇ ಹಂತ ಮತ್ತು ಮಾರ್ಚ್ 7ರಂದು ಏಳನೇ ಹಂತದ ಮತದಾನ ಇರಲಿದೆ.

ಬಬಿತಾ ಫೋಗಟ್ ಅವರು ಸೋಮವಾರ ಬಾಗ್‌ಪತ್‌ನ ಬರೌತ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೃಷ್ಣಪಾಲ್ ಎಸ್. ಮಲಿಕ್ ಪರ ಪ್ರಚಾರ ನಡೆಸಿದ್ದರು. ಈ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿದ ಫೋಗಟ್ ಹಾಗೂ ಇತರ 63 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತಕ್ಕೆ ಕಾಂಗ್ರೆಸ್ 30 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ.
ಈ ಪಟ್ಟಿಯಲ್ಲಿ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ಪಕ್ಷದ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಸಚಿನ್ ಪೈಲಟ್, ಅಶೋಕ್ ಗೆಹ್ಲೋಟ್, ಗುಲಾಂ ನಬಿ ಆಜಾದ್, ಭೂಪೇಶ್ ಬಘೇಲ್ ಮತ್ತು ಇತರ 18 ಪ್ರಮುಖ ನಾಯಕರ ಹೆಸರುಗಳಿವೆ.
ಇದಕ್ಕೂ ಮೊದಲು, ಭಾರತೀಯ ಜನತಾ ಪಕ್ಷ(ಬಿಜೆಪಿ) ಉತ್ತರ ಪ್ರದೇಶ ಚುನಾವಣೆಗಾಗಿ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಸೇರಿ ಒಟ್ಟು 27 ಮಂದಿ ಇದ್ದಾರೆ.
ಮನೇಕಾ ಮತ್ತು ವರುಣ್ ಗಾಂಧಿಯನ್ನು ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಹೊರಗಿಡಲಾಗಿದೆ. ಇಬ್ಬರೂ ಉತ್ತರ ಪ್ರದೇಶದ ಸುಲ್ತಾನ್‌ಪುರ ಮತ್ತು ಪಿಲಿಭಿತ್ ನಿಂದ ಹಲವು ಬಾರಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಇತ್ತೀಚೆಗಷ್ಟೇ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಿಂದಲೂ ಇಬ್ಬರನ್ನೂ ಕೈಬಿಡಲಾಗಿತ್ತು.
ರಕ್ಷಣಾ ಸಚಿವ, ರಾಜ್ಯಾಧ್ಯಕ್ಷ ರಾಜನಾಥ್ ಸಿಂಗ್, ಸ್ವತಂತ್ರ ದೇವ್ ಸಿಂಗ್, ಕೇಂದ್ರ ಸಚಿವರು, ಧರ್ಮೇಂದ್ರ ಪ್ರಧಾನ್, ಸ್ಮೃತಿ ಇರಾನಿ, ಮುಖ್ತಾರ್ ಅಬ್ಬಾಸ್ ನಖ್ವಿ, ದಿನೇಶ್ ಶರ್ಮಾ, ಕೇಶವ್ ಪ್ರಸಾದ್ ಮೌರ್ಯ ಸೇರಿದಂತೆ ಪಟ್ಟಿಯಲ್ಲಿರುವ ಇತರರು. ರಾಧಾ ಮೋಹನ್ ಸಿಂಗ್ ಮತ್ತು ಸಂಜೀವ್ ಬಲ್ಯಾನ್ ಕೂಡ ಪಟ್ಟಿಯಲ್ಲಿದ್ದಾರೆ.
ರಾಜಕೀಯವಾಗಿ ಅತ್ಯಂತ ಮಹತ್ವದ ರಾಜ್ಯಗಳಲ್ಲಿ ಒಂದಾಗಿರುವ ಉತ್ತರ ಪ್ರದೇಶದ ಎಲ್ಲಾ 403 ಕ್ಷೇತ್ರಗಳಿಗೆ ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ.
ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗೆ ಟಿಕೆಟ್ ಪಡೆಯುವುದಕ್ಕೆ ರಾಜಕಾರಣಿಗಳ ಕುಟುಂಬ ಸದಸ್ಯರಲ್ಲೇ ಪೈಪೋಟಿ ತೀವ್ರಗೊಳ್ಳುತ್ತಿದೆ. ಪತಿಯ ವಿರುದ್ಧ ಪತ್ನಿ, ಸಹೋದರರ ಪುತ್ರ/ಪುತ್ರಿಯರೇ ಒಬ್ಬರ ವಿರುದ್ಧ ಮತ್ತೊಬ್ಬರು ನಿಲ್ಲುತ್ತಿದ್ದಾರೆ.
ಈ ರೀತಿಯ ಸನ್ನಿವೇಶವಿರುವ ಹಲವು ವಿಧಾನಸಭಾ ಕ್ಷೇತ್ರಗಳ ಪೈಕಿ ಲಖನೌ ನಲ್ಲಿರುವ ಸರೋಜಿನಿ ನಗರ್ ವಿಧಾನಸಭಾ ಕ್ಷೇತ್ರವೂ ಒಂದು ಸಚಿವೆ ಸ್ವಾತಿ ಸಿಂಗ್ ಹಾಗೂ ಅವರ ಪತಿ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿರುವ ದಯಾಶಂಕರ್ ಸಿಂಗ್ ಇಬ್ಬರೂ ಟಿಕೆಟ್ ಪಡೆಯುವುದಕ್ಕೆ ತೀವ್ರ ಪೈಪೋಟಿ ನಡೆಸಿದ್ದಾರೆ.
ಇನ್ನು ಅಮೇತಿಯಲ್ಲಿ ಮಾಜಿ ಕಾಂಗ್ರೆಸ್ ನಾಯಕ ಸಂಜಯ್ ಸಿಂಗ್ ಅವರ ಇಬ್ಬರು ಪತ್ನಿಯರು ನಡುವೆ ಬಿಜೆಪಿ ಟಿಕೆಟ್ ಪಡೆಯುವುದಕ್ಕೆ ಭರ್ಜರಿ ಲಾಭಿ ನಡೆಸುತ್ತಿದ್ದಾರೆ.
ಗರಿಮಾ ಸಿಂಗ್ ಸಂಜಯ್ ಸಿಂಗ್ ಅವರ ಮೊದಲ ಪತ್ನಿಯಾಗಿದ್ದು ಅಮೇಥಿಯ ಹಾಲಿ ಬಿಜೆಪಿ ಶಾಸಕಿ. ಆದರೆ ಸಂಜಯ್ ಸಿಂಗ್ ಕಾಂಗ್ರೆಸ್ ನಿಂದ ಬಿಜೆಪಿಗೆ ಪಕ್ಷಾಂತರಗೊಳ್ಳುತ್ತಿದ್ದಂತೆಯೇ ಸಂಜಯ್ ಸಿಂಗ್ ಅವರ ಎರಡನೇ ಪತ್ನಿ ಅಮಿತಾ ಸಿಂಗ್ ಗರಿಮಾ ಸಿಂಗ್ ಅವರಿಗೆ ಸವಾಲಾಗಿ ಪರಿಣಮಿಸಿದರು. 2019 ರಲ್ಲಿ ಬಿಜೆಪಿಗೆ ಸೇರ್ಪಡೆಗೊಳ್ಳುವುದಕ್ಕೂ ಮುನ್ನ ಸಂಜಯ್ ಸಿಂಗ್ ರಾಜ್ಯಸಭೆ ಸ್ಥಾನವನ್ನು ತ್ಯಜಿಸಿದ್ದರು.
Recommended Video
ಈಗ ಸಂಜಯ್ ಸಿಂಗ್ ತಮ್ಮ ಎರಡನೇ ಪತ್ನಿ ಅಮಿತಾ ಸಿಂಗ್ ಗೆ ಅಮೇಥಿಯಿಂದ ಬಿಜೆಪಿ ಟಿಕೆಟ್ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನುತ್ತಿವೆ ಪಕ್ಷದ ಮೂಲಗಳು. ಸಂಜಯ್ ಸಿಂಗ್ 1995 ರಲ್ಲಿ ತಮ್ಮ ಮೊದಲ ಪತ್ನಿ ಗರಿಮಾ ಸಿಂಗ್ ಗೆ ವಿಚ್ಛೇದನ ನೀಡಿ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಅಮಿತಾ ಸಿಂಗ್ ಅವರನ್ನು ವಿವಾಹವಾಗಿದ್ದರು. 2017 ರಲ್ಲಿ ಅಮಿತಾ ಸಿಂಗ್ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದರು.












Click it and Unblock the Notifications