Tungabhadra Dam: ಮುರಿದ ತುಂಗಭದ್ರಾ ಡ್ಯಾಂ 19ನೇ ಗೇಟ್ ಚೈನ್ ಲಿಂಕ್, ಆತಂಕ
ಕೊಪ್ಪಳ, ಆಗಸ್ಟ್ 11: ಮಳೆಯ ಅಬ್ಬರಕ್ಕೆ ಭರ್ತಿಯಾಗಿರುವ ತುಂಗಭದ್ರಾ ಅಣೆಕಟ್ಟಿನ 19ನೇ ಗೇಟ್ ಚೈನ್ ಲಿಂಕ್ ಮುರಿದಿದೆ. ಅಪಾರ ಪ್ರಮಾಣದ ನೀರು ನದಿಗೆ ಹರಿದು ಹೋಗುತ್ತಿದ್ದು, ನದಿ ಪಾತ್ರದ ಜನರಿಗೆ ಆತಂಕ ಉಂಟಾಗಿದೆ. ಬೆಂಗಳೂರಿನಿಂದ ತಜ್ಞರ ತಂಡ ಕ್ರೆಸ್ಟ್ ಗೇಟ್ ದುರಸ್ತಿ ಕಾರ್ಯಕ್ಕಾಗಿ ಡ್ಯಾಂಗೆ ಭೇಟಿ ನೀಡಲಿದೆ.
ಕೊಪ್ಪಳ ತಾಲೂಕಿನ ಮುನಿರಾಬಾದ್‌ನಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ಡ್ಯಾಂ ನಿರ್ಮಾಣ ಮಾಡಲಾಗಿದೆ. ಶನಿವಾರ ಮಧ್ಯರಾತ್ರಿ ಡ್ಯಾಂನ ಕ್ರೆಸ್ಟ್ ಗೇಟ್ ನಂಬರ್ 19ರ ಚೈನ್ ಲಿಂಕ್ ಮುರಿದು ಹೋಗಿದೆ. ಒಂದೇ ಗೇಟ್ ಮೇಲೆ ಒತ್ತಡ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನದಿಗೆ ನೀರು ಹರಿದು ಹೋಗುತ್ತಿರುವ ವಿಡಿಯೋಗಳು ವೈರಲ್ ಆಗಿವೆ.

ಗೇಟ್ ಮುರಿದ ಪರಿಣಾಮ ನೀರು ನುಗ್ಗುತ್ತಿದ್ದು, ಡ್ಯಾಂನ ಹೊರ ಹರಿವು 70 ರಿಂದ 1 ಲಕ್ಷ ಕ್ಯುಸೆಕ್‌ಗೆ ಏರಿಕೆಯಾಗಿದೆ. ಪೂರ್ಣ ಭರ್ತಿಯಾಗಿರುವ ಡ್ಯಾಂ ಒಂದು ಕ್ರೆಸ್ಟ್ ಗೇಟ್‌ನ ಚೈನ್ ಲಿಂಕ್ ಮುರಿದಿದ್ದು, ತುಂಗಭದ್ರಾ ನದಿ ಪಾತ್ರದ ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ.
ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಡ್ಯಾಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 'ಇಂದು ಮಧ್ಯರಾತ್ರಿ ತುಂಗಭದ್ರಾ ನದಿಯ ಗೇಟ್ ನಂ. 19 ರ ಚೈನ್ ಲಿಂಕ್ ಕಟ್ ಆಗಿದ್ದರ ಸುದ್ದಿ ತಿಳಿದ ತಕ್ಷಣದಲ್ಲಿ ಡ್ಯಾಮ್ ಗೆ ಭೇಟಿ ನೀಡಿ ವೀಕ್ಷಿಸಿ, ಸಚಿವರೊಂದಿಗೆ ಹಾಗೂ ಜಲಸಂಪನ್ಮೂಲ ಇಲಾಖೆಯ ಮುಖ್ಯಕಾರ್ಯದರ್ಶಿಗಳಿಗೆ ದೂರವಾಣಿ ಕರೆಯ ಮೂಲಕ ಮಾತನಾಡಿ ಗೇಟ್ ನಂ. 19 ರಿಂದಲೇ ಸರಿಸುಮಾರು 35,000 ಕ್ಯೂಸೆಕ್‌ಗಿಂತಲೂ ಹೆಚ್ಚು ನೀರು ಹರಿಯುತ್ತಿದ್ದೂ ನೀರಿನ ವ್ಯರ್ಥ ಪೋಲು ತಡೆಗಟ್ಟಲು ವಿಶೇಷವಾದ ತಂಡ ಕರೆಯಿಸುವಂತೆ ಸೂಚಿಸಿದೆ. ಬಹಳ ದೊಡ್ಡ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದೂ ನದಿಯ ಅಕ್ಕ-ಪಕ್ಕ ಇರುವ ಗ್ರಾಮಗಳ ಸಾರ್ವಜನಿಕರು ಜಾಗರೂಕತೆಯಿಂದ ಇರಬೇಕು ಎಂದು ಮನವಿ ಮಾಡುತ್ತೇನೆ' ಎಂದು ಫೇಸ್‌ಬುಕ್ ಪೋಸ್ಟ್ ಹಾಕಿದ್ದಾರೆ.
ಅಧೀಕ್ಷಕ ಇಂಜಿನಿಯರ್ ಮಾಹಿತಿ: ತುಂಗಭದ್ರಾ ಡ್ಯಾಂ ಕ್ರೆಸ್ಟ್ ಗೇಟ್ ನಂಬರ್ 19ರ ಚೈನ್ ಲಿಂಕ್ ಮುರಿದಿರುವ ಕುರಿತು ಕರ್ನಾಟಕ ನೀರಾವರಿ ನಿಗಮದ ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಇಂಜಿನಿಯರ್ ಎಲ್. ಬಸವರಾಜ್ ಪ್ರತಿಕ್ರಿಯೆ ನೀಡಿದ್ದಾರೆ, "ಗೇಟ್ ಸಂಖ್ಯೆ 19ರ ಚೈನ್ ಲಿಂಕ್ ತುಂಡಾಗಿದೆ. ಅದನ್ನು ಸರಿಪಡಿಸಲು ಭಾನುವಾರ ಬೆಳಗ್ಗೆಯೇ ಬೆಂಗಳೂರಿನಿಂದ ತಜ್ಞರ ತಂಡ ಆಗಮಿಸಲಿದೆ" ಎಂದು ಹೇಳಿದ್ದಾರೆ.
"ಚೈನ್ ಲಿಂಕ್ ಕಟ್ ಆಗಿರುವ ಕಾರಣ ನೀರಿನ ಹರಿವು ಒಂದೇ ಕಡೆ ಹೆಚ್ಚಾಗಿದೆ. ಆ ಗೇಟ್ ಮೇಲಿನ ಒತ್ತಡ ಕಡಿಮೆ ಮಾಡಲು, ಉಳಿದ ಗೇಟ್‌ಗಳ ಮೂಲಕವೂ ನೀರು ಹರಿಸಲಾಗುತ್ತಿದೆ. ತಜ್ಞರ ತಂಡ ಪರಿಶೀಲನೆ ನಡೆಸಿ, ಮುಂದಿನ ಕ್ರಮವನ್ನು ಕೈಗೊಳ್ಳಲಿದೆ" ಎಂದು ತಿಳಿಸಿದ್ದಾರೆ.
"ಡ್ಯಾಂ ಸುರಕ್ಷತೆಗೆ ಯಾವುದೇ ಸಮಸ್ಯೆ ಇಲ್ಲ. ಜನರು ಆತಂಕಗೊಳ್ಳುವ ಅಗತ್ಯವೂ ಇಲ್ಲ. ಪ್ರತಿ ವರ್ಷ ಗೇಟ್‌ಗಳ ನಿರ್ವಹಣೆ ಮಾಡಲಾಗುತ್ತದೆ. ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿನ ಸಂಗ್ರಹವಿದೆ. ನೀರು ವ್ಯರ್ಥವಾಗಿ ನದಿಗೆ ಹರಿದು ಹೋಗುವುದು ತಪ್ಪಿಸಲು ತಜ್ಞರು ಆಗಮಿಸಿದ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ" ಎಂದರು.
ತುಂಗಭದ್ರಾ ಡ್ಯಾಂನ ಪೂರ್ಣ ಮಟ್ಟ 1633 ಅಡಿಗಳು. ಸದ್ಯದ ಮಾಹಿತಿಯಂತೆ ಡ್ಯಾಂನಲ್ಲಿ 1632 ಅಡಿಗಳ ನೀರಿನ ಸಂಗ್ರಹವಿದೆ. 105 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಇರುವ ಡ್ಯಾಂನಲ್ಲಿ 10 ಟಿಎಂಸಿ ಅಡಿ ನೀರಿದೆ. ಡ್ಯಾಂಗೆ ಒಳಹರಿವು 45,086 ಕ್ಯುಸೆಕ್ ಆಗಿದೆ.
ಕೊಪ್ಪಳ-ಹೊಸಪೇಟೆ ಗಡಿಭಾಗದಲ್ಲಿರುವ ಡ್ಯಾಂ ಕರ್ನಾಟಕದ ವಿವಿಧ ಜಿಲ್ಲೆಗಳು, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಕ್ಕೆ ಜೀವನಾಡಿಯಾಗಿದೆ. ಮಲೆನಾಡು ಭಾಗದಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ತುಂಗ ಮತ್ತು ಭದ್ರಾ ನದಿಗಳು ಮೈದುಂಬಿ ಹರಿದಿವೆ. ಆದ್ದರಿಂದ ಡ್ಯಾಂ ಜುಲೈನಲ್ಲಿಯೇ ಸಂಪೂರ್ಣ ಭರ್ತಿಯಾಗಿದೆ.











Click it and Unblock the Notifications